Advertisement

ಗೊಂದಲದ ಗೂಡಾದ ಬಸ್‌ ಸ್ಥಳಾಂತರ

05:10 PM Nov 17, 2018 | Team Udayavani |

ಹುಬ್ಬಳ್ಳಿ: ಹೊಸೂರು ಪ್ರಾದೇಶಿಕ ಟರ್ಮಿನಲ್‌ ಗೆ ಎಕ್ಸ್‌ಪ್ರೆಸ್‌ ಬಸ್‌ಗಳ ಸ್ಥಳಾಂತರ ಗೊಂದಲದ ಗೂಡಾಗಿ ಪರಿಣಮಿಸಿದ್ದು, ತಾಂತ್ರಿಕ ತೊಂದರೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳಿಂದ ಸದ್ಯಕ್ಕೆ ಬಸ್‌ಗಳ ಸ್ಥಳಾಂತರ ಅಸಾಧ್ಯ ಎನ್ನುವ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿವೆ.

Advertisement

ಕಿತ್ತೂರು ಚನ್ನಮ್ಮ ವೃತ್ತ ಹಾಗೂ ಸುತ್ತಲಿನ ಪ್ರಮುಖ ಸ್ಥಳಗಳಲ್ಲಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಹಳೇ ಬಸ್‌ ನಿಲ್ದಾಣದಿಂದ ಸಂಚರಿಸುವ ಎಕ್ಸ್‌ಪ್ರೆಸ್‌ ಬಸ್‌ಗಳ ಸ್ಥಳಾಂತರ ಅನಿವಾರ್ಯವಾಗಿದೆ. ಇದರ ನಡುವೆ ಬಿಆರ್‌ಟಿಎಸ್‌ ಪ್ರಾಯೋಗಿಕ ಕಾರ್ಯಾಚರಣೆಗೆ ಬಸ್‌ಗಳ ಸಂಖ್ಯೆ ಹೆಚ್ಚುತ್ತಿದ್ದು, ಇದಕ್ಕೆ ಪೂರಕವಾಗಿ ಹು-ಧಾ ನಡುವೆ ಸಂಚರಿಸುತ್ತಿರುವ ವಾಯವ್ಯ ಸಾರಿಗೆ ಸಂಸ್ಥೆಗಳ ಬಸ್‌ಗಳೂ ಕಡಿಮೆಯಾಗುತ್ತಿಲ್ಲ. ಸ್ಥಳಾಂತರಕ್ಕೆ ಪೂರಕವಾಗಿ ಪ್ರಯಾಣಿಕರಿಗೆ ಬೇಕಾದ ಸೌಲಭ್ಯಗಳನ್ನು ಹೊಸೂರು ಪ್ರಾದೇಶಿಕ ಟರ್ಮಿನಲ್‌ಗೆ ಕಲ್ಪಿಸದಿರುವುದು ಈ ನಿಲ್ದಾಣದಿಂದ ಬಸ್‌ ಸಂಚರಿಸುವುದು ಸದ್ಯಕ್ಕೆ ಅನುಮಾನವಾಗಿದೆ.

ಸೌಲಭ್ಯ ಕೊರತೆ: ಎಕ್ಸ್‌ಪ್ರೆಸ್‌ ಬಸ್‌ಗಳನ್ನು ದಿಢೀರ್‌ ಸ್ಥಳಾಂತರಿಸಿದರೆ ಪ್ರಯಾಣಿಕರಿಗೆ ಕುಡಿಯುವ ನೀರು, ಹೊಟೇಲ್‌, ಕ್ಯಾಂಟೀನ್‌, ಅಗತ್ಯ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಖಾಸಗಿ ವಾಹನಗಳ ಪಾರ್ಕಿಂಗ್‌ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲ. ವಾಣಿಜ್ಯ ಉದ್ದೇಶಕ್ಕೆ ಮೀಸಲಿರುವ ಕಟ್ಟಡ, ಸ್ಥಳ, ಪಾರ್ಕಿಂಗ್‌ ಜಾಗ ಹರಾಜು ಪ್ರಕ್ರಿಯೆಗೆ ಟೆಂಡರ್‌ ಸಮಿತಿ ರಚಿಸಿದ್ದು, ಪ್ರಯಾಣಿಕರಿಗೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಮಿತಿ ಕಾರ್ಯಪ್ರವೃತ್ತವಾಗಿಲ್ಲ. ಅಗತ್ಯ ಸೌಲಭ್ಯ ಒದಗಿಸದ ಹೊರತು ಸ್ಥಳಾಂತರ ಅಸಾಧ್ಯ. ಯಾವುದೇ ತಯಾರಿಯಿಲ್ಲದೆ ಸ್ಥಳಾಂತರಿಸಿದರೆ ಸಾರ್ವಜನಿಕರಿಂದ ತೀವ್ರ ವಿರೋಧ ಎದುರಿಸಬೇಕಾಗುತ್ತದೆ.

ತಾಂತ್ರಿಕ ಸಮಸ್ಯೆ: ಹೊಸೂರು ಟರ್ಮಿನಲ್‌ ನಿರ್ಮಾಣಕ್ಕಾಗಿ ವಾಯವ್ಯ ಸಾರಿಗೆ ಸಂಸ್ಥೆ ಬಿಆರ್‌ಟಿಎಸ್‌ ಕಂಪನಿಗೆ ಹಸ್ತಾಂತರಿಸಿತ್ತು. ನಿಯಮ ಹಾಗೂ ಒಪ್ಪಂದಂತೆ ಕಟ್ಟಡ, ಮೂಲ ಸೌಲಭ್ಯಗಳನ್ನು ಕಲ್ಪಿಸಿ ವಾಯವ್ಯ ಸಾರಿಗೆ ಸಂಸ್ಥೆಯ ಕಾಮಗಾರಿ ವಿಭಾಗಕ್ಕೆ ವರ್ಗಾಯಿಸಬೇಕು. ಆದರೆ ಈ ಟರ್ಮಿನಲ್‌ ನಿರ್ವಹಣೆ ಯಾರ ಹೊಣೆ ಎನ್ನುವುದು ಸ್ಪಷ್ಟವಾಗದ ಕಾರಣ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿಲ್ಲ. ಇದಾಗದ ಹೊರತು ವಾಯವ್ಯ ಸಾರಿಗೆ ಅಥವಾ ಬಿಆರ್‌ಟಿಎಸ್‌ ನಿಂದ ಟೆಂಡರ್‌ ಕರೆಯುವುದು ತಾಂತ್ರಿಕವಾಗಿ ಊರ್ಜಿತವಲ್ಲ. ಈ ಎಲ್ಲಾ ಪ್ರಕ್ರಿಯೆಗಳು ನನೆಗುದಿಗೆ ಬಿದ್ದಿರುವುದು ಸ್ಥಳಾಂತರ ಹಿನ್ನೆಡೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಜಂಕ್ಷನ್‌-ರಸ್ತೆಯಿಲ್ಲ: ಉಪನಗರ, ನಗರ, ಗ್ರಾಮೀಣ ಹಾಗೂ ಬಿಆರ್‌ಟಿಎಸ್‌ ಫೀಡರ್‌ ಸೇವೆಗಳನ್ನು ಹೊರತುಪಡಿಸಿ ಸುಮಾರು 1300 ಎಕ್ಸ್‌ಪ್ರೆಸ್‌ ಬಸ್‌ಗಳನ್ನು ಹೊಸೂರು ಟರ್ಮಿನಲ್‌ಗೆ ಸ್ಥಳಾಂತರಿಸಿದರೆ, ಅಗತ್ಯವಾಗಿ ತಿಮ್ಮಸಾಗರ ರಸ್ತೆ, ಹೊಸೂರು ಮತ್ತು ವಾಣಿ ವಿಲಾಸ ಜಂಕ್ಷನ್‌ಗಳ ಅಭಿವೃದ್ಧಿಯಾಗಿಲ್ಲ. ತಿಮ್ಮಸಾಗರ ರಸ್ತೆ ಅಗಲೀಕರಣಕ್ಕೆ ಅವಕಾಶವಿದ್ದರೂ ಅಧಿಕಾರಿಗಳು ಜನಪ್ರತಿನಿಧಿಗಳು ಮನಸ್ಸು ಮಾಡದಿರುವುದು ವಿಳಂಬಕ್ಕೆ ಕಾರಣ. 1300 ಬಸ್‌ಗಳ ಓಡಾಟ ಅಸಾಧ್ಯವಾಗಿದೆ. ಈ ರಸ್ತೆಯನ್ನು ಏಕಮುಖ ಮಾರ್ಗ ಮಾಡಿದರೆ ಜನರಿಂದ ವಿರೋಧ ಎದುರಿಸಬೇಕಾಗುತ್ತದೆ. ಇನ್ನು ಈ ಟರ್ಮಿನಲ್‌ಗೆ ಗದಗ, ನವಲಗುಂದ ಹಾಗೂ ಬೆಂಗಳೂರು ಮಾರ್ಗವಾಗಿ ಬರುವ ಬಸ್‌ ಗಳು ಯಾವ ರಸ್ತೆಯಿಂದ ಬಂದು ಯಾವ ರಸ್ತೆಯಿಂದ ನಿರ್ಗಮಿಸಬೇಕೆನ್ನುವುದು ನಿಗದಿಯಾಗಿಲ್ಲ.

Advertisement

ಲಾಭ-ನಷ್ಟದ ಲೆಕ್ಕಾಚಾರ
ಹಳೇ ಬಸ್‌ ನಿಲ್ದಾಣದಿಂದ ನಿತ್ಯ ಸಾರಿಗೆ ಸಂಸ್ಥೆಯ 3000ಕ್ಕೂ ಹೆಚ್ಚು ಅನುಸೂಚಿಗಳು ಹಾಗೂ ಬಿಆರ್‌ಟಿಎಸ್‌ನಿಂದ 250 ಟ್ರಿಪ್‌ಗಳು ಆಗುತ್ತಿವೆ. ಬಿಆರ್‌ಟಿಎಸ್‌ಗೆ ಮೊದಲ ಆದ್ಯತೆ ಹಾಗೂ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಸಂಚಾರ ನಿರ್ವಹಣೆ ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದು, ಹಳೇ ಬಸ್‌ ನಿಲ್ದಾಣದಿಂದ ಎಕ್ಸ್‌ಪ್ರೆಸ್‌ಗಳನ್ನು ಸ್ಥಳಾಂತರಿಸುವಂತೆ ಪೊಲೀಸರು ಸೂಚನೆ ನೀಡುತ್ತಿದ್ದಾರೆ. ಆದರೆ ಏಕಾಏಕಿ ಸ್ಥಳಾಂತರಿಸುವುದರಿಂದ ಸಂಸ್ಥೆಯ ಆದಾಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಖಾಸಗಿಯವರಿಗೆ ನೇರವಾಗಿಅನುಕೂಲ ಮಾಡಿಕೊಟ್ಟಂತಾಗುತ್ತಿದೆ ಎನ್ನುವ ಲಾಭ-ನಷ್ಟದ ಲೆಕ್ಕಾಚಾರ ವಾಯವ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳದ್ದಾಗಿದೆ. ಇಷ್ಟೆಲ್ಲಾ ಸಮಸ್ಯೆ, ತಾಂತ್ರಿಕ ತೊಂದರೆ, ಲಾಭ-ನಷ್ಟಗಳನ್ನು ಅರಿತಿರುವ ಅಧಿಕಾರಿಗಳು ಎಲ್ಲದಕ್ಕೂ ಪರಿಹಾರ ಕಂಡುಕೊಂಡು ಹಂತಹಂತವಾಗಿ ಹೊಸೂರು ಟರ್ಮಿನಲ್‌ಗೆ ಬಸ್‌ಗಳನ್ನು ಸ್ಥಳಾಂತರಿಸಲು ಚಿಂತನೆ ನಡೆಸಿದ್ದಾರೆ. ಹೀಗಾಗಿ ಹಳೇ ಹೆಂಡತಿ ಪಾದವೇ ಗತಿ ಎನ್ನುವಂತೆ ಸದ್ಯದ ಪರಿಸ್ಥಿತಿಯಲ್ಲಿ ಗೋಕುಲ ರಸ್ತೆ ಹೊಸ ಬಸ್‌ ನಿಲ್ದಾಣ ಅನಿವಾರ್ಯವಾಗಿದೆ.

ಹೊಸೂರು ಟರ್ಮಿನಲ್‌ ನೋಡಲು ಬೃಹದಾಕಾರವಾಗಿದ್ದು, 23 ಪ್ಲಾಟ್‌ಫಾರ್ಮ್ ಹೊಂದಿದೆ. ಬಸ್‌ಗಳನ್ನು ಪ್ಲಾಟ್‌ಫಾರ್ಮ್ ಹೊಂದಿಕೊಂಡು ಉದ್ದವಾಗಿ ನಿಲ್ಲುವ ವ್ಯವಸ್ಥೆ ಇರುವುದರಿಂದ ಹೆಚ್ಚುವರಿಯಾಗಿ ಅಕ್ಕಪಕ್ಕದಲ್ಲಿ ಬಸ್‌ ನಿಲ್ಲಿಸಲು ಸಾಧ್ಯವಿಲ್ಲ. ಹೀಗಾಗಿ 1000 ಅನುಸೂಚಿಗಳಿಗೆ ಪೂರಕವಾಗಿಲ್ಲ ಎನ್ನುವ ಅಸಮಾಧಾನವಿದೆ. ಒಂದೇ ಮಾರ್ಗದಲ್ಲಿ ಏಕಕಾಲಕ್ಕೆ ಹೊರಡುವ ಬಸ್‌ಗಳನ್ನು ನಿಲ್ಲಿಸಲು ಸ್ಥಳಾವಕಾಶ ಇಲ್ಲದಂತಾಗಿದೆ. ಈ ಕುರಿತು ಸಾರಿಗೆ ಸಂಸ್ಥೆ ಅಧಿಕಾರಿಗಳ ಸಲಹೆ ಪಡೆಯದಿರುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ ಎನ್ನುತ್ತಿದ್ದಾರೆ ಸಾರಿಗೆ ಅಧಿಕಾರಿಗಳು. ಹೀಗಾಗಿ ಗೋಕುಲ ಹೊಸ ಬಸ್‌ ನಿಲ್ದಾಣಕ್ಕೆ 319 ಅನುಸೂಚಿಗಳನ್ನು ವರ್ಗಾಯಿಸಿದ್ದು, ನಗರವೊಂದು 3 ಬಸ್‌ ನಿಲ್ದಾಣವಾಗಿವೆ.

ವಾಯವ್ಯ ಸಾರಿಗೆ ಸಂಸ್ಥೆಯ ಆದಾಯ ಹಾಗೂ ಸಂಚಾರ ದಟ್ಟಣೆ ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕಿದೆ. ರಸ್ತೆ, ಜಂಕ್ಷನ್‌, ಟರ್ಮಿನಲ್‌ನಲ್ಲಿ ಸೌಲಭ್ಯ ಕಲ್ಪಿಸಿ ಹಂತ ಹಂತವಾಗಿ ಬಸ್‌ಗಳನ್ನು ಸ್ಥಳಾಂತರ ಮಾಡುತ್ತೇವೆ. ಪ್ರಯಾಣಿಕರ ಮೂಲ ಸೌಲಭ್ಯ ನೀಡದ ಹೊರತು ಸ್ಥಳಾಂತರ ಮಾಡಲ್ಲ. 
 ರಾಜೇಂದ್ರ ಚೋಳನ್‌,
ಎಂಡಿ, ವಾಯವ್ಯ ಸಾರಿಗೆ ಸಂಸ್ಥೆ

ಬಿಆರ್‌ಟಿಎಸ್‌ ಬಸ್‌ಗಳ ಸಂಖ್ಯೆ ಹೆಚ್ಚಿಸಿದಂತೆ ಹು-ಧಾ ನಡುವೆ ಸಂಚರಿಸುವ ವಾಯವ್ಯ ಸಾರಿಗೆ ಸಂಸ್ಥೆ ಬಸ್‌ಗಳ ಸಂಖ್ಯೆ ಕಡಿಮೆ ಮಾಡಬೇಕು. ಹಳೇ ಬಸ್‌ ನಿಲ್ದಾಣಕ್ಕೆ ಬರುವ ಎಕ್ಸ್‌ಪ್ರೆಸ್‌ ಬಸ್‌ಗಳನ್ನು ಸ್ಥಳಾಂತರಿಸಿದರೆ ಮಾತ್ರ ಕಿತ್ತೂರು ಚನ್ನಮ್ಮ ವೃತ್ತ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲು ಸಾಧ್ಯ.
 ಬಿ.ಎಸ್‌.ನೇಮಗೌಡ, ಡಿಸಿಪಿ

„ಹೇಮರಡ್ಡಿ ಸೈದಾಪುರ 

Advertisement

Udayavani is now on Telegram. Click here to join our channel and stay updated with the latest news.

Next