Advertisement

ಬಿಸಿ ತುಪ್ಪವಾದ ಆರ್‌ಟಿಇ ಸೌಲಭ್ಯ!

11:09 AM Mar 17, 2019 | |

ಔರಾದ: ಬಡ ಹಾಗೂ ಗ್ರಾಮೀಣ ಭಾಗದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವರದಾನವಾಗಿದ್ದ ಉಚಿತ ಶಿಕ್ಷಣ ಸೌಲಭ್ಯ ಆರ್‌ಟಿಇ ಪ್ರಸಕ್ತ ಸಾಲಿನಲ್ಲಿ ತಾಲೂಕಿನ ಬಡ ವಿದ್ಯಾರ್ಥಿಗಳಿಗೆ ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

Advertisement

2011-12ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಆರಂಭಿಸಿದ ಆರ್‌ಟಿಇ ಯೋಜನೆಯನ್ನು ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ ತಿದ್ದುಪಡಿ ಮಾಡಿ, ಬಡ ಮಕ್ಕಳನ್ನು ಕಾನ್ವೆಂಟ್‌ ಶಿಕ್ಷಣದಿಂದ ವಂಚಿರನ್ನಾಗಿಸಲು ಮುಂದಾಗುತ್ತಿದೆ. ಅದಲ್ಲದೇ ತಮ್ಮ ಮಕ್ಕಳನ್ನು ಕಾನ್ವೆಂಟ್‌ನಲ್ಲಿ ಓದಿಸಬೇಕೆಂಬ ಪಾಲಕರ ಕನಸಿಗೆ ಅಡ್ಡಿಯಾಗಲಿದೆ. 

ಯೋಜನೆಯ ತಿದ್ದುಪಡಿ ಏನು?: ಮೈತ್ರಿ ಸರ್ಕಾರ 2019-20ನೇ ಸಾಲಿನ ಪ್ರಾಥಮಿಕ ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ 4-8 ತಿದ್ದುಪಡಿ ಮಾಡಿದೆ. ಶಿಕ್ಷಣ ಕಾಯ್ದೆ12(1)ಸಿ ಅಡಿ ತಿದ್ದುಪಡಿ ಪ್ರಕಾರ ನಗರ ಪ್ರದೇಶಗಳಲ್ಲಿ ವಾರ್ಡ್‌ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಶಾಲೆಗಳು ಇದ್ದರೆ ಅಂತಹ ಶಾಲೆಗಳನ್ನು ಗುರುತಿಸುವಂತಿಲ್ಲ ಎಂದು ಆದೇಶ ಮಾಡಿದೆ. ಅದರಂತೆ ಇಲಾಖೆಯಿಂದ ಈ ಹಿಂದೆ ನಡೆದ ಸರ್ವೇಯಲ್ಲಿ ಗೊಂದಲವಿದೆ. ಇನ್ನೊಮ್ಮೆ ಸರ್ವೇ ಮಾಡುವಂತೆ ಸರ್ಕಾರ ಸೂಚನೆ ನೀಡಿದೆ.

ಸರ್ಕಾರದ ಈ ನೂತನ ತಿದ್ದುಪಡಿಯ ಪ್ರಕಾರ ಔರಾದ ಹಾಗೂ ಕಮಲನಗರ ತಾಲೂಕಿನಲ್ಲಿರುವ ಒಂದೇ ಒಂದು ಶಾಲೆಯಲ್ಲಿ ಬಡ ಮಕ್ಕಳು ಉಚಿತವಾಗಿ ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ಸರ್ಕಾರಿ ಹಾಗೂ ಅನುದಾನಿತ ಶಾಲೆಯಿಂದ ಒಂದು ಕಿ.ಮೀ. ದೂರದಲ್ಲಿರುವ ಶಾಲೆಯಲ್ಲಿ ಮಕ್ಕಳು ಪ್ರವೇಶ ಪಡೆದುಕೊಳ್ಳುವಂತೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಒಂದು ಕಿ.ಮೀ. ಕೂಡ ವಿಸ್ತೀರ್ಣವಿಲ್ಲದ ಔರಾದ್‌ನ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದು ಖಚಿತವಾಗಿದೆ.
 
ಗಡಿ ತಾಲೂಕಿನ ಮಕ್ಕಳು ಪ್ರತಿ ವರ್ಷ ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ಅರ್ಜಿ ಸಲ್ಲಿಸಲು ಸರ್ಕಾರ ಆದೇಶ ನೀಡುತ್ತಿತ್ತು. ಅದರಂತೆ ಪ್ರಸಕ್ತ ಸಾಲಿನಲ್ಲಿ ತಾಲೂಕು ಹೊರತುಪಡಿಸಿ ಇನ್ನೂಳಿದ ನಗರ ಪ್ರದೇಶಗಳಲ್ಲಿ ಈಗಾಗಲೆ ಆನ್‌ಲೈನ್‌ ಅರ್ಜಿ ಪ್ರವೇಶ ಪ್ರಾರಂಭವಾಗಿದೆ.

ಆದರೆ ಕಂಪ್ಯೂಟರ್‌ನಲ್ಲಿ ತಾಲೂಕಿನ ಒಂದು ಶಾಲೆಯ ಹೆಸರೂ ತೋರಿಸುತ್ತಿಲ್ಲ ಎನ್ನುವುದು ಖಾಸಗಿ ಶಾಲೆ ಆಡಳಿತ ಮಂಡಳಿ ಸದಸ್ಯರ ಮಾತು. ಪ್ರತಿವರ್ಷ ತಾಲೂಕಿನಲ್ಲಿ 500 ಬಡ ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆದುಕೊಳ್ಳುತ್ತಿದ್ದರು. ಆದರೆ ಈ ವರ್ಷ ಇಂದಿಗೂ ಸರ್ಕಾರ ಆದೇಶ ಮಾಡಿಲ್ಲ. ಆದರೆ ಪ್ರಸಕ್ತ ಸಾಲಿನಲ್ಲಿ ಇನ್ನೂ ಸರ್ಕಾರ ಅರ್ಜಿ ಸಹ ಕರೆಯದೆ ಇರುವುದರಿಂದ ಈಭಾಗದ ಪಾಲಕರಲ್ಲಿ, ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಿಗೆ ಮತ್ತು ವಿದ್ಯಾರ್ಥಿಗಳಿಗೂ ಆತಂಕ ಶುರುವಾಗಿದೆ.

Advertisement

ಪಾಲಕರ ಹೋರಾಟ ಆರಂಭ: ಪಟ್ಟಣ ಹಾಗೂ ತಾಲೂಕಿನ ಗ್ರಾಮೀಣ ಭಾಗದ ಪಾಲಕರು ತಮ್ಮಮಕ್ಕಳಿಗೆ ಈ ಹಿಂದಿನಂತೆ ಆರ್‌ಟಿಇ ಕಾಯ್ದೆಯಡಿ ಉಚಿತ ಶಿಕ್ಷಣ ನೀಡುವ ಮೂಲಕ ಮಕ್ಕಳ ಭವಿಷ್ಯ ರೂಪಿಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿ ಫೆಬ್ರವರಿ ತಿಂಗಳಲ್ಲಿ ಪಾಲಕರು ಹೋರಾಟ ಮಾಡಿ ಸರ್ಕಾರಕ್ಕೆ ಮನವಿ ಸಹ ಸಲ್ಲಿಸಿದ್ದಾರೆ. ತಾಲೂಕಿನಲ್ಲಿ 20ಕ್ಕೂ ಹೆಚ್ಚು ಖಾಸಗಿ ಅನುದಾನರಹಿತ ಶಾಲೆಗಳು ಇವೆ. ಆದರೆ ಒಂದು ಶಾಲೆಯ ಹೆಸರು ಕೂಡ ಆರ್‌ಟಿಇ ಪ್ರವೇಶ ಪಡೆಯವ ಆನ್‌ಲೈನ್‌ಲ್ಲಿ ತೋರಿಸುತ್ತಿಲ್ಲ. ಇದರಿಂದ ಬಡ ಪಾಲಕರು ನಿತ್ಯ ಖಾಸಗಿ ಇಂಟರನೆಟ್‌ ಕೇಂದ್ರಗಳಿಗೆ ಹೋಗಿ ವಿಚಾರಿಸಿ ಬರುತ್ತಿದ್ದಾರೆ. ಇನ್ನೂಂದೆಡೆ ತಾಲೂಕು ಶಿಕ್ಷಣಾಧಿಕಾರಿಗಳ ಕಚೇರಿಗೆ ಹೋಗಿ ಈ ಕುರಿತು ವಿಚಾರಿಸಿದಾಗ ಇನ್ನೂ ಅರ್ಜಿ ಕರೆದಿಲ್ಲ. ಕರೆದ ಬಳಿಕ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಲಾಗುತ್ತಿದೆ ಎಂದು ತಿಳಿಸುತ್ತಾರೆ.

ಗಡಿ ತಾಲೂಕಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆ ಗಳಿಗೆ ಆರ್‌ಟಿಇ ಯೋಜನೆ ಸಂಜೀವಿನಿಯಾಗಿದೆ. ಈ ಯೋಜನೆಯಿಂದ ಗಡಿ ತಾಲೂಕಿನಲ್ಲಿ ಶಿಕ್ಷಣ ಸಂಸ್ಥೆಗಳು ಶಾಲೆಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ಸಹ ಮಾಡುತ್ತಿವೆ.

ಬಡ ಹಾಗೂ ಹಿಂದುಳಿದ ವರ್ಗದ ಕುಟುಂಬದ ಮಕ್ಕಳು ಖಾಸಗಿ ಶಾಲೆಯಲ್ಲಿ ಉತ್ತಮ ಶಿಕ್ಷಣ ಪಡೆಯಬೇಕು ಎನ್ನುವ ಉದ್ದೇಶದ ಯೋಜನೆಗೆ ಸರ್ಕಾರ ಅಡ್ಡಿಯಾಗುತ್ತಿದೆ. ಈ ಬಗ್ಗೆ ನಾವು ಶಿಕ್ಷಣಾ ಧಿಕಾರಿಗಳನ್ನು ವಿಚಾರಿಸಿದಾಗ, ಮೇಲಾಧಿಕಾರಿಗಳೊಂದಿಗೆ ಮಾತನಾಡಿ ತಿಳಿಸುವುದಾಗಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ನಮಗೂ ಹಾಗೂ ಪಾಲಕರಿಗೂ ತಲೆ ನೋವಾಗಿದೆ.  ಬಸವರಾಜ ಶೆಟಕಾರ, ಅನುದಾನ ರಹಿತ ಶಾಲೆ ಆಡಳಿತ ಮಂಡಳಿ ಸಂಘದ ತಾಲೂಕು ಅಧ್ಯಕ್ಷ

ಶ್ರೀಮಂತರ ಮಕ್ಕಳಂತೆ ನಮ್ಮ ಕೂಲಿ ಕಾರ್ಮಿಕರ ಮಕ್ಕಳು ಕೂಡ ಆರ್‌ ಟಿಇ ಯೋಜನೆಯಲ್ಲಿ ಖಾಸಗಿ ಶಾಲೆಯಲ್ಲಿ
ಓದುತ್ತಿದ್ದಾರೆ ಎನ್ನುವ ಹೆಮ್ಮೆ ನಮಗಿತ್ತು. ಸರ್ಕಾರ ಈ ಬಾರಿ ಇನ್ನೂ ಅರ್ಜಿಯನ್ನೂ ಕರೆದಿಲ್ಲ ಎಂದು ಖಾಸಗಿ ಸೈಬರ್‌ ಕೇಂದ್ರದಲ್ಲಿ ಹಾಗೂ ಶಿಕ್ಷಣಾ ಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ನಮಗೆ ಆತಂಕವಾಗಿದೆ. 
 ಶ್ರೀನಿವಾಸ, ವಿದ್ಯಾರ್ಥಿ ಪಾಲಕರು

„ರವೀಂದ್ರ ಮುಕ್ತೇದಾರ್‌

Advertisement

Udayavani is now on Telegram. Click here to join our channel and stay updated with the latest news.

Next