ಹುಣಸೂರು: ಪ್ರತಿದಿನ ಬದನೆಕಾಯಿ, ಸೋರೆಕಾಯಿ, ಹೆಸರುಕಾಳಿನದ್ದೇ ಸಾಂಬರು, ರುಚಿಯೂ ಇಲ್ಲ, ತೆಂಗಿನ ಕಾಯಿಯೂ ಹಾಕಲ್ಲ, ಮಜ್ಜಿಗೆ, ಮುದ್ದೆ, ಚಪಾತಿ, ದೋಸೆ ನೀಡುತ್ತಿಲ್ಲ, ಬರೀ ಚಿತ್ರನ್ನ, ವಾಂಗಿಬಾತ್, ಉಪ್ಪಿಟ್ ಕೊಡ್ತಾರೆ, ಸ್ನಾನಕ್ಕೆ ಬಿಸಿನೀರಿಲ್ಲ….
ಇಲ್ಲಿ ಸೋಲಾರ್ ಇದ್ದರೂ ಬಿಸಿನೀರು ಬರುತ್ತಿಲ್ಲ. ವಿದ್ಯುತ್ ಕೈಕೊಟ್ಟರೆ ಯುಪಿಎಸ್ ಸೇರಿದಂತೆ ಪರ್ಯಾಯ ವ್ಯವಸ್ಥೆ ಇಲ್ಲದೆ ರಾತ್ರಿವೇಳೆ ಕಗ್ಗತ್ತಲಿನಲ್ಲೇ ಕಾಲ ಕಳೆಯಬೇಕಿದೆ. ಕನಿಷ್ಠ ಮೇಣದಬತ್ತಿ ಸೌಲಭ್ಯವಿಲ್ಲ, ಪರೀಕ್ಷಾ ಸಮಯವಾಗಿದ್ದು, ಬಟ್ಟೆ ಒಣಗಿ ಹಾಕಲು ಸ್ಥಳವಿಲ್ಲ. ಓದಿಕೊಳ್ಳಲು ಹೆಣಗಾಡಬೇಕಿದೆ ಎಂದು ವಿದ್ಯಾರ್ಥಿಗಳು ಅವಲತ್ತುಕೊಂಡರು.
ಊಟತಿಂಡಿನೂ ನೆಟ್ಗಿಲ್ಲ: ಇನ್ನು ಊಟ- ತಿಂಡಿಯಂತೂ ಗುಣಮಟ್ಟದಿಂದ ಕೂಡಿಲ್ಲ. ಕೇವಲ ಒಂದು ಲೀಟರ್ ಹಾಲಲ್ಲೇ ಮುಗಿಸ್ತಾರೆ, ಟೀ-ಕಾಫಿನೂ ಸರಿಯಾಗಿ ಕೊಡಲ್ಲ, ಸ್ನ್ಯಾಕ್ಸ್ ಕೊಟ್ಟೇ ಇಲ್ಲ. ಇನ್ನು 81 ಮಕ್ಕಳಿಗೆ ಕೇವಲ ಎರಡು ಕೇಜಿ ಚಿಕ್ಕನ್ ತರ್ತಾರೆ, ಒಂದೊಂದು ಪೀಸು ಬರಲ್ಲ. ತಿಂಗಳಿಗೊಂದು ಮಸ್ಕಿಟೋ ಕಾಯಿಲ್ ಕೊಡುತ್ತಾರೆ. ಇಲ್ಲಿ ಮೆನುಚಾರ್ಟ್ ಹಾಕಿಲ್ಲ. ಶೌಚಾಲಯಕ್ಕೆ ಚಪ್ಪಲಿ ಹಾಕಿಕೊಂಡು ಹೋಗಲೂ ಬಿಡುವುದಿಲ್ಲ್ಲ, ಗ್ರಂಥಾಲಯ ವ್ಯವಸ್ಥೆ ಇಲ್ಲವೇ ಇಲ್ಲ, ಹುಷಾರಿಲ್ಲದಿದ್ರೆ ಆಸ್ಪತ್ರೆಗ್ ಕರ್ಕೊಂಡೋಗಿ ಅಂದ್ರೆ ಆಗಲ್ಲ ಅಂತಾರೆ, ಕರೆಂಟ್ ಪ್ರಾಬ್ಲಿಂ ಆದ್ರೆ ನಾವೇ ಹೊರಗಡೆಯಿಂದ ನೀರು ಹೊತ್ತು ತರಬೇಕು, ಕೊಟ್ಟಿದ್ದ ಟವಲ್ನ ವಾಪಾಸ್ ಇಸ್ಕೊಂಡು ಈವರ್ಷ ಕೊಟ್ಟೇ ಇಲ್ಲ. ನೀರಿನ ತೊಟ್ಟಿ ತೊಳೆದು ತಿಂಗಳುಗಳೇ ಆಗಿದೆ, ಊಟ ಮಾಡಲಿಕ್ಕೆ ಡೈನಿಂಗ್ ಟೇಬಲ್ ಇಲ್ಲ. ಸರ್ ನಾವು ಹುಣಸೂರು, ಪಿರಿಯಾಪಟ್ಟಣ ತಾಲೂಕಿನ ಹಳ್ಳಿಗಳಿಂದ ಬಂದಿದ್ದೀವಿ, ಸರ್ಯಾಗಿ ಊಟನೂ ಸಿಗದಿದ್ದರೆ ಓದೋದು ಹೇಗೆ ಎಂದು ಪ್ರಶ್ನಿಸಿದರು.
ಬೆದರಿಸ್ತಾರೆ: ಇಲ್ಲಿ ನಡೆಯುವ ಅವ್ಯವಸ್ಥೆ ಬಗ್ಗೆ ವಾರ್ಡನ್‌ಗೆ ಯಾರೇ ಪ್ರಶ್ನಿಸಿದ್ರೆ ಪೋಷಕರಿಗೆ ಫೋನ್ ಮಾಡಿ ನಮ್ಮ ವಿರುದ್ಧ ಇಲ್ಲಸಲ್ಲದ ವಿಷಯ ಹೇಳಿ ಅವರಿಂದ ಬೈಯಿಸ್ತಾರೆ. ಅಲ್ಲದೇ ಹಾಸ್ಟೆಲ್ನಿಂದ ಹೊರಗಾಕ್ತೀವಿ ಅಂತ ಬೆದರಿಸ್ತಾರೆ. ಯಾವುದೇ ಅಧಿಕಾರಿಗಳು ಬಂದರೂ ನಮ್ಮ ಸಮಸ್ಯೆ ಕೇಳಲ್ಲ. ನಮ್ಗೆ ಗುಣಮಟ್ಟದ ಊಟ-ತಿಂಡಿ, ಬಿಸಿನೀರು ಬರುವಂತೆ ಮಾಡಬೇಕು. ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ನಿಲಯದ ವಿದ್ಯಾರ್ಥಿಗಳಾದ ಅನುಷಾ, ಸುಶ್ಮಿತಾ, ಸಹನಾ, ತೇಜಾ, ಬಿಂದು, ರಚನಾ, ಸುಚಿತ್ರಾ, ಅಂಜಲಿ ಮತ್ತಿತರರು ಆಗ್ರಹಿಸಿದರು.
Advertisement
ಇದು ನಗರದ ಮೆಟ್ರಿಕ್ ನಂತರದ ಸರ್ಕಾರಿ ಬಾಲಕಿಯರ ಎಸ್ಸಿ, ಎಸ್ಟಿ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದ್ದ ಜಿಲ್ಲಾ ಪಂಚಾಯ್ತಿಯ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ, ಸಾ.ರಾ.ನಂದೀಶ್ ಅವರ ಎದುರು ವಿದ್ಯಾರ್ಥಿನಿಯರು ಹಾಸ್ಟೆಲ್ ಅವ್ಯವಸ್ಥೆ ಕುರಿತು ದೂರುಗಳ ಸುರಿಮಳೆಗೈದ ಪರಿ.
Related Articles
Advertisement
ಅಡುಗೆಯವರ ಸಂಕಷ್ಟ: ಹಾಸ್ಟೆಲ್ನಲ್ಲಿ ಅಡುಗೆ ಕೆಲಸ ಮಾಡುವ ಮಹಿಳಾ ಸಿಬ್ಬಂದಿಯನ್ನು ಸಮಸ್ಯೆಗಳ ಬಗ್ಗೆ ಪ್ರಶ್ನಿಸಿದರೆ, ನಮಗೆ ವಾರ್ಡನ್ ವಿನಾ ಕಾರಣ ಕಿರುಕುಳ ನೀಡುತ್ತಾರೆ. ರಜೆ ನೆಪದಲ್ಲಿ ಕೆಲಸದಿಂದ ತೆಗೆಯುವ ಬೆದರಿಕೆ ಹಾಕುತ್ತಾರೆ. ಕಳೆದ ಬಾರಿ ನಮಗೆ ಸಂಬಳ ಹಾಕಿ ವಾಪಸ್ ಪಡೆದುಕೊಂಡಿದ್ದಾರೆ. ನಮಗೆ ರಕ್ಷಣೆ ನೀಡಬೇಕೆಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ನ್ಯಾಯ ಕೊಡಿಸುವ ಭರವಸೆ ನೀಡಿದರು.
ತಪ್ಪಿತಸ್ಥರ ವಿರುದ್ಧ ಕ್ರಮ: ನಿಲಯದ ಸಮಸ್ಯೆಗಳನ್ನು ಆಲಿಸಿದ ಅಧ್ಯಕ್ಷರು ಮೂರು ದಿನದಲ್ಲಿ ಮೆನು ಚಾರ್ಟ್‌ನಂತೆ ಗುಣಮಟ್ಟದ ಊಟ-ತಿಂಡಿ, ವಾರದಲ್ಲಿ ಸೋಲಾರ್ ವ್ಯವಸ್ಥೆ ಕಲ್ಪಿಸಿ, ಬಿಸಿ ನೀರು ನೀಡುವಂತೆ ಸೂಚಿಸುವೆ. ಮುಂದೆ ಯಾವುದೇ ಸಮಸ್ಯೆಗಳಿದ್ದರೂ ಹಾಗೂ ವಾರ್ಡನ್ ನಿಮಗೆ ಬೆದರಿಕೆ ಹಾಕಿದರೆ ನನಗೆ ಕರೆ ಮಾಡಿ ತಿಳಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿದ್ಯಾರ್ಥಿಗಳ ಸಮ್ಮುಖದಲ್ಲೇ ಅಧಿಕಾರಿಗಳಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡು, ಸರಿಪಡಿಸುವಂತೆ ತಾಕೀತು ಮಾಡಿದರು. ಅಧ್ಯಕ್ಷರ ಭೇಟಿ ವೇಳೆ ವಾರ್ಡನ್ ಪುಷ್ಪಲತಾ ಗೈರಾಗಿದ್ದರು.