ಮಲ್ಪೆ: ಮಲ್ಪೆ ಕೊಳ ಮಾರ್ಗದ ಕೊರೆನೆಟ್ ಕ್ಯಾನಿಂಗ್ ಕಂಪೆನಿಯ ಸಮೀಪದ ರಸ್ತೆಯ ಬದಿಯಲ್ಲಿ ಆಸ್ಪತ್ರೆಯ ಪ್ರಯೋಗಾಲಯದಲ್ಲಿ ಬಳಸಿದ ಅಪಾಯಕಾರಿ ತ್ಯಾಜ್ಯವನ್ನು ಯಾರೋ ರಾತ್ರೋರಾತ್ರಿ ಪ್ಲಾಸ್ಟಿಕ್ ಚೀಲದಲ್ಲಿ ತಂದು ಇಲ್ಲಿ ಎಸೆದು ಹೋಗಿ ಅನಾಗರಿಕ ಸಂಸ್ಕೃತಿಯನ್ನು ತೋರಿಸಿದ್ದಾರೆ.
ಆಸ್ಪತ್ರೆಯ ಪ್ರಯೋಗಾಲಯದಲ್ಲಿ ಬಳಸುವಂಥ ರಕ್ತದ ಮಾದರಿಯನ್ನು ತುಂಬಿರುವ ಗಾಜಿನ ಸಣ್ಣ ಬಾಟಲಿಗಳು, ಸಿರಿಂಜ್, ರಕ್ತ ಸಿಕ್ತ ಹತ್ತಿ, ಮಲ ಮೂತ್ರದ ಸೀಸೆಗಳು, ಬ್ಯಾಂಡೇಜ್, ಹ್ಯಾಂಡ್‌ಗ್ಲೌಸ್, ಔಷಧದ ಖಾಲಿ ಸೀಸೆಗಳು ಇರುವ ಪ್ಲಾಸ್ಟಿಕ್ ಚೀಲಗಳಲ್ಲಿ ತ್ಯಾಜ್ಯವನ್ನು ತಂದು ಹಾಕಲಾಗಿದೆ. ನಾಯಿಗಳು ಪ್ಲಾಸ್ಟಿಕ್ ಚೀಲ ಎಳೆದಾಡಿ ಸುತ್ತಲೂ ಚೆಲ್ಲಿವೆ. ಕಾಗೆಗಳು ರಕ್ತಸಿಕ್ತ ಹತ್ತಿಯನ್ನು ಸಮೀಪದ ಮನೆಯಂಗಳದಲ್ಲಿ ತಂದು ಹಾಕುತ್ತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತಿದೆ.
ಕೊಳ ಮಾರ್ಗದ ಕೊರೆನೆಟ್ ಕ್ಯಾನಿಂಗ್ ಕಂಪೆನಿಯ ಸಮೀಪದ ರಸ್ತೆ ಬದಿ ಈ ಹಿಂದೆ ತ್ಯಾಜ್ಯದ ಗುಡ್ಡೆಯಾಗಿತ್ತು. ನಗರಸಭೆಯ ಸಹಕಾರದಲ್ಲಿ ಸ್ಥಳೀಯ ಯುವಕರು ಆ ಜಾಗವನ್ನು ಸ್ವಚ್ಚಗೊಳಿಸಿ ತ್ಯಾಜ್ಯ ಗುಡ್ಡೆಗೆ ಮುಕ್ತಿ ಕರುಣಿಸಿದ್ದರು. ಮುಂದೆ ಅಲ್ಲಿ ಕಸ ಎಸೆಯದಂತೆ ಎಚ್ಚರವಹಿಸಿ, ಸುಮಾರು 10 ಲಾರಿಗಳಷ್ಟು ಮರಳನ್ನು ತಂದು ಸ್ವತ್ಛಗೊಳಿಸಿ, ಸಿಸಿ. ಕೆಮರಾವನ್ನು ಅಳಡಿಸಿದ್ದರು. ಕಸ ಹಾಕುವುದು ಕಂಡು ಬಂದಲ್ಲಿ ಕೆಮರಾದಲ್ಲಿ ಪತ್ತೆ ಹಚ್ಚಿ ಅವರ ಮನೆ ಅಂಗಡಿಯೊಳಗೆ ತಂದು ಬಿಸಾಡಲಾಗುವುದು ಎಂಬ ಎಚ್ಚರಿಕೆಯ ಬೋರ್ಡ್‌ನ್ನು ಅಳವಡಿಸಿದ್ದರು. ಹಾಗಾಗಿ ಒಂದು ತಿಂಗಳಿನಿಂದ ಈ ಪ್ರದೇಶ ತ್ಯಾಜ್ಯ ಮುಕ್ತವಾಗಿತ್ತು.
ಗುರುವಾರ ರಾತ್ರೋ ರಾತ್ರಿ ಆಸ್ಪತ್ರೆಯ ತ್ಯಾಜ್ಯಗಳನ್ನು ತಂದು ಇಲ್ಲಿ ಎಸೆಯಲಾಗಿದೆ. ರಾತ್ರಿ ಕರೆಂಟ್ ಇಲ್ಲದ ವೇಳೆಯಲ್ಲಿ ಮಳೆ ಬರುವ ಸಂದರ್ಭದಲ್ಲಿ ತಂದು ಸುರಿಯುತ್ತಿರುವುದು ಸಿಸಿ ಕೆಮರಾದಲ್ಲಿ ಪತ್ತೆಯಾಗಿದೆ. ಕತ್ತಲೆಯಾದ್ದರಿಂದ ಮುಖದ ಪರಿಚಯವೂ ಆಗುತ್ತಿಲ್ಲ ಎನ್ನುತ್ತಾರೆ ಕೆಮರಾ ಪರಿಶೀಲಿಸಿದ ಮಂಜು ಕೊಳ.
ಆಸ್ಪತ್ರೆಯ ತಾಜ್ಯಗಳನ್ನು ಈ ರೀತಿ ಮನಬಂದಂತೆ ವಿಲೇವಾರಿ ಮಾಡುವಂತಿಲ್ಲ. ಈ ಬಗ್ಗೆ ಆರೋಗ್ಯ ಇಲಾಖೆ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.