ಬೆಂಗಳೂರು: ಕೋವಿಡ್ 19 ಪರಿಸ್ಥಿತಿ ನಡುವೆ ಶೈಕ್ಷಣಿಕ ವರ್ಷ ಆರಂಭವಾದರೂ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸಿಗುವುದು ಅನುಮಾನ! ಸಾಮಾಜಿಕ ಅಂತರ, ಮಾಸ್ಕ್ , ಶುಚಿತ್ವ ಮೊದಲಾದ ಸುರಕ್ಷತೆಯ ಕಾರಣಕ್ಕಾಗಿ ಬಿಸಿಯೂಟದ ಬದಲಿಗೆ ಅಕ್ಕಿ, ಮತ್ತು ಬೇಳೆಯನ್ನು ಮಕ್ಕಳ ಮನೆಗೆ ನೀಡುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಗಂಭೀರ ಚಿಂತನೆ ನಡೆಸುತ್ತಿದೆ.
ಲಾಕ್‌ಡೌನ್ ಅವಧಿಯಲ್ಲಿ ಶಾಲೆಗಳಲ್ಲಿ ಬಿಸಿಯೂಟ ನೀಡುವುದನ್ನು ನಿಲ್ಲಿಸಿ, ಅಕ್ಕಿ ಮತ್ತು ಬೇಳೆಯನ್ನು ನೇರವಾಗಿ ಮಕ್ಕಳ ಪಾಲಕರಿಗೆ ವಿತರಣೆ ಮಾಡಲಾಗಿದೆ. ಹಾಗೆಯೇ ಬೇಸಿಗೆ ರಜಾ ಅವಧಿಯ ಬಿಸಿಯೂಟದ ಸಾಮಗ್ರಿಯನ್ನು ವಿದ್ಯಾರ್ಥಿಗಳ ಪಾಲಕರಿಗೆ ನೀಡುವ ಬಗ್ಗೆಯೂ ನಿರ್ಧಾರದ ಹಂತದಲ್ಲಿದೆ. ಮುಂದಿನ ಶೈಕ್ಷಣಿಕ ವರ್ಷ ಆರಂಭವಾದ ನಂತರ ಅನೇಕ ರೀತಿಯ ನಿಯಮಗಳನ್ನು ಶಾಲೆಗಳಲ್ಲಿ ಪಾಲಿಸುವ ಅಗತ್ಯವಿದೆ.
ಅವುಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಶುಚಿತ್ವ ಇತ್ಯಾದಿ ಪಾಲಿಸಲೇ ಬೇಕಾಗುತ್ತದೆ. ಶಾಲೆಗಳಲ್ಲಿ ಬಿಸಿಯೂಟ ಸಿದಟಛಿಪಡಿಸುವುದು, ಬಡಿಸುವುದು, ಊಟದ ಸಂದರ್ಭದಲ್ಲಿ ಶುಚಿತ್ವ, ಕೈ ತೊಳೆಯುವುದು ಸೇರಿದಂತೆ ಎಲ್ಲ ಅಂಶಗಳನ್ನು ಗಮನಿಸಿಕೊಂಡು ಬಂದಿದ್ದರೂ, ಮುಂದೆ ಇನ್ನಷ್ಟು ಜಾಗೃತಿಯನ್ನು ಶಾಲೆಗಳೇ ವಹಿಸಬೇಕಿರುವುದರಿಂದ ಬಿಸಿಯೂಟ ವ್ಯವಸ್ಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಲು ಅಧಿಕಾರಿಗಳ ಹಂತದಲ್ಲಿ ಚಿಂತನೆ ನಡೆಯುತ್ತಿದೆ.
ಪಡಿತರವನ್ನೇ ನೀಡುವ ಬಗ್ಗೆಯೂ ಯೋಚನೆಯಿದೆ. ಆದರೆ ಮಧ್ಯಾಹ್ನ ಮಕ್ಕಳು ಮನೆಗೆ ಹೋಗಿ ಬರುವುದು ಕಷ್ಟ. ಅಲ್ಲದೆ, ಮನೆಯಿಂದ ತರುವ ಬುತ್ತಿಬಗ್ಗೆಯೂ ಎಚ್ಚರ ವಹಿಸುವ ಅಗತ್ಯ ಇರುತ್ತದೆ. ಆದರೆ, ಈವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಅದಮ್ಯ ಚೇತನ, ಅಕ್ಷರ ಫೌಂಡೇಷನ್ ಸಹಿತವಾಗಿ ಕೆಲವು ಎನ್‌ಜಿಒಗಳು ಮಧ್ಯಾಹ್ನದ ಬಿಸಿಯೂಟ ಒದಗಿಸುತ್ತಿವೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿಸಿಯೂಟ ವಿಭಾಗದಿಂದಲೂ ಈ ವ್ಯವಸ್ಥೆಯಾಗುತ್ತಿದೆ. ಲಾಕ್‌ಡೌನ್ ಅವಧಿಯಲ್ಲಿ ಎನ್ ಜಿಒ ಸಹಿತವಾಗಿ ಇಲಾಖೆ ಕೂಡ ಪಡಿತರವನ್ನೇ ನೇರವಾಗಿ ಪಾಲಕರಿಗೆ ನೀಡಿವೆ. ಅದೇ ಮಾದರಿಯನ್ನು ಇನ್ನಷ್ಟು ತಿಂಗಳು ಮುಂದುವರಿಸುವ ಬಗ್ಗೆ ಯೋಚನೆ ನಡೆದಿದೆ. ಆದರೆ, ಸರ್ಕಾರದಿಂದ ಯಾವ ರೀತಿಯ ಅನುಮೋದನೆ ಸಿಗುತ್ತದೆ ಎನ್ನುವ ಆಧಾರದಲ್ಲಿ ಇದೆಲ್ಲ ನಿರ್ಧಾರವಾಗಲಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
ಕ್ಷೀರಭಾಗ್ಯ ಹೇಗೆ?: ಲಾಕ್‌ಡೌನ್ ಅವಧಿಯಲ್ಲಿ ಶಾಲಾ ಮಕ್ಕಳಿಗೆ ಹಾಲಿನ ಬದಲಿಗೆ ಹಾಲಿನ ಪುಡಿ ವಿತರಣೆ ಮಾಡಿಲ್ಲ. ಶಾಲೆ ಆರಂಭದ ನಂತರವೂ ಹಾಲು ವಿತರಣೆ ಹೇಗೆ ಎಂಬ ಪ್ರಶ್ನೆ ಅಧಿಕಾರಿಗಳನ್ನು ಕಾಡುತ್ತಿದೆ. ಸುಮಾರು 50 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಹಾಗೂ ಕ್ಷೀರಭಾಗ್ಯ ಸರ್ಕಾರದಿಂದ ಸಿಗುತ್ತಿತ್ತು. ಮುಂದೆ ಇದರ ಸ್ವರೂಪ ಹೇಗಿರಲಿದೆ ಎಂಬುದೂ ತಿಳಿದಿಲ್ಲ. ಸರ್ಕಾರದ ಸೂಚನೆಯಂತೆ ಮುನ್ನಡೆಯಲಿದ್ದೇವೆ. ಈ ಬಗ್ಗೆ ಅಧಿಕಾರಿಗಳ ಹಂತದಲ್ಲಿ ಸಭೆ ಕೂಡ ನಡೆದಿದೆ ಎಂದು ಬಿಸಿಯೂಟ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಶೈಕ್ಷಣಿಕ ವರ್ಷ ಆರಂಭದ ನಂತರ ಬಿಸಿಯೂಟ ವ್ಯವಸ್ಥೆ ಹೇಗೆ ಎಂಬುದರ ಬಗ್ಗೆ ಚಿಂತನೆ ನಡೆಯುತ್ತದೆ. ಸರ್ಕಾರದ ಹಂತದಲ್ಲಿ ಈ ಬಗ್ಗೆ ತೆಗೆದುಕೊಳ್ಳುವ ನಿರ್ಧಾರ ಮತ್ತು ಆರೋಗ್ಯ ಇಲಾಖೆಯಿಂದ ಬರುವ ಮಾರ್ಗಸೂಚಿ ಆಧರಿಸಿ, ಮುಂದುವರಿಯಲಿದ್ದೇವೆ.
-ಎಚ್. ಮಂಜುನಾಥ್, ಸಹಾಯಕ ನಿರ್ದೇಶಕ, ಮಧ್ಯಾಹ್ನ ಉಪಹಾರ ಯೋಜನೆ
* ರಾಜು ಖಾರ್ವಿ ಕೊಡೇರಿ