Advertisement
ಆಸ್ಪತ್ರೆಯಿಂದ ಬರುವ ಮಾಲಿನ್ಯ ಭರಿತ ಕೊಳಚೆ ನೀರು ಹಲವು ವರ್ಷಗಳಿಂದ ನೂರಾರು ಜನರು ನಿತ್ಯ ಪ್ರಯಾಣಿಸುವ ರಸ್ತೆಯಲ್ಲೇ ಹರಿದು ಹೋಗುತ್ತಿದೆ. ಇದರಿಂದ ಉಂಟಾಗಬಹುದಾದ ಸಮಸ್ಯೆಗಳ ಅರಿವಿಲ್ಲದಂತೆ ವರ್ತಿಸುವ ಜನರು ಕಣ್ಣಿದ್ದೂ ಕುರುಡಾದ ಅವಸ್ಥೆ ಅಣಂಗೂರಲ್ಲಿ ಸೃಷ್ಠಿಯಾಗಿದೆ.
ಆಸ್ಪತ್ರೆಯಿಂದ ಬರುವ ಮಲಿನ ನೀರು ಶೇಖರಣೆಯಾಗಿ ರಸ್ತೆಯ ಒಂದು ಭಾಗದಲ್ಲಿ ಕೃತಕ ತೋಡು ನಿರ್ಮಾಣವಾಗಿದೆ. ಶಾಲೆಗೆ ತೆರಳುವ ತುಂಟ ಮಕ್ಕಳ ನೀರಾಟ, ವಾಹನಗಳು ಸಾಗುವಾಗ ಪಾದಚಾರಿಗಳಿಗೆ ಕೊಳಕು ನೀರಿನ ಅಭಿಷೇಕ ಸರ್ವಸಾಮಾನ್ಯ.
Related Articles
ಕಳೆದ ಮಳೆಗಾಲ ಪ್ರಾರಂಭಕ್ಕೂ ಮುನ್ನ ರಸ್ತೆ ಅಗೆದು ಪೈಪ್ ಲೈನ್ ಮೂಲಕ ಮಲಿನ ಜಲ ವಿಲೇವಾರಿ ಮಾಡುವ ಕ್ರಮ ಕೈಗೊಳ್ಳಲಾಗಿತ್ತಾದರೂ ಅದು ಜನರ ಕಣ್ಕಟ್ಟುವ ಪ್ರಯತ್ನ ಮಾತ್ರವೇ ಆಗಿತ್ತು ಎನ್ನುವುದು ವಾಸ್ತವ. ಯಾಕೆಂದರೆ ರಸ್ತೆಯ ಇನ್ನೊಂದು ಬದಿಗಿರುವ ತೆರೆದ ಪ್ರದೇಶದಲ್ಲಿ ನೀರು ಹರಿದುಹೋಗುವುದು ಕಂಡುಬರುತ್ತಿತ್ತು. ಪ್ರಸ್ತುತ ಅಳವಡಿಸಿರುವ ಪೈಪಿನ ಬಾಯಿ ಮುಚ್ಚಿಹೋಗಿ ಮತ್ತೆ ನೀರು ರಸ್ತೆಯಲ್ಲೇ ತುಂಬುವಂತಾಗಿದೆ.
Advertisement
ಸಾಮಾಜಿಕ ಮುಖಂಡರು, ಜನರ ಹಿತರಕ್ಷಕರೆನಿ ಸಿಕೊಂಡ ಹಲವರು ಪ್ರತಿದಿನ ಈ ರಸ್ತೆಯಲ್ಲಿ ಹಾದುಹೋಗುತ್ತಿದ್ದರೂ ಜನರ ಆರೋಗ್ಯದ ದೃಷ್ಟಿಯಿಂದಲಾದರೂ ಕಾರ್ಯಪ್ರವೃತ್ತರಾಗದೇ ಇರುವುದು ವಿಪರ್ಯಾಸ.
ಸೊಳ್ಳೆಗಳ ಆವಾಸ ಕೇಂದ್ರ ಮಳೆಗಾಲದಲ್ಲಿ ಮಳೆನೀರಿನೊಂದಿಗೆ ಮಲಿನ ಜಲವೂ ಸೇರಿ ಹಲವಾರು ರೋಗಗಳಿಗೆ ಕಾರಣವಾಗುತ್ತದೆ. ಸರಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಅತ್ಯುತ್ತಮ ಚಿಕಿತ್ಸೆ ಲಭ್ಯವಿದ್ದು ಉಚಿತವಾಗಿ ದೊರೆಯುವ ಕಾರಣ ದೂರ ದೂರದ ಊರಿಂದಲೂ ಇಲ್ಲಿಗೆ ಚಿಕಿತ್ಸೆಗಾಗಿ ಜನರು ಬರುತ್ತಾರೆ. ಆದುದರಿಂದ ಆಸ್ಪತ್ರೆಯಿಂದ ಹೊರಹರಿಯುವ ನೀರಿನ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಹೆಚ್ಚಿನ ಸಮಸ್ಯೆಯನ್ನು ಎದುರಿಸಬೇಕಾಗಿ ಬರುವುದರಲ್ಲಿ ಸಂದೇಹವಿಲ್ಲ. ವಿದ್ಯಾಗಣೇಶ್ ಅಣಂಗೂರು