Advertisement

ಬಿಸಿಯೂಟಕ್ಕೆ ಹಳೆ ದಾಸ್ತಾನು ಬಳಕೆ: ಅಕ್ಕಿ ,ಬೇಳೆಗಳಲ್ಲಿ ಹುಳುಹುಪ್ಪಟೆ! 

12:20 AM Jun 03, 2022 | Team Udayavani |

ಬೆಳ್ತಂಗಡಿ: ಶಾಲೆಗಳು ಆರಂಭವಾಗಿ ಹಲವು ದಿನಗಳು ಕಳೆದಿವೆ. ಕೆಲವು ಶಾಲೆಗಳಲ್ಲಿ ಮಾರ್ಚ್‌ನಲ್ಲಿ ಬಂದಿರುವ ಬಿಸಿಯೂಟದ ಅಕ್ಕಿ ಮತ್ತು ಬೇಳೆಕಾಳುಗಳ ದಾಸ್ತಾನು ಇದ್ದು, ನಿರ್ವಹಣೆ ಕೊರತೆಯಿಂದ ಗುಣಮಟ್ಟ ಕುಸಿದು ಹುಳು-ಹುಪ್ಪಟೆ ಉಂಟಾಗಿವೆ. ಮಕ್ಕಳು ಅದನ್ನೇ ಉಣ್ಣಬೇಕಾದ ಅಥವಾ ಮನೆಯಿಂದಲೇ ಬುತ್ತಿಯೂಟ ಕೊಂಡೊಯ್ಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ನಿಡ್ಲೆ ಸಹಿತ ಕೆಲವು ಶಾಲೆಗಳಲ್ಲಿ ಇಂಥ ಘಟನೆ ವರದಿಯಾಗಿದೆ. ಈ ಕುರಿತು ಹೆತ್ತವರು ಇಲಾಖೆಗೆ ಮಾಹಿತಿ ನೀಡಿರುವುದಲ್ಲದೆ, ಗುಣಮಟ್ಟದ ಆಹಾರ ಧಾನ್ಯ ಪೂರೈಸುವಂತೆ ಆಗ್ರಹಿಸಿದ್ದಾರೆ.

ಶಿಕ್ಷಕರು ಹೇಳುವಂತೆ ಮಾರ್ಚ್‌ನಲ್ಲಿ ಕೆಲವು ಶಾಲೆಗಳಿಗೆ ನಿಗದಿಗಿಂತ ಹೆಚ್ಚು ಸಾಮಗ್ರಿ ಬಂದಿತ್ತು. ಎ. 10ರಿಂದ ಮೇ 16ರ ತನಕ ರಜೆಯಿದ್ದ ಕಾರಣ ಒಂದು ತಿಂಗಳು ಸೂಕ್ತ ನಿರ್ವಹಣೆ ಇಲ್ಲದೆ ತೇವಾಂಶ ಸೇರಿ ಹುಳುಹುಪ್ಪಟೆಯಾಗಿರುವ ಸಾಧ್ಯತೆ ಇದೆ. ಇದರ ನಿರ್ವಹಣೆಯ ಜವಾಬ್ದಾರಿ ಎಸ್‌ಡಿಎಂಸಿಯದು; ಆದರೆ ಈಗ ಅಡುಗೆ ಸಿಬಂದಿಯ ನಿರ್ಲಕ್ಷ್ಯ ಎಂಬಂತೆ ಬಿಂಬಿಸಲಾಗುತ್ತಿದೆ. ಅಡುಗೆ ಸಿಬಂದಿ ಇಬ್ಬರೇ ಇದ್ದು, ಅವರಿಂದ ನಿರ್ವಹಣೆ ಕಷ್ಟಸಾಧ್ಯ ಎಂದು ಅಳಲು ತೋಡಿಕೊಂಡಿದ್ದಾರೆ.

ಗುಣಮಟ್ಟವೇ ಕಳಪೆ :

ಕೆಲವು ಶಾಲೆಗಳಿಗೆ ಮಾರ್ಚ್‌ನಲ್ಲಿ ಪೂರೈಕೆಯಾಗಿರುವ ಬೇಳೆಕಾಳು ಕಳಪೆ ಗುಣಮಟ್ಟದ್ದು ಎಂಬ ಆರೋಪವೂ ಇದೆ. ಈ ಕುರಿತು ತಾಲೂಕು ಅಧಿಕಾರಿಗಳ ಗಮನಕ್ಕೆ ತಂದರೆ ಹಾರಿಕೆಯ ಉತ್ತರ ನೀಡುತ್ತಾರೆ. ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಯಾರು ಹೊಣೆ ಎಂಬುದು ಹೆತ್ತವರ ಆತಂಕ.

Advertisement

ಕುಚ್ಚಲು ಅಕ್ಕಿಗೆ ಬೇಡಿಕೆ :

ಪ್ರಸಕ್ತ 1ರಿಂದ 5ನೇ ತರಗತಿಯ ಪ್ರತೀ ಮಗುವಿಗೆ ತಲಾ 100 ಗ್ರಾಂ, 6ರಿಂದ 8ನೇ ತರಗತಿಯ ಮಗುವಿಗೆ 150 ಗ್ರಾಂನಂತೆ ಸಾರಭರಿತ ಬೆಳ್ತಿಗೆ ಅಕ್ಕಿ ಹಾಗೂ ಅದಕ್ಕನುಗುಣವಾಗಿ ಬೇಳೆ, ಎಣ್ಣೆ, ಉಪ್ಪು, ತರಕಾರಿಗಳನ್ನು ಪೂರೈಸಲಾಗುತ್ತಿದೆ. ಕರಾವಳಿ ಜಿಲ್ಲೆಗಳಿಗೆ ಕುಚ್ಚಲು ಅಕ್ಕಿ ಒದಗಿಸಬೇಕೆಂಬ ಬೇಡಿಕೆ ಇದೆ. ಆದರೆ ದಾಸ್ತಾನು ಖಾಲಿಯಾಗುವವರೆಗೆ ಮಕ್ಕಳು ಕಳಪೆ ಆಹಾರ ಪದಾರ್ಥವನ್ನೇ ಸೇವಿಸುವಂತಾಗಿದೆ.

ಹಳೆಯ ದಾಸ್ತಾನು ಉಳಿದಿರುವುದ ರಿಂದ ಕೆಲವೆಡೆ ಇಂಥ ಸಮಸ್ಯೆ ಆಗಿರಬ ಹುದು. ಈ ಬಾರಿ ಜಿಲ್ಲೆಗೆ 300 ಮೆಟ್ರಿಕ್‌ ಟನ್‌ ಕುಚ್ಚಲು ಅಕ್ಕಿ ಬಂದಿದ್ದು, ಈಗಾಗಲೇ ಟೆಂಡರ್‌ ಕರೆಯಲಾಗಿದೆ. ವಾರದೊಳಗೆ ಎಲ್ಲ ಶಾಲೆಗಳಿಗೆ ವಿತರಿಸಲಾಗುವುದು. ಎಲ್ಲ ತಾಲೂಕುಗಳ ಶಾಲೆಗಳಲ್ಲಿರುವ ದಾಸ್ತಾನನ್ನು ಪರಿಶೀಲಿಸುವಂತೆ ಕ್ರಮ ಕೈಗೊಳ್ಳಲಾಗುವುದು. – ಉಷಾ ಎನ್‌. ಶಿಕ್ಷಣಾಧಿಕಾರಿ,  ಅಕ್ಷರ ದಾಸೋಹ. ದ.ಕ. ಜಿ.ಪಂ.

 ಬಿಸಿಯೂಟದಲ್ಲಿ ಹುಳು ಸಿಗುವುದರಿಂದ ಮಕ್ಕಳು ಊಟ ಮಾಡಲು ಹಿಂಜರಿಯುತ್ತಿದ್ದಾರೆ. ತತ್‌ಕ್ಷಣ ಉತ್ತಮ ಗುಣಮಟ್ಟದ ಆಹಾರ ಪದಾರ್ಥ ಪೂರೈಸಬೇಕು. – ಪ್ರಕಾಶ್‌ ನಿಡ್ಲೆ, ಹೆತ್ತವರು

 

– ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next