ಕಾರವಾರ: ದಸರಾದಲ್ಲಿ ಆಚರಿಸಲಾಗುವ ಹೊಸ್ತಿನ ಹಬ್ಬ ಕುಮಟಾ ತಾಲೂಕಿನ ಬರ್ಗಿಯಲ್ಲಿ ಸಂಭ್ರಮದಿಂದ ನಡೆಯಿತು. ಬರ್ಗಿ ಗ್ರಾಮ ಕೃಷಿಯ ಪ್ರಾಮುಖ್ಯತೆ ತೋರುವ ಹೊಸ್ತಿನ ಹಬ್ಬದ ಸಂಪ್ರದಾಯಗಳನ್ನು ಇಂದಿಗೂ ಕಾಪಾಡಿಕೊಂಡು ಬಂದಿದೆ. ಇಲ್ಲಿ ಆಚರಿಸಲಾಗುವ ಹೊಸ್ತಿನ ಹಬ್ಬಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಕೃಷಿ ಮೂಲದ ಈ ಹಬ್ಬವನ್ನು ನೂರಾರು ವರ್ಷಗಳಿಂದ ರೈತರು ಆಚರಿಸಿಕೊಂಡು ಬಂದಿದ್ದಾರೆ. ಇದಕ್ಕೆ ಹರಣ ಮೂರ್ತ, ಹೊಸ ಧಾನ್ಯ ಎಂದೂ ಕರೆಯಲಾಗುತ್ತದೆ.
ಹಬ್ಬದ ದಿನ ವಾದ್ಯಮೇಳದೊಂದಿಗೆ ಭಕ್ತರು ಹಾಗೂ ಅರ್ಚಕರು ಹೊಸ್ತಿನ ಹಬ್ಬಕ್ಕಾಗಿಯೇ ಮೀಸಲಿಟ್ಟಿರುವ ಗದ್ದೆಗೆ ಹೋಗಿ ಪೂಜೆ ಸಲ್ಲಿಸಿ ಕದಿರು ಹೊತ್ತು ತರುತ್ತಾರೆ. ಘಟಬೀರ, ಯಜಮಾನ ದೇವರ ಕಳಸ ಸಾವಿರಾರು ಭಕ್ತರೊಂದಿಗೆ ಮೆರವಣಿಗೆಯಲ್ಲಿ ಸಾಗಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬರುತ್ತದೆ. ಆ ವೇಳೆ ಕಳಸ ಹೊತ್ತ ಗುನಗರಿಗೆ ದರ್ಶನವಾಗುತ್ತದೆ.
ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳಸಕ್ಕೆ ಪೂಜೆ ಸಲ್ಲಿಸಿದ ಬಳಿಕ ಎರಡು ಕಳಸಗಳು ಯಜಮಾನ ದೇವಸ್ಥಾನಕ್ಕೆ ತೆರಳಿ ಅಲ್ಲಿ ಆಸೀನವಾಗುತ್ತದೆ. ನಂತರ ದೇವಸ್ಥಾನದ ಅರ್ಚಕರು ಮತ್ತು ಭಕ್ತರು ಸೇರಿ ಕದಿರು ಕೊಯ್ಯುವ ಗದ್ದೆಗೆ ತೆರಳಿ ಅಲ್ಲಿ ವಿಶೇಷ ಪೂಜೆ ಸಲ್ಲಿಸಿ ಕದಿರು ಕೊಯ್ಯಲಾಗುತ್ತದೆ. ನಂತರ ಕದಿರನ್ನು ಪ್ರತಿಯೊಬ್ಬರೂ ತಲೆಯ ಮೇಲೆ ಹೊತ್ತಿಕೊಂಡು ಮನೆಗೆ ಬರುತ್ತಾರೆ. ಕದಿರನ್ನು ತುಳಸಿ ಮನೆಯಲ್ಲಿ ಇಟ್ಟು ಪೂಜೆ ಸಲ್ಲಿಸಿ ದೇವಸ್ಥಾನದಿಂದ ತಂದಿರುವ ಕದಿರನ ಜೊತೆ ಸೇರಿಸಿ ಪೂಜೆ ಸಲ್ಲಿಸಿ ಮನೆ ಬಾಗಿಲಿಗೆ ಹಾಗೂ ಕೃಷಿ ಕಾರ್ಯಕ್ಕೆ ಬಳಸುವ ಉಪಕರಣಗಳಿಗೆ ಕಟ್ಟಲಾಗುತ್ತದೆ. ಮನೆಯಲ್ಲಿ ಧಾನ್ಯ ಲಕ್ಷ್ಮೀ ನೆಲೆಸಬೇಕು ಎನ್ನುವುದು ಇದರ ಉದ್ದೇಶವಾಗಿದೆ. ಬರ್ಗಿಯಲ್ಲಿ ಹೊಸ್ತಿನ ಹಬ್ಬವನ್ನು ಆಚರಿಸದೇ ಹೋದರೆ ಮುಂದೆ ಗ್ರಾಮದಲ್ಲಿ ನಡೆಯಬಹುದಾದ ಸಂಕ್ರಾಂತಿ, ಗಡಿ ಹಬ್ಬ ಆಚರಿಸಲಾಗುವುದಿಲ್ಲ ಎನ್ನುವ ಪ್ರತೀತಿಯಿದೆ.