ಕಲಬುರಗಿ: ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲೆಗಳ ಗುತ್ತಿಗೆ ನೌಕರರ ಬಾಕಿ ವೇತನ ಬಿಡುಗಡೆ ಮಾಡಬೇಕು ಹಾಗೂ ಕೋವಿಡ್ -19 ಸಂದರ್ಭದ ರಜೆ ವೇತನ ನೀಡಬೇಕುಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗುತ್ತಿಗೆ ನೌಕರರು ಧರಣಿ ಸತ್ಯಾಗ್ರಹ ನಡೆಸಿದರು.
ಇಲ್ಲಿನ ಜಿಪಂ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಕಚೇರಿ ಮುಂಭಾಗದಲ್ಲಿ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆನೌಕರರ ಸಂಘದ ಜಿಲ್ಲಾ ಸಮಿತಿ ನೇತೃತ್ವಲ್ಲಿ ಧರಣಿ ಸತ್ಯಾಗ್ರಹ ಕೈಗೊಂಡ ನೌಕರರು, ಸಮಾಜ ಕಲ್ಯಾಣ ಇಲಾಖೆಯಡಿ ವಸತಿ ನಿಲಯಗಳಲ್ಲಿ ದುಡಿಯುತ್ತಿರುವ ಗುತ್ತಿಗೆನೌಕರರಿಗೆ ಏಳು ತಿಂಗಳಿಂದ ಕೋವಿಡ್-19ರಜೆ ಪಾವತಿಸದೇ ಇರುವುರಿಂದ ಜೀವನ ಸಾಗಿಸಲು ಸಮಸ್ಯೆ ಎದುರಿಸುವಂತೆ ಆಗಿದೆ. ಅಲ್ಲದೇ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ನೌಕರರರ ಏಳೆಂಟುತಿಂಗಳ ವೇತನ ಬಾಕಿ ಉಳಿಸಿಕೊಳ್ಳಲಾಗಿದೆ. ಕ್ವಾರಂಟೈನ್ ಕೇಂದ್ರದಲ್ಲಿ ಕೆಲಸ ಮಾಡಿದನೌಕರರಿಗೂ ವೇತನ ಪಾವತಿಸಿಲ್ಲ ಎಂದು ಆರೋಪಿಸಿದರು.
ನೇರ ನೇಮಕಾತಿ ಪ್ರಕ್ರಿಯೆಯಿಂದ ಕೆಲಸ ಕಳೆದುಕೊಂಡ ಹೊರಗುತ್ತಿಗೆ ನೌಕರರನ್ನು ಹೊಸದಾಗಿ ಆರಂಭಿಸುವ ವಸತಿ ನಿಲಯಗಳಲ್ಲಿ ನೇಮಿಸಿಕೊಳ್ಳಬೇಕು. ಅಲ್ಲದೇ, 10 ವರ್ಷ ಕಾಲ ಸೇವೆ ಸಲ್ಲಿಸಿರುವ ಹೊರಗುತ್ತಿಗೆ ನೌಕರರನ್ನು ಕ್ಷೇಮಾಭಿವೃದ್ಧಿ ಯೋಜನೆಯಡಿ ಸೇರ್ಪಡೆ ಮಾಡಿ, ಅವರಸೇವೆ ಮುಂದುವರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಸೆಪ್ಟಂಬರ್‌ವರೆಗೆ ಈಗಾಗಲೇ ವೇತನ ಪಾವತಿಸಲಾಗಿದೆ. ಇದಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ನೌಕರರಿಗೂ ತಕ್ಷಣವೇ ಬಾಕಿ ವೇತನ ಪಾವತಿಸಬೇಕು. ಕಲ್ಯಾಣ ಕರ್ನಾಟಕ ಭಾಗದ ವಸತಿ ನಿಲಯಗಳಲ್ಲಿ ರೊಟ್ಟಿ ಮಾಡುವ ವ್ಯವಸ್ಥೆ ಇದ್ದು, 100ವಿದ್ಯಾರ್ಥಿಗಳಿಗೆ ಕೇವಲ ಐವರು ಸಿಬ್ಬಂದಿ ಸಾಕಾಗುವುದಿಲ್ಲ. ಆದ್ದರಿಂದ ಕನಿಷ್ಠ ಆರುಜನರನ್ನು ನಿಯೋಜಿಸಬೇಕೆಂದು ಒತ್ತಾಯಿಸಿ ಸಿಇಒಗೆ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಸುರೇಶ ದೊಡ್ಮನಿ, ರವಿ, ಫಾತಿಮಾ ಬೇಗಂ, ಮಾಪಣ್ಣ ಜಾನಕರ್, ಸರೋಜಾ ನಿಡಗುಂದಾ, ಪರಶುರಾಮ ಹಡಗಿಲ, ಶಶಿಕಲಾ ಮದರ್ಕಿ, ನರಸಮ್ಮ ಚಂದನಕೇರಾ, ನಾಗರಾಜ ಕಟ್ಟಿಮನಿ ಮತ್ತಿತರರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.