Advertisement

Hosur: ಕರೆಗಾಗಿ ಮರ, ಗುಡ್ಡ ಏರುವ ಪರಿಸ್ಥಿತಿ

03:17 PM Nov 19, 2024 | Team Udayavani |

ಕುಂದಾಪುರ: ವಂಡ್ಸೆ, ಚಿತ್ತೂರು, ಕೆರಾಡಿಯ ನಡುವೆ ಇರುವ ಹೊಸೂರು ಗ್ರಾಮ ಮಾತ್ರ ಈಗಲೂ ಕನಿಷ್ಠ ಮೂಲ ಸೌಕರ್ಯಗಳಿಲ್ಲದೇ ಕುಗ್ರಾಮದಂತಿದೆ. ಗ್ರಾಮದ ಕೆಲ ಊರುಗಳಿಗೆ ಇನ್ನೂ ಸರಿಯಾದ ರಸ್ತೆ ಸಂಪರ್ಕವಿಲ್ಲ. ಇನ್ನು ಇಲ್ಲಿನ ಗ್ರಾಮಸ್ಥರು ಈ 5ಜಿ ಕಾಲದಲ್ಲೂ ಒಂದು ಕರೆ ಮಾಡಬೇಕಾದರೆ ಎತ್ತರದ ಗುಡ್ಡವೋ ಅಥವಾ ಇನ್ನು ಯಾವುದೋ ಮರ ಹತ್ತಬೇಕಾದ ಪರಿಸ್ಥಿತಿಯಿದೆ.

Advertisement

ಹೊಸೂರಿನ ಕಾನ್‌ಬೇರಿನ ಶ್ರೀ ಮಹಿಷಾಮರ್ಧಿನಿ ದೇವಸ್ಥಾನದ ಸಮೀಪದ ಕಳೆದೆರಡು ವರ್ಷಗಳಿಂದ ನಿರ್ಮಾಣಗೊಳ್ಳುತ್ತಿರುವ ಬಿಎಸ್ಸೆನ್ನೆಲ್‌ ಟವರ್‌ ಕಾಮಗಾರಿ ಕುಂಟುತ್ತಾ ಸಾಗಿದ್ದು, ಇನ್ನೂ ಪೂರ್ಣಗೊಳ್ಳುವ ಲಕ್ಷಣ ಮಾತ್ರ ಕಾಣುತ್ತಿಲ್ಲ. ಟವರ್‌ ಪೂರ್ಣಗೊಂಡಿದೆ. ಆದರೆ ಇನ್ನೂ ಅದಕ್ಕೆ ಸಂಪರ್ಕ ಕಲ್ಪಿಸಿಕೊಟ್ಟಿಲ್ಲ. ಟವರ್‌ ಕಾಮಗಾರಿ ಆರಂಭಗೊಂಡಾಗಿನಿಂದ ಖುಷಿಪಟ್ಟ ಹೊಸೂರಿನ ಜನ ಈಗ ಯಾವಾಗ ನೆಟ್ವರ್ಕ್‌ ಬರುತ್ತೋ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

2 ಸಾವಿರಕ್ಕೂ ಮಿಕ್ಕಿ ಜನ
ಹೊಸೂರು ಗ್ರಾಮದ ಒಟ್ಟು ಜನಸಂಖ್ಯೆ 2,360. ಕದಳಿ, ಹೊಸೂರು ಎನ್ನುವ ಎರಡು ವಾರ್ಡ್‌ಗಳಿವೆ. ಕದಳಿ, ಮೇಲ್‌ ಹೊಸೂರು, ಕೆಳ ಹೊಸೂರು ಎನ್ನುವುದಾಗಿ ಮೂರು ಬೂತ್‌ಗಳಿವೆ. ಒಂದನೇ ವಾರ್ಡಿನಲ್ಲಿ 158, ಎರಡನೇ ವಾರ್ಡಿನಲ್ಲಿ 212 ಹಾಗೂ ಮೂರನೇ ವಾರ್ಡಿನಲ್ಲಿ 215 ಮನೆಗಳು ಸೇರಿದಂತೆ ಒಟ್ಟಾರೆ 585 ಮನೆಗಳಿವೆ. ಹೊಸೂರಿನ ಇಡೀ ಗ್ರಾಮದಲ್ಲಿ ಎಲ್ಲಿಯೂ ನೆಟ್ವರ್ಕ್‌ ಸೌಲಭ್ಯವೇ ಇಲ್ಲ. ಸಿಕ್ಕರೂ ಸಣ್ಣ ಮೊಬೈಲ್‌ಗೆ ಆಗೊಮ್ಮೆ, ಈಗೊಮ್ಮೆ ಕರೆ ಮಾಡಲು ಮಾತ್ರ. ಇನ್ನು ಬೇರೆ ಆಂಡ್ರಾಯ್ಡ ಮೊಬೈಲ್‌ಗ‌ಳನ್ನು ಬಳಸುವಂತೆಯೇ ಇಲ್ಲ.

ಕರೆಗಾಗಿ ಗುಡ್ಡ ಹತ್ತಬೇಕು..
ಹೊಸೂರಿನ ಸಮಸ್ಯೆ ಒಂದೆರಡಲ್ಲ. ಸರಿಯಾದ ಕರೆಂಟ್‌ ವ್ಯವಸ್ಥೆಯಿಲ್ಲ. ಯಾರಿಗಾದರೂ ತುರ್ತು ಅನಾರೋಗ್ಯ ಉಂಟಾದರೂ, ಕರೆ ಮಾಡಬೇಕಾದರೆ ನೆಟ್ವರ್ಕ್‌ ಇರುವುದಿಲ್ಲ. ಒಂದೋ ಎತ್ತರದ ಗುಡ್ಡ ಹತ್ತಿ ಹೋಗಿ ನೆಟ್ವರ್ಕ್‌ ಹುಡುಕಬೇಕು ಅಥವಾ ಮರ ಹತ್ತಿ ಫೋನ್‌ ಮಾಡಬೇಕು. ಅಷ್ಟರಲ್ಲಿ ಜೀವ ಉಳಿದರೆ ಪುಣ್ಯ ಅನ್ನುವ ಪರಿಸ್ಥಿತಿ ನಮ್ಮದು. ಸರಿಯಾದ ಬಸ್‌, ವಾಹನಗಳ ವ್ಯವಸ್ಥೆಯೂ ಇಲ್ಲ. ವೈದ್ಯಕೀಯ ಸೌಲಭ್ಯವೂ ಇಲ್ಲ. ದೂರ-ದೂರದ ಊರಿನಲ್ಲಿದ್ದರೂ ಇಲ್ಲಿಗೆ ಬಂದು ಮತ ಚಲಾಯಿಸುತ್ತೇವೆ. ನಮ್ಮ ಊರಿನಲ್ಲಿರುವವರಿಗೆ ಒಳ್ಳೆಯ ಸೌಕರ್ಯ ಮಾಡಿಕೊಡಲಿ ಅಂತ. ಆದರೆ ಎಷ್ಟು ವರ್ಷವಾದರೂ ಇನ್ನೂ ನಮ್ಮ ಊರಿನ ಪರಿಸ್ಥಿತಿ ಮಾತ್ರ ಸುಧಾರಿಸುತ್ತಿಲ್ಲ. ಆಳುವವರಿಗೆ, ಅಧಿಕಾರಿ ವರ್ಗದವರಿಗೆ ನಮ್ಮ ಸಮಸ್ಯೆ ಅರಿವಾಗುವುದು ಯಾವಾಗ? ನಮ್ಮೂರಿನ ಜನ ನೆಮ್ಮದಿಯಿಂದ ಬದುಕುವುದು ಯಾವಾಗ ಅನ್ನುವುದಾಗಿ ಪ್ರಶ್ನಿಸುತ್ತಾರೆ ಉಪನ್ಯಾಸಕಿ ಶ್ವೇತಾಶ್ರೀ ಕದಳಿ.

ಆದಷ್ಟು ಬೇಗ ನೆಟ್ವರ್ಕ್‌ ಸಿಗುವಂತಾಗಲಿ
ನೆಟ್ವರ್ಕ್‌ ಕಲ್ಪಿಸಲು ಹಲವು ವರ್ಷಗಳಿಂದ ಬೇಡಿಕೆ ಇಡುತ್ತಿದ್ದು, 2 ವರ್ಷದ ಹಿಂದೆ ಟವರ್‌ ನಿರ್ಮಾಣ ಶುರುವಾಯಿತು. ಆದರೆ ಎರಡು ವರ್ಷವಾದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಈ ಬಗ್ಗೆ ಸಂಬಂಧಪಟ್ಟ ಎಲ್ಲರಿಗೂ ಮನವಿ ಕೊಟ್ಟರೂ, ಈವರೆಗೆ ನೆಟ್ವರ್ಕ್‌ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಆದಷ್ಟು ಬೇಗ ನೆಟ್ವರ್ಕ್‌ ಸಂಪರ್ಕ ಕಲ್ಪಿಸುವ ಕಾರ್ಯ ಆಗಲಿ. ಊರಿನ ಜನರಿಗೆ ಇದರಿಂದ ಪ್ರಯೋಜನ ಸಿಗುವಂತಾಗಲಿ.
– ರತ್ನಾಕರ ಶೆಟ್ಟಿ ಹೊಸೂರು, ಗ್ರಾಮಸ್ಥರು

Advertisement

ತ್ವರಿತಗತಿಯಲ್ಲಿ ಪೂರ್ಣಕ್ಕೆ ಸೂಚನೆ
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಎಲ್ಲ 28 ಟವರ್‌ಗಳನ್ನು ತ್ವರಿತಗತಿಯಲ್ಲಿ ಪೂರ್ಣಕ್ಕೆ ಬಿಸ್ಸೆಎನ್ನೆಲ್‌ ಇಲಾಖೆ, ಕಾಮಗಾರಿ ವಹಿಸಿಕೊಂಡ ಟಿಸಿಎಚ್‌ ಕಂಪೆನಿಯವರಿಗೆ ಸಭೆ ನಡೆಸಿ, ಸೂಚನೆ ನೀಡಲಾಗಿದೆ. ಬಹುತೇಕ ಟವರ್‌ ಪೂರ್ಣಗೊಂಡಿದ್ದು, ನೆಟ್ವರ್ಕ್‌ ಸಂಪರ್ಕ ಕಲ್ಪಿಸುವಲ್ಲಿನ ತಾಂತ್ರಿಕ ಸಮಸ್ಯೆಗಳಿವೆ. ಆದಷ್ಟು ಬೇಗ ಬಗೆಹರಿಯಲಿದ್ದು, ಗ್ರಾಮಾಂತರದ ಜನರಿಗೆ ನೆಟ್ವರ್ಕ್‌ ಪ್ರಯೋಜನ ಸಿಗಲಿದೆ.
– ಬಿ.ವೈ. ರಾಘವೇಂದ್ರ, ಸಂಸದರು

ಕನಿಷ್ಠ 5 ಕಿ.ಮೀ. ಸಂಚಾರ
ಹೊಸೂರಿನಲ್ಲಿ ಏರ್‌ಟೆಲ್‌ ಅಲ್ಪ-ಸ್ವಲ್ಪ ನೆಟ್ವರ್ಕ್‌ ಹುಡುಕಾಡಿದರೆ ಸಿಗುತ್ತದೆ. ಆದರೆ ಅದು ಸಣ್ಣ ಮೊಬೈಲ್‌ಗೆ ಮಾತ್ರ. ಇನ್ನು ಸರಿಯಾದ ನೆಟ್ವರ್ಕ್‌ ಸಂಪರ್ಕ ಸಿಗಬೇಕಾದರೆ ಒಂದೋ 10 ಕಿ.ಮೀ. ದೂರದ ಇಡೂರಿಗೆ ಹೋಗಬೇಕು, ಇಲ್ಲದಿದ್ದರೆ 8 ಕಿ.ಮೀ. ದೂರದ ಮಾರಣಕಟ್ಟೆಗೆ ಬರಬೇಕು. ಒಟ್ಟಿನಲ್ಲಿ ಇಲ್ಲಿನ ಜನ ನೆಟ್ವರ್ಕ್‌ ಸಿಗಬೇಕಾದರೆ ಕನಿಷ್ಠ 5-6 ಕಿ.ಮೀ. ದೂರ ಅಲೆದಾಟ ನಡೆಸಬೇಕಾದುದು ಮಾತ್ರ ಅನಿವಾರ್ಯ.

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next