Advertisement

ಬಿಸಿಯೂಟ ತಯಾರಕರ ಧರಣಿ

10:02 AM Aug 04, 2019 | Suhan S |

ದಾವಣಗೆರೆ: ಕನಿಷ್ಟ ವೇತನ ಜಾರಿ, ಕೆಲಸದ ಭದ್ರತೆ ಸೇರಿ ವಿವಿಧ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಬಿಸಿಯೂಟ ತಯಾರಕರು ಶನಿವಾರ ನಗರದಲ್ಲಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟಿಸಿದರು.

Advertisement

ನಗರದ ಜಯದೇವ ವೃತ್ತದಲ್ಲಿ ಬೆಳಗ್ಗೆ ಸೇರಿದ್ದ ಬಿಸಿಯೂಟ ತಯಾರಕರು, ಸೌಲಭ್ಯಕ್ಕಾಗಿ ಪ್ರತಿಭಟಿಸಿ, ನಂತರ ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ, ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಕೆಗೂ ಮುನ್ನ ಪ್ರತಿಭಟನಾಕಾರನ್ನುದ್ದೇಶಿಸಿ ಜಯದೇವ ವೃತ್ತದಲ್ಲಿ ಮಾತನಾಡಿದ ಎಐಟಿಯುಸಿ ರಾಜ್ಯ ಗೌರವಾಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ, ಕಳೆದ 17 ವರ್ಷಗಳಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಸಾವಿರಾರು ಮಹಿಳೆಯರು ಯಾವುದೇ ಸೌಲಭ್ಯಗಳಿಲ್ಲದೆ ಅಡುಗೆ ತಯಾರಿ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡೂ ಸೇರಿ ಕೊಡುವ ಗೌರವ ಸಂಭಾವನೆ ಅತ್ಯಂತ ಕಡಿಮೆಯಾಗಿದೆ. ಬಿಸಿಯೂಟ ತಯಾರಕರು ಜೀವನ ಸಾಗಿಸಲು ಕನಿಷ್ಟ ಸೌಲಭ್ಯ ಕಲ್ಪಿಸಬೇಕು ಎಂದು ಎಂದು ಆಗ್ರಹಿಸಿದರು.

ಬಿಸಿಯೂಟ ತಯಾರಕರಿಗೆ ಕನಿಷ್ಟ ವೇತನ, ಕೆಲಸದ ಭದ್ರತೆ, ಬಿಸಿಯೂಟ ತಯಾರಿ ಖಾಸಗಿ ಸಂಸ್ಥೆಗಳಿಗೆ ನೀಡುವ ನಿರ್ಧಾರ ಹಿಂಪಡೆಯುವುದು, ಬಿಸಿಯೂಟ ತಯಾರಕನ್ನು ಶಾಲಾ ಸಿಬ್ಬಂದಿ ಎಂಬುದಾಗಿ ಪರಿಗಣನೆ, ಪ್ರತಿ ತಿಂಗಳು 5ನೇ ತಾರೀಕಿನಂದು ಗೌರವ ಧನ ಪಾವತಿ, ಭವಿಷ್ಯ ನಿಧಿ, ಇಎಸ್‌ಐ ಸೌಲಭ್ಯ, ಅಪಘಾತಕ್ಕೆ 2 ಲಕ್ಷ ಹಾಗೂ ಮರಣ ಹೊಂದಿದರೆ 5 ಲಕ್ಷ ರೂ. ಪರಿಹಾರ, ದಸರಾ ಹಾಗೂ ಬೇಸಿಗೆ ರಜೆ ವೇಳೆ ವೇತನ ನೀಡುವುದು. ನಿವೃತ್ತಿ ನಂತರ ಮಾಸಿಕ 3 ಸಾವಿರ ರೂ. ಪಿಂಚಣಿ ಹಾಗೂ 2 ಲಕ್ಷ ರೂ. ಇಡುಗಂಟು ಕೊಡುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಸಲು ಸರ್ಕಾರಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.

ರಾಜ್ಯ ಖಜಾಂಚಿ ರುದ್ರಮ್ಮ, ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್‌ ಬಾಷಾ, ಜ್ಯೋತಿಲಕ್ಷ್ಮಿ, ಪ್ರಮೀಳಾ ಹರಿಹರ, ಚೆನ್ನಮ್ಮ ಇತರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next