“ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’- ಸದ್ಯ ಕನ್ನಡ ಚಿತ್ರರಂಗದಲ್ಲಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳ ಸಾಲಿನಲ್ಲಿ ಕೇಳಿಬರುವ ಹೆಸರು. ಆರಂಭದಿಂದಲೂ ವಿಭಿನ್ನ ಪ್ರಚಾರ ತಂತ್ರದ ಮೂಲಕ ಗಮನ ಸೆಳೆದಿರುವ ಈ ತಂಡ ಈಗ ಟ್ರೇಲರ್ ಬಿಡುಗಡೆ ಮಾಡಿದೆ. ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ರಿಷಭ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಧ್ರುವ ಸರ್ಜಾ ಸೇರಿದಂತೆ ಸ್ಯಾಂಡಲ್‌ವುಡ್ ತಾರೆಯರು ಕಾರ್ಯಕ್ರಮಕ್ಕೆ ಆಗಮಿಸಿ ತಂಡಕ್ಕೆ ಶುಭ ಹಾರೈಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ರಿಷಭ್ ಶೆಟ್ಟಿ, “ನನ್ನ ಶಿಷ್ಯಂದಿರೇ ಸೇರಿ ಮಾಡಿರುವ ಸಿನಿಮಾ. ಅರವಿಂದ್, ಪ್ರಜ್ವಲ್ ಇವರೆಲ್ಲರನ್ನೂ ಲೂಸಿಯಾ ಸಮಯದಿಂದಲೂ ನೋಡಿಕೊಂಡು ಬರುತ್ತಿದ್ದೇನೆ. ತುಂಬಾ ಅದ್ಭುತ ಟೆಕ್ನಿಷಿಯನ್ಸ್. ಒಂದು ಸಿನಿಮಾದ ಕಥೆ ಇದೆ ಗೆಸ್ಟ್ ಅಪಿಯರೆನ್ಸ್ ಮಾಡ್ತೀರಾ ಅಂತಾ ಕೇಳಿದರು. ಕಥೆ ಏನೂ ಕೇಳಿಲ್ಲ. ಒಂದು ರಾತ್ರಿಯಷ್ಟೇ ಪಾತ್ರವನ್ನು ಚಿತ್ರೀಕರಿಸಲಾಯಿತು. ಪವನ್ ಇದ್ದರು. ಶೈನ್ ಇದ್ದರು. ಬಹಳ ಅದ್ಭುತವಾಗಿ ಶೂಟಿಂಗ್ ಅನುಭವ.
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಒಂದು ಅದ್ಭುತ ತಂಡ. ಬೆಳೆಯುತ್ತಾ ಬೆಳೆಯುತ್ತಾ ಸಿನಿಮಾ ದೊಡ್ಡ ಸ್ಕೆಲ್ ಆಯ್ತು. 500 ಜನ ಕಲಾವಿದರನ್ನು ಕಂಪ್ಲೀಟ್ ನೈಟ್ ಸೀಕ್ವೆಲ್‌ನಲ್ಲಿ ಶೂಟ್ ಮಾಡುವುದು ತುಂಬಾ ಚಾಲೆಂಜಿಂಗ್ . ನೀವು ಖಂಡಿತ ಈ ಸಿನಿಮಾವನ್ನು ಎಂಜಾಯ್ ಮಾಡ್ತೀರಿ’ ಎನ್ನುತ್ತಾ ಶುಭಕೋರಿದರು.
ಧ್ರುವ ಸರ್ಜಾ ಮಾತನಾಡಿ, “ಒಬ್ಬ ಪ್ರೇಕ್ಷಕನಾಗಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ನೋಡಿದ್ದೇನೆ. ಈ ಸಿನಿಮಾ ನೋಡಿದಾಗ ನಾನು ನನ್ನ ಅಣ್ಣನನ್ನು ಮಿಸ್ ಮಾಡಿಕೊಂಡೆ. ಏಳೆಂಟು ವರ್ಷ ನಾವು ಹಾಸ್ಟೆಲ್‌ನಲ್ಲಿ ಇದ್ದೆವು. ಅದನ್ನು ನೋಡಿದ ತಕ್ಷಣ ನಾವು ಹೀಗೆ ಇದ್ವಲ್ಲಾ ಅನಿಸಿತು. ನಿತಿನ್ ಅವರು ತುಂಬಾ ಚೆನ್ನಾಗಿ ಸಿನಿಮಾ ಶೂಟ್ ಮಾಡಿದ್ದಾರೆ. ನಾನು ನೋಡಿದಾಗ ರೀ ರೆಕಾರ್ಡಿಂಗ್ ಆಗಿರಲಿಲ್ಲ. ರೀ ರೆಕಾರ್ಡಿಂಗ್ ಆದ್ಮೇಲೆ ನೋಡಬೇಕೆಂಬ ಕುತೂಹಲವಿದೆ’ ಎಂದು ಶುಭ ಹಾರೈಸಿದರು.
ನಟ ರಕ್ಷಿತ್ ಶೆಟ್ಟಿ ಅವರ ಪರಂವ ಸ್ಟುಡಿಯೋಸ್ ಈ ಸಿನಿಮಾವನ್ನು ಅರ್ಪಿಸುತ್ತಿದೆ.”ಈ ಸಿನಿಮಾವನ್ನು ನಾನು ಪ್ರಸೆಂಟ್ ಮಾಡಲು ತುಂಬಾ ಕಾರಣವಿದೆ. ನಾನು ಈ ಚಿತ್ರವನ್ನು ಎರಡು ಬಾರಿ ನೋಡಿದ್ದೇನೆ. ಎರಡು ಸಲ ನೋಡುವಾಗಲೂ ಅಷ್ಟೇ ಎಂಜಾಯ್ ಮಾಡಿದ್ದೇನೆ. ಸಿನಿಮಾವನ್ನು ಹಾಲಿವುಡ್ ರೇಂಜ್‌ಗೆ ಶೂಟ್ ಮಾಡಲಾಗಿದೆ’ ಎಂದು ಖುಷಿಪಟ್ಟರು ನಟ ರಕ್ಷಿತ್ ಶೆಟ್ಟಿ.
ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಮಾತನಾಡಿ, “ಪುನೀತ್ ಸರ್ ಪೋಸ್ಟರ್ ಲಾಂಚ್ ಮಾಡಿಕೊಟ್ಟಿದ್ದರು. ಅಲ್ಲಿಂದಲೇ ಜರ್ನಿ ಶುರುವಾಗಿದ್ದು, ಈ ವೇದಿಕೆ ಹತ್ತಿದ್ದೇನೆ. ಈ ಚಿತ್ರ ಮಾಡಲು ಎರಡು ವರ್ಷ ಬೇಕಾಯ್ತು. ಮಳೆ, ಲಾಕ್ ಡೌನ್‌ನಿಂದ ಸ್ವಲ್ಪ ತಡವಾಯಿತು. ಇಷ್ಟು ದಿನ ಪ್ರೋಮೋ ಬಿಟ್ಟಿದ್ದೇವೆ. ಈಗ ಟ್ರೇಲರ್ ಬಂದಿದೆ. ಚಿತ್ರಕ್ಕೆ ಇಡೀ ಸ್ಯಾಂಡಲ್‌ವುಡ್ ಸಾಥ್ ಕೊಟ್ಟಿದೆ’ ಎಂದರು. ಈ ಚಿತ್ರವನ್ನು ವರುಣ್ ಗೌಡ ನಿರ್ಮಿಸಿದ್ದಾರೆ. ಸಿನಿಮಾ ಜು.21ಕ್ಕೆ ತೆರೆಕಾಣುತ್ತಿದ್ದು, ಸಿನಿಮಾ ಬಿಡುಗಡೆಯ ಖುಷಿ ಹಂಚಿಕೊಂಡರು. ಕಿರಿಕ್ ಮಾಡುವ ವಾರ್ಡನ್ ಕಾಟದಿಂದ ತಪ್ಪಿಸಿಕೊಳ್ಳಲು ಹಾಸ್ಟೆಲ್ ಹುಡುಗರು ಏನೆಲ್ಲಾ ಮಾಡುತ್ತಾರೆ. ಅದರಿಂದ ಮುಂದೆ ಏನು ಸಮಸ್ಯೆ ಅನುಭವಿಸುತ್ತಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ.