Advertisement

ಕಬಿನಿ ಒಡಲಲ್ಲಿ ಆಸ್ಪತ್ರೆ ತ್ಯಾಜ್ಯ ವಿಲೇವಾರಿ

01:07 PM Dec 20, 2019 | Team Udayavani |

ಯಳಂದೂರು: ಯಳಂದೂರು ಪಟ್ಟಣದ ಹೊರ ವಲಯದಲ್ಲಿ ಹರಿಯುವ ಕಬಿನಿ ಕಾಲುವೆಯ ಬದಿಯಲ್ಲೇ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಅಪಾಯಕಾರಿ ತ್ಯಾಜ್ಯ ಸುರಿಯಲಾಗುತ್ತಿದ್ದು, ಇದು ಕಾಲುವೆ ಸೇರುತ್ತಿದೆ. ಜಾನುವಾರುಗಳು, ಜಲಚರಗಳಿಗೆ ಹಾಗೂ ರೈತರಿಗೆ ಅಪಾಯ ತಂದೊಡ್ಡುವ ಸಾಧ್ಯತೆಗಳು ಹೆಚ್ಚಿವೆ. ಪಟ್ಟಣದಲ್ಲಿ ಪ್ಲಾಸ್ಟಿಕ್‌ ಬ್ಯಾಗ್‌ಗಳಲ್ಲಿ ಕಸವನ್ನು ತಂದು ಕಾಲುವೆಯ ಬಳಿಯಲ್ಲೇ ಬೀಸಾಡಲಾಗಿದೆ. ಇದರೊಳಗೆ ಅಪಾಯಕಾರಿ ಸಿರಿಂಜ್‌ಗಳು, ಅವಧಿ ಮುಗಿದ ಮಾತ್ರೆಗಳು, ಔಷಧಿ ಬಾಟಲಿಗಳು, ಗಾಯವನ್ನು ಶುಚಿಗೊಳಿಸಿ ಬೀಸಾಡುವ ಹತ್ತಿಯ ತುಂಡುಗಳು ಬಿದ್ದಿವೆ.

Advertisement

ಮೇವನ್ನು ಅರಸಿ ಬರುವ ದನಕರುಗಳು, ಎಮ್ಮೆ, ಕೋತಿಗಳು ಸೇರಿದಂತೆ ಇತರೆ ಜಾನುವಾರುಗಳು ಇದಕ್ಕೆ ಬಾಯಿ ಹಾಕಿ. ಪ್ಲಾಸ್ಟಿಕ್‌ ಕವರ್‌ಗಳನ್ನು ಚೆಲ್ಲಾಪಿಲ್ಲಿ ಮಾಡುತ್ತವೆ. ಹೀಗಾಗಿ ಇದರ ಬಳಿಯಲ್ಲೇ ಕಬಿನಿ ಕಾಲುವೆ ಇದೆ. ಈಗ ಕಾಲುವೆಯಲ್ಲಿ ನೀರು ಹರಿಯುತ್ತಿದ್ದು, ಅಪಾಯಕಾರಿ ತ್ಯಾಜ್ಯ ನೀರಲ್ಲಿ ಸೇರಿ, ಕಬ್ಬಿನ ಗದ್ದೆ ಹಾಗೂ ಹರಿಯುವ ನೀರನ್ನು ಕಲುಷಿತಗೊಳಿಸುವ ಸಾಧ್ಯತೆ ಇದೆ. ಇದರ ಜೊತೆಗೆ ಜಲಚರಗಳಿಗೂ ಇದು ಮಾರಕವಾಗುವ ಸಾಧ್ಯತೆಗಳಿವೆ.

ಆಸ್ಪತ್ರೆ ತ್ಯಾಜ್ಯ ಎಲ್ಲೆಂದರಲ್ಲಿ ಬೀಸಾಡುವಂತಿಲ್ಲ: ಆಸ್ಪತ್ರೆಗಳಲ್ಲಿ ಉತ್ಪತ್ತಿಯಾಗುವ ಪ್ರತಿಯೊಂದು ತ್ಯಾಜ್ಯವನ್ನು ಶೇಖರಿಸಿ, ಇದನ್ನು ಸಂಸ್ಕರಿಸುವ ಘಟಕಕ್ಕೆ ಕಳುಹಿಸಬೇಕು. ಇದನ್ನು ಎಲ್ಲೆಂದರಲ್ಲಿ ಬೀಸಾಡಬಾರದು ಎಂಬ ಕಟ್ಟುನಿಟ್ಟಿನ ನಿಮಯವಿದೆ. ಚಾಮರಾಜನಗರದಲ್ಲಿ ಇದರ ಸಂಸ್ಕರಣ ಘಟಕ ಇಲ್ಲದ ಕಾರಣ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಇರುವ ಘಟಕ್ಕೆ ಇದನ್ನು ರವಾನಿಸಬೇಕು. ಆದರೆ, ಇದರ ನಿರ್ವಹಣೆ ಮಾಡಬೇಕಾದ ಆಸ್ಪತ್ರೆಯ ಸಿಬ್ಬಂದಿ ಈ ಬಗ್ಗೆ ನಿರ್ಲಕ್ಷ್ಯ ತೋರಿದೆ.

ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯ ಬೇಡ: ಬಾಟಲಿಗಳು, ಸಿರಿಂಜ್‌ಗಳು ಜಾನುವಾರುಗಳಿಗೆ ಮಾರಕವಾಗಿ ಪರಿಣಮಿಸಬಹುದು. ಅಲ್ಲದೆ, ಅಕ್ಕಪಕ್ಕದ ಜಮೀನುಗಳ ರೈತರ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಬಗ್ಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯ ಸಲ್ಲದು. ಇಂತಹ ಘಟನೆಗಳು ಹಲವು ತಿಂಗಳುಗಳಿಂದ ನಡೆಯುತ್ತಿದೆ. ಈ ಬಗ್ಗೆ ದೂರುಗಳನ್ನೂ ನೀಡಲಾಗಿದೆ. ಆದರೆ, ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ಕ್ರಮವಹಿಸುತ್ತಿಲ್ಲ ಎಂಬುದು ಸ್ಥಳೀಯರಾದ ಮನು, ರವಿ ಅವರ ಆರೋಪ.

 

Advertisement

-ಫೈರೋಜ್‌ ಖಾನ್

Advertisement

Udayavani is now on Telegram. Click here to join our channel and stay updated with the latest news.

Next