‘ಹಾಸ್ಟೆಲ್ನಲ್ಲಿದ್ದರೆ ಓದಿಕೊಳ್ಳಲಿಕ್ಕೆ ಜಾಸ್ತಿ ಟೈಮ್ ಸಿಗುತ್ತೆ. ಶಿಸ್ತು ಜೊತೆಯಾಗುತ್ತೆ. ಚೆನ್ನಾಗಿ ಓದಿ ಜಾಸ್ತಿ ಮಾರ್ಕ್ಸ್ ತೆಗೆದುಕೊಂಡರೆ, ಒಳ್ಳೆಯ ಕಾಲೇಜಿನಲ್ಲಿ ಕರೆದು ಸೀಟ್ ಕೊಡ್ತಾರೆ. ಹಾಸ್ಟೆಲ್ನಲ್ಲಿ ವಾರ್ಡನ್, ಟೀಚರ್ ಜೊತೆಗೆ ನೂರಾರು ಮಕ್ಕಳಿರ್ತಾರೆ. ಹಾಗಾಗಿ, ಗಾಬರಿಯಾಗೋಕೆ, ಹೆದರಲಿಕ್ಕೆ ಕಾರಣವೇ ಇಲ್ಲ. ಆರಂಭದಲ್ಲಿ ಒಂದು ತಿಂಗಳು ಕಷ್ಟ ಅನ್ನಿಸಬಹುದು. ಆಮೇಲೆ ಎಲ್ಲಾ ಅಡ್ಜಸ್ಟ್ ಆಗಿಬಿಡುತ್ತೆ…’ ಇಂಥವೇ ಸಮಾಧಾನದ ಮಾತುಗಳನ್ನು ಪದೇ ಪದೆ ಹೇಳುತ್ತ, ಹಾಸ್ಟೆಲ್ಗೆ ಸೇರಿಕೊಳ್ಳಲು ನನ್ನನ್ನು ಮಾನಸಿಕವಾಗಿ ತಯಾರು ಮಾಡಿದ್ದರು ಅಪ್ಪ. ನೂರಾರು ಮಕ್ಕಳು ಜೊತೆಗಿರ್ತಾರೆ ಅಂದಮೇಲೆ, ಅವರೊಂದಿಗೆ ಬಗೆಬಗೆಯ ಆಟವಾಡಿಕೊಂಡು ಮಜವಾಗಿ ಕಾಲ ಕಳೆಯಬಹುದು ಎಂಬ ಲೆಕ್ಕಾಚಾರದೊಂದಿಗೇ ನಾನೂ ನಡೆದುಬಂದಿದ್ದೆ. ಆದರೆ, ಹಾಸ್ಟೆಲನ್ನೂ, ಅದು ಇದ್ದ ಪರಿಸರವನ್ನೂ, ಅಲ್ಲಿನ ನಿಯಮಗಳನ್ನೂ ಕಂಡ ನಂತರ, ನನ್ನ ಉತ್ಸಾಹದ ಬಲೂನು, ಆ ಕ್ಷಣವೇ ಒಡೆದುಹೋಯಿತು.
400 ಮೆಟ್ಟಿಲುಗಳಿಂದ ಕೂಡಿದ ಒಂದು ಬೆಟ್ಟ, ಅದರ ಮೇಲೊಂದು ದೇವಸ್ಥಾನ. ಆ ದೇಗುಲದ ಕೆಳಗೆ ಸ್ಕೂಲು-ಹಾಸ್ಟೆಲ್ಲು! ಸುತ್ತಲೂ ಹೇಮಾವತಿ ನದಿ! ಬೆಳಗ್ಗೆ 8 ಗಂಟೆಗೆ ಒಮ್ಮೆ, ರಾತ್ರಿ 8 ಗಂಟೆಗೆ ಮತ್ತೂಮ್ಮೆ ಬಂದು ಹೋಗುವ ಕೆಎಸ್ಸಾರ್ಟಿಸಿ ಬಸ್ಸು. ಹೀಗಿತ್ತು ನಮ್ಮ ಹಾಸ್ಟೆಲ್ನ ಪರಿಸರ. ಸಮೀಪದ ಹಳ್ಳಿಗಳಲ್ಲಿ ಮನೆ ಮಾಡಿಕೊಂಡಿದ್ದ ಅಧ್ಯಾಪಕರು, ಸೈಕಲ್ಗಳಲ್ಲಿ ಪ್ರಯಾಣಿಸುತ್ತಿದ್ದರು. ದ್ವೀಪದಂಥ ಆ ಪ್ರದೇಶದಲ್ಲಿ, ಹಾಸ್ಟೆಲ್ನ ಹುಡುಗರು ಇದ್ದರೆ ಮಾತ್ರ ‘ಜೀವ’ ಇರುತ್ತಿತ್ತು.
‘ಬೆಳಗ್ಗೆ 5.30ಕ್ಕೆ ಏಳಬೇಕು. ಪ್ರಾರ್ಥನೆ ಮುಗಿಸಿ 8.30ರ ತನಕ ಓದಲೇಬೇಕು. ನಂತರ ಹೇಮಾವತಿ ನದಿಯಲ್ಲಿ ತಣ್ಣೀರ ಸ್ನಾನ. ನಂತರ ಸಂಜೆ 5ರವರೆಗೂ ಸ್ಕೂಲು. 6-10ರವರೆಗೆ ಓದುವುದು ಕಡ್ಡಾಯ. ಓದುವ ಸಮಯದಲ್ಲಿ ತೂಕಡಿಸಿದರೆ, ಕಳ್ಳಾಟ ಆಡುತ್ತಾ ಸಿಕ್ಕಿಬಿದ್ದರೆ ಶಾಲೆಯ ಸುತ್ತ ಐದು ರೌಂಡ್ ಓಡುವ ಕಠಿಣಶಿಕ್ಷೆ. ಊಟ ಮಾಡುವಾಗ ಅನ್ನ ವೇಸ್ಟ್ ಮಾಡಿದರೆ, ಅದಕ್ಕೂ ಪನಿಶ್‌ಮೆಂಟ್…’ ಹಾಸ್ಟೆಲ್ನಲ್ಲಿ ಈ ಥರದ ಹಲವು ನಿಯಮಗಳಿದ್ದವು.
ಅದುವರೆಗೂ ವಾರಕ್ಕೆರಡು ಸಿನಿಮಾ ನೋಡಿಕೊಂಡು, ಗೋಲಿ-ಲಗೋರಿ, ಚಿನ್ನಿದಾಂಡು, ಕ್ರಿಕೆಟ್, ಐಸ್‌ಪೈಸ್ ಆಡಿಕೊಂಡು, ಮನೆಯಲ್ಲಿ ಸದಾ ‘ರೂಲ್ಸ್ ಬ್ರೇಕ್’ ಮಾಡಿಕೊಂಡು ಬೆಳೆದಿದ್ದವ ನಾನು. ಅಂಥವನಿಗೆ ಈಗ ರೂಲ್ಸ್ ಫಾಲೋ ಮಾಡುವುದು ಕಷ್ಟವಾಗತೊಡಗಿತು. ವಾರಕ್ಕೆರಡು ಸಿನಿಮಾ ನೋಡುವುದನ್ನು ಮಿಸ್ ಮಾಡಿಕೊಂಡಿದ್ದೇ ದೊಡ್ಡ ಕೊರತೆಯಂತೆ ಕಾಡತೊಡಗಿತು. ಹೇಗಾದರೂ ಮಾಡಿ ಈ ಹಾಸ್ಟೆಲ್ನಿಂದ, ಸ್ಕೂಲಿನಿಂದ ಟಿ.ಸಿ. ತಗೊಂಡು ಹೋದರೆ ಸಾಕು ಎಂದು ಯೋಚಿಸಿದಾಗ ಒಂದು ಉಪಾಯ ಹೊಳೆಯಿತು. ಇನ್‌ಲ್ಯಾಂಡ್ ಲೆಟರ್ ತಂದು, ತಂದೆಯವರಿಗೆ ಹೀಗೆ ಬರೆದೆ: ‘ಅಪ್ಪ, ಈ ಹಾಸ್ಟೆಲ್-ಸ್ಕೂಲ್ ಹೊಂದಾಣಿಕೆ ಆಗುತ್ತಿಲ್ಲ. ಹಾಸ್ಟೆಲ್ನಲ್ಲಿ ಜೊತೆಗಿರುವ ಹುಡುಗರಿಗೆ ಕಜ್ಜಿ ಆಗುತ್ತಿದೆ. ಅದು ನನಗೂ ಅಂಟಬಹುದು! ಇಲ್ಲಿ ಸೊಳ್ಳೆ ಕಾಟ ವಿಪರೀತ. ನನಗೂ ಏನಾದರೂ ರೋಗ ಬರಬಹುದು! ಈಜು ಗೊತ್ತಿಲ್ಲ; ಹಾಗಾಗಿ ಮುಳುಗಿ ಹೋಗುವ ಭಯ. ಅಮ್ಮ ಸದಾ ನೆನಪಾಗುತ್ತಾರೆ. ಹಾಗಾಗಿ ನಿದ್ರೆಯೂ ಬರುವುದಿಲ್ಲ. ಶ್ರದ್ಧೆಯಿಂದ ಓದಲಾಗುತ್ತಿಲ್ಲ. ದಯವಿಟ್ಟು ಟಿ.ಸಿ. ತಗೊಂಡು ನನ್ನನ್ನು ಕರ್ಕೊಂಡು ಹೋಗಿ…’
ವಾರದ ನಂತರ ಅಮ್ಮನೊಂದಿಗೆ ಅಪ್ಪನೂ ಬಂದರು. ‘ನೋಡೂ, ಹಾಸ್ಟೆಲ್ನಲ್ಲಿ ಒಟ್ಟು 300 ಹುಡುಗರು ಇದ್ದಾರೆ. ಎಲ್ರೂ ನಿನ್ನ ಥರಾನೇ ಆಡ್ತಿದಾರ? ಹಾಸ್ಟೆಲ್ನಲ್ಲಿ ಸಮಸ್ಯೆಗಳು ಸಾಮಾನ್ಯ. ಅವು ನಿನ್ನನ್ನು ಮಾನಸಿಕವಾಗಿ ಗಟ್ಟಿ ಮಾಡ್ತವೆ. ಈಗ ಒಂದು ಕೆಲ್ಸ ಮಾಡೋಣ. ಮುಂದಿನ ವರ್ಷ ಟಿ.ಸಿ. ತಗೊಳ್ಳೋಣ. ಆದ್ರೆ, ಒಂದು ಕಂಡೀಷನ್. ಇಲ್ಲಿಂದ, ಡಿಸ್ಟಿಂಕ್ಷನ್ ಮಾರ್ಕ್ಸ್ ತಗೊಂಡೇ ಆಚೆ ಬರಬೇಕು. ಇವತ್ತಿಂದಾನೇ ಓದಲು ಶುರು ಮಾಡು…’ ಇಷ್ಟು ಹೇಳಿ ಅಪ್ಪ ಹೋಗಿಬಿಟ್ಟರು. ‘ಜಾಸ್ತಿ ಮಾರ್ಕ್ಸ್ ತಗೊಂಡರೆ, ಟಿ.ಸಿ.ಕೊಡಿಸಿ ಊರಿಗೆ ಕರ್ಕೊಂಡು ಹೋಗ್ತೀನೆ’ ಅಂದರಲ್ಲ; ಅದಷ್ಟೇ ನನ್ನ ಕಿವಿಯಲ್ಲಿ ಉಳೀತು. ಆ ಕ್ಷಣದಿಂದಲೇ ಪುಸ್ತಕ ತೆರೆದು ಕುಳಿತುಕೊಂಡೆ.
ನಂತರದ ನಾಲ್ಕು ತಿಂಗಳಲ್ಲಿ, ನಾನು ಕನಸಲ್ಲೂ ಊಹಿಸಿರದ ಘಟನೆಗಳು ನಡದುಹೋದವು. ಹೈಸ್ಕೂಲು ವಿದ್ಯಾರ್ಥಿಗಳಿಗಾಗಿ ನಡೆದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಒಂದಲ್ಲ, ಎರಡು ಬಾರಿ ಮೊದಲ ಬಹುಮಾನ ಬಂದು, ಅದು ಪತ್ರಿಕೆಯಲ್ಲಿ ಸುದ್ದಿಯೂ ಆಯ್ತು. ಮರುದಿನದಿಂದ ಸ್ಕೂಲಿನಲ್ಲಿ, ಹಾಸ್ಟೆಲ್ನಲ್ಲಿ ವಿಶೇಷ ಮರ್ಯಾದೆ ಸಿಗತೊಡಗಿತು. ಅಧ್ಯಾಪಕರು- ‘ಇನ್ನೂ ಸ್ವಲ್ಪ ಎಫರ್ಟ್ ಹಾಕು. ರ್‍ಯಾಂಕ್ ಬರಬಹುದು’ ಅಂದರು. ಗೆಳೆಯರು- ‘ನಿನ್ನ ನೋಟ್ಸ್ ಕೊಡು, ಕಾಪಿ ಮಾಡಿಕೊಂಡು ಕೊಡ್ತೇವೆ’ ಅನ್ನತೊಡಗಿದರು. ಅದೇ ತಿಂಗಳು ಊರಿಗೆ ಹೋದಾಗ ಅಪ್ಪ ಹೇಳಿದರು- ‘ಮನೇಲಿದ್ದು ಓದಿದ್ದರೆ ಈ ಥರದ ಮರ್ಯಾದೆ ಸಿಕ್ತಿತ್ತಾ? ಯೋಚನೆ ಮಾಡು…’
ಆನಂತರದಲ್ಲಿ ಹಾಸ್ಟೆಲ್ ಹೆಚ್ಚು ಆಪ್ತವಾಗತೊಡಗಿತು. ‘ಮೂರು ತಿಂಗಳಿದ್ದು ಬಂದುಬಿಡ್ತೀನಿ’ ಎಂದು ಹಠ ಹಿಡಿದಿದ್ದವನು, ನಂತರ ಮೂರು ವರ್ಷ ಕಳೆದೆ. ಆ ಅವಧಿಯಲ್ಲಿ ಶಾಂತಿ, ಶಿಸ್ತು, ಸಹನೆ, ಮಂತ್ರ, ಸಂಸ್ಕೃತ, ಈಜು (ಅಲೆಯ ವಿರುದ್ಧ ನದಿಯಲ್ಲಿ, ಸವಾಲಿಗೆ ಎದುರಾಗಿ ಬದುಕಿನಲ್ಲಿ) ಎಲ್ಲವನ್ನೂ ಕಲಿಯಲು ಸಾಧ್ಯವಾಯಿತು. ಎಲ್ಲ ಜಾತಿಯ ಜನರು ಒಂದೇ ಸೂರಿನ ಕೆಳಗೆ ಅಣ್ಣ-ತಮ್ಮಂದಿರಂತೆ ಬಾಳಬಹುದು ಎಂಬ ಸಂಗತಿಯೂ ಅರ್ಥವಾಯಿತು.
ಶಿಸ್ತು ಬದುಕಾಗಬೇಕು. ಯಾರನ್ನೂ ಜಾತಿ ಕೇಳಬಾರದು. ಅನ್ನ ಚೆಲ್ಲಬಾರದು. ದ್ವೇಷ ಬೆಳೆಸಬಾರದು- ಇದು ಹಾಸ್ಟೆಲ್ನಲ್ಲಿ ಹೇಳಿಕೊಟ್ಟ ನೀತಿಪಾಠ. ಇವತ್ತಿಗೂ ಮುಂಜಾನೆ ಎಚ್ಚರಾದಾಗ, ಒಂದಗುಳೂ ಬಿಡದಂತೆ ಊಟ ಮಾಡಿದಾಗ, ಎಲ್ಲರೊಂದಿಗೆ ಬೆರೆತು ನಲಿವಾಗ ಹಾಸ್ಟೆಲ್ ನೆನಪಾಗುತ್ತದೆ. ನನಗೆ ದೊರೆತಂಥ ಅವಕಾಶವೇ, ಹಾಸ್ಟೆಲ್ ಕಡೆಗೆ ಹೆಜ್ಜೆ ಹಾಕುವ ಎಲ್ಲರಿಗೂ ಸಿಗಲೆಂಬ ಆಸೆಯೂ, ಪ್ರಾರ್ಥನೆಯೂ ಜೊತೆಯಾಗುತ್ತದೆ.
ಎ.ಆರ್. ಮಣಿಕಾಂತ್