Advertisement

ಎಲ್ಲೆಡೆ ಆಸ್ಪತ್ರೆ ಮಾದರಿ ಸ್ವಚ್ಛತೆ

12:19 AM Mar 10, 2020 | Lakshmi GovindaRaj |

ಬೆಂಗಳೂರು: ಕೊರೊನಾ ವೈರಸ್‌ ಬಗ್ಗೆ ಮುಂಜಾಗ್ರತೆ ವಹಿಸುವ ಉದ್ದೇಶದಿಂದ ನಗರದ ಮಾಲ್‌, ವಾಣಿಜ್ಯ ಉದ್ದಿಮೆಗಳು, ಜನನಿಬಿಡ ಪ್ರದೇಶಗಳಲ್ಲಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ರೀತಿ ಸ್ವಚ್ಛತೆ ಕಾಪಾಡುವಂತೆ ನಿರ್ದೇಶನ ನೀಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ತಿಳಿಸಿದರು.

Advertisement

ನಗರದ ಹಲವೆಡೆ ಕಾಲರಾ ಪ್ರಕರಣಗಳು ಬೆಳಕಿಗೆ ಬಂದಿವೆ ಹಾಗೂ ಕೊರೊನಾ ವೈರಸ್‌ ಬಗ್ಗೆಯೂ ಆತಂಕದ ವಾತಾವರಣ ಉದ್ಭವವಾಗಿರುವ ಹಿನ್ನೆಲೆಯಲ್ಲಿ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಸೋಮವಾರ ಮೇಯರ್‌ ಎಂ.ಗೌತಮ್‌ಕುಮಾರ್‌ ಹಾಗೂ ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಪಾಲಿಕೆಯ ಆರೋಗ್ಯಾಧಿಕಾರಿಗಳ ತುರ್ತು ಸಭೆಯನ್ನು ನಡೆಸಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆಯುಕ್ತರು, ಕೊರೊನಾ ವೈರಸ್‌ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಿ, ಇಲ್ಲವಾದರೆ ಸಾರ್ವಜನಿಕರ ಸಂಶಗಳಿಗೆ ಉತ್ತರ ಸಿಗುವುದಿಲ್ಲ. ಹೀಗಾಗಿ, ಈ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳಿ ಎಂದು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಇನ್ನು ಇತ್ತೀಚೆಗೆ ಐಟಿ-ಬಿಟಿಯವರು ವಿದೇಶಕ್ಕೆ ಹೋಗಿ ಬಂದಿರುವ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಐಟಿ-ಬಿಟಿ ಕಂಪನಿಗಳು, ವಸತಿ ಸಮುಚ್ಛಯಗಳ ಮುಖ್ಯಸ್ಥರೊಂದಿಗೆ ಪಾಲಿಕೆ ಸಭೆ ನಡೆಸಿದ್ದು, ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಆಸ್ಪತ್ರೆಗಳಲ್ಲಿ ನೆಲ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಮಾಲ್‌ ಮತ್ತು ಜನ ನಿಬಿಡ ಪ್ರದೇಶಗಳು ಮತ್ತು ವಾಣಿಜ್ಯ ಉದ್ದಿಮೆಗಳಲ್ಲೂ ಸ್ವಚ್ಛತೆ ಕಾಪಾಡುವಂತೆ ಮಾಲೀಕರಿಗೆ ಸೂಚಿಸಲಾಗಿದೆ. ಅಲ್ಲದೆ, ನಗರದ ಎಲ್ಲಾ ಶೌಚಾಲಯಗಳಲ್ಲಿ ಕೈ ತೊಳೆಯಲು ಸಾಬೂನು ಅಥವಾ ದ್ರವ ರೂಪದ ಕೆಮಿಕಲ್‌ ಅನ್ನು ಕಡ್ಡಾಯವಾಗಿ ಇಡುವಂತೆ ನಿರ್ದೇಶನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಗ್ಯಾಧಿಕಾರಿಗಳನ್ನು ನಿಯೋಜನೆ ಮಾಡಿದ್ದು, ಶಂಕಿತ ವ್ಯಕ್ತಿಗಳನ್ನು ತಪಸಾಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಮೇಯರ್‌ ಎಂ.ಗೌತಮ್‌ಕುಮಾರ್‌ ಮಾತನಾಡಿ, ಆರೋಗ್ಯಾಧಿಕಾರಿಗಳು ಸದ್ಯ ಹೆಚ್ಚು ಶ್ರಮವಹಿಸಿ ಕೆಲಸ ಮಾಡಬೇಕಾಗಿದೆ. ಮುಂಜಾಗ್ರತಾ ಕ್ರಮವಾಗಿ ಹಸ್ತಲಾಘವ ಮಾಡುವ ಬದಲು ನಮಸ್ಕರಿಸುವುದು, ಕೈಯಿಂದ ಮೂಗು, ಬಾಯಿ ಹಾಗೂ ಕಣ್ಣು ಮುಟ್ಟಿಕೊಳ್ಳದಿರುವುದು, ಕೆಮ್ಮುವಾಗ ಬಟ್ಟೆ ಅಡ್ಡ ಇಡುವಂತಹ ಮುಂಜಾಗ್ರತಾ ಕ್ರಮ ಅನುಸರಿಸುವಂತೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಎಂದು ಹೇಳಿದರು.

ಸಭೆಯಲ್ಲಿ ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾದ ಮಂಜುನಾಥ್‌ ರಾಜು.ಜಿ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ್‌.ಎಲ್‌, ವಿಶೇಷ ಆಯುಕ್ತರು(ಆರೋಗ್ಯ) ಡಾ.ರವಿಕುಮಾರ್‌ ಸುರಪುರ, ವಿಶೇಷ ಆಯುಕ್ತರು(ಘನತ್ಯಾಜ್ಯ) ಡಿ.ರಂದೀಪ್‌, ಮುಖ್ಯ ಆರೋಗ್ಯಾಧಿ ಕಾರಿ(ಸಾರ್ವಜನಿಕ) ಡಾ.ವಿಜೇಂದ್ರ, ಮುಖ್ಯ ಆರೋಗ್ಯಾಧಿಕಾರಿ(ಕ್ಲೀನಿಕಲ್‌) ಡಾ.ನಿರ್ಮಲಾ ಬುಗ್ಗಿ, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರಾದ ರಾಮಚಂದ್ರ ಮತ್ತಿತರರು ಹಾಜರಿದ್ದರು.

Advertisement

ಸಂಬಳಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದೀರಾ?: ಪಾಲಿಕೆಯ ಆರೋಗ್ಯಾಧಿಕಾರಿಗಳಿಗೆ ವಹಿಸಿರುವ ಜವಾಬ್ದಾರಿಯನ್ನು ಸರ್ಮಪಕವಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಬಿ.ಎಚ್‌.ಅನಿಲ್‌ಕುಮಾರ್‌ ಅವರು ಆರೋಗ್ಯ ವಿಭಾಗದ ಅಧಿಕಾರಿ ಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಆರೋಗ್ಯಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ ಆಯುಕ್ತರು, ಸಮಸ್ಯೆಗಳು ನಿಮಗೆ ಕಾಣುತ್ತಿಲ್ಲವೇ, ನೀವು ಪಡೆಯುತ್ತಿರುವ ಸಂಬಳಕ್ಕೆ ತಕ್ಕಂತೆ ನೀವು ಕೆಲಸ ಮಾಡುತ್ತಿದ್ದೀರಾ ಎಂದು ನಿಮ್ಮನ್ನೇ ಪ್ರಶ್ನಿಸಿಕೊಳ್ಳಿ, ಈ ರೀತಿ ಕೆಲಸ ಮಾಡುವುದಾದರೆ ನಿಮ್ಮನ್ನು ನೇಮಿಸಿಕೊಳ್ಳುವ ಅಗತ್ಯತೆಯಾದರೂ ಏನಿದೆ ಎಂದು ತೀಕ್ಷ್ಣವಾಗಿ ಪ್ರಶ್ನೆ ಮಾಡಿದರು.

ನಿಮ್ಹಾನ್ಸ್‌, ಸಂಜಯ್‌ ಗಾಂಧಿ ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಕೊರತೆ ಇದೆ. ಆಸ್ಪತ್ರೆಗಳೇ ಹೆಚ್ಚಚಿರುವ ಭಾಗದಲ್ಲೇ ಸcಚ್ಛತೆ ಕಾಪಾಡಿಕೊಳ್ಳದೆ ಇದ್ದರೆ ಹೇಗೆ, ಕಸ, ಒಳಚರಂಡಿ ನೀರು ಹರಿಯುವ ಭಾಗದಲ್ಲೇ ಆ್ಯಂಬುಲೆನ್ಸ್‌ ಗಳನ್ನು ನಿಲ್ಲಿಸಿಕೊಳ್ಳಲಾಗಿದೆ, ಕಲ್ಲಂಗಡಿ ಸೇರಿದಂತೆ ವಿವಿಧ ತಿನಿಸುಗಳನ್ನು ಮಾರಾಟ ಮಾಡಲಾ ಗುತ್ತಿದೆ. ಕಸ ವಿಭಾಗದವರು, ಆರೋಗ್ಯಾಧಿಕಾರಿಗಳು ನಿಮ್ಮ ಹೊಣೆ ಅರಿತು ಕೊಳ್ಳಿ ಇದೇ ರೀತಿ ಕೆಲಸ ಮಾಡಿದರೆ ಸಾರ್ವಜನಿಕರು ರಸ್ತೆ ಯಲ್ಲಿ ನಿಲ್ಲಿಸಿ ಹೊಡೆಯುವ ಮಟ್ಟಕ್ಕೆ ಹೋಗಲಿದೆ ಅದಕ್ಕೆ ಅವಕಾಶ ನೀಡಬೇಡಿ.

ಸಣ್ಣ ಕೆಲಸವನ್ನು ನಿಮ್ಮಿಂದ ಮಾಡಲು ಸಾಧ್ಯವಾಗುತ್ತಿಲ್ಲವೇ? ಪೌರಕಾರ್ಮಿ ಕರನ್ನು ನೇಮಿಸಿಕೊಳ್ಳುವುದಕ್ಕೂ ಆಯುಕ್ತರೇ ಆದೇಶ ಮಾಡಬೇಕೇ ಎಂದು ಪ್ರಶ್ನೆ ಮಾಡಿದರು. ಆಟೋ ಟಿಪ್ಪರ್‌ಗಳು, ಕಾಂಪ್ಯಾಕ್ಟರ್‌ಗಳ ಸ್ವಚ್ಛತೆ ನೋಡಿ, ಇದರಿಂದಲೇ ಅರ್ಧ ಸಾಂಕ್ರಾಮಿಕ ರೋಗಗಳು ಹಬ್ಬುವ ಸಾಧ್ಯತೆ ಇದೆ. ಇದು ಪ್ರಾಥ ಮಿಕ ಹಂತದ ಕೆಲಸಗಳು ಇದನ್ನು ಸರ್ಮ ಪಕ ವಾಗಿ ನಿರ್ವಹಣೆ ಮಾಡದಿದ್ದರೆ ಹೇಗೆ ಎಂದರು. ಇದೇ ಬೆಳವಣಿಗೆ ಮುಂದುವರಿದರೆ ಕಠಿಣ ಕ್ರಮ ಕೈಗೆತ್ತುಕೊಳ್ಳಲಿದ್ದೇವೆ. ನಿಮ್ಮ ವರ್ತನೆ ಸರಿಪಡಿಸಿ ಕೊಳ್ಳಿ, ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಕೋಲಾಹಲ ಸೃಷ್ಟಿಸಿದ ಕೊರೊನಾ ಇ-ಮೇಲ್‌: ಕೊರೊನಾ ವೈರಸ್‌ ಶಂಕೆ ವ್ಯಕ್ತಪಡಿಸಿ ನಗರದ ಪೋಷಕರು ಶಾಲೆಯೊಂದಕ್ಕೆ ಕಳುಹಿಸಿದ “ಇ-ಮೇಲ್‌’ ಸೋಮವಾರ ಕಾಳಿYಚ್ಚಿನಂತೆ ಹಬ್ಬಿ, ಕೋಲಾಹಲ ಸೃಷ್ಟಿಸಿದ ಘಟನೆ ನಡೆದಿದೆ. ಮಗುವಿನ ಪೋಷಕರು, ಕೊರೊನಾ ವೈರಸ್‌ ರೋಗದ ಲಕ್ಷಣಗಳು ತಮ್ಮಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಗುವಿಗೆ ರಜೆ ನೀಡುವಂತೆ ಕೋರಿ ಶಾಲಾ ಮುಖ್ಯಸ್ಥರಿಗೆ ಇ-ಮೇಲ್‌ ಕಳಿಸಿದ್ದಾರೆ. ಆದರೆ, ಕೆಲವೇ ಹೊತ್ತಿನಲ್ಲಿ ಆ ಮಿಂಚಂಚೆಯು ಸಾಮಾಜಿಕ ಜಾಲತಾಣಗಳಲ್ಲಿ ಅಕ್ಷರಶಃ ಮಿಂಚಿನಂತೆ ಹರಿದಾಡಿ, ಆತಂಕ ಸೃಷ್ಟಿಸಿದೆ.

ಇದರ ಪರಿಣಾಮ ಕೆಲವೇ ಹೊತ್ತಿನಲ್ಲಿ ಆ ಶಾಲೆಗೆ ರಜೆ ಘೋಷಿಸಲಾಗಿದೆ. ವಿಚಿತ್ರವೆಂದರೆ, ಮೇಲ್‌ನ ಸ್ಕ್ರೀನ್‌ಶಾಟ್‌ ತೆಗೆದು ಯಥಾವತ್ತಾಗಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಡಲಾಗಿದೆ. ಅದರಲ್ಲಿ ಮೇಲ್‌ ಕಳುಹಿಸಿದ ಪೋಷಕರು ನೆಲೆಸಿದ ಅಪಾರ್ಟ್‌ಮೆಂಟ್‌ ಹೆಸರು ಕೂಡ ಉಲ್ಲೇಖಗೊಂಡಿದೆ. ಇದರಿಂದ ಉದ್ದೇಶಿತ ಅಪಾರ್ಟ್‌ಮೆಂಟ್‌ನಲ್ಲಿರುವ ಮಕ್ಕಳನ್ನೂ ಆಯಾ ಶಾಲಾ ಮುಖ್ಯಸ್ಥರು ಮನೆಗೆ ವಾಪಸ್‌ ಕಳುಹಿಸಿದ ಘಟನೆಯೂ ವರದಿಯಾಗಿದೆ.

ಆಗಿದ್ದಿಷ್ಟು: ನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ನೆಲೆಸಿರುವ ಪೋಷಕರು ಈಚೆಗೆ ವಿದೇಶದಿಂದ ಹಿಂತಿರುಗಿದ್ದರು. ಅವರಲ್ಲಿ ಕೊರೊನಾ ವೈರಸ್‌ನ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೋಷಕ, “ವೇಗವಾಗಿ ವ್ಯಾಪಿಸುತ್ತಿರುವ ಹಾಗೂ ಚಿರಪರಿಚಿತವಾಗಿರುವ ಕೊರೊನಾ ವೈರಸ್‌ನ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನನ್ನ ಮಗುವಿಗೆ ರಜೆ ನೀಡಬೇಕು’ ಎಂದು ಸ್ವಯಂಪ್ರೇರಿತವಾಗಿ ಶಾಲಾ ಮುಖ್ಯಸ್ಥರಿಗೆ ಮೇಲ್‌ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಈ ಮೇಲ್‌ ಅನ್ನು ನೋಡಿ ಆತುರ ದಲ್ಲಿ ಶಾಲಾ ಆಡಳಿತ ಮಂಡಳಿಯು ದಿಢೀರ್‌ ಶಾಲೆಗೇ ರಜೆ ಘೋಷಿಸಿದೆ. ಆ ಶಾಲೆಯಲ್ಲಿ ಎಲ್‌ಕೆಜಿಯಿಂದ ಎಸ್ಸೆಸ್ಸೆಲ್ಸಿವರೆಗೆ ಓದು ತ್ತಿರುವ ಮಕ್ಕಳೂ ಇದ್ದಾರೆ. ನಂತರ ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದರಿಂದ ಕೆಲವೇ ಹೊತ್ತಿನಲ್ಲಿ ವೈರಲ್‌ ಆಗಿದೆ. ತುಸು ಹೊತ್ತಿನಲ್ಲೇ ಅಪಾರ್ಟ್‌ಮೆಂಟ್‌ನಲ್ಲಿರುವ ವಿವಿಧ ಶಾಲಾ ಮಕ್ಕಳನ್ನೂ ರಜೆ ನೀಡಿ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇ-ಮೇಲ್‌ ಬಗ್ಗೆ ಶಿಕ್ಷಣ ಇಲಾಖೆಗೆ ಮಾಹಿತಿಯನ್ನೂ ನೀಡಲಾಗಿದೆ ಎನ್ನಲಾಗಿದೆ.

ಬಯೋಮೆಟ್ರಿಕ್‌ಗೆ ಬೈ-ಬೈ!: ಕೊರೊನಾ ವೈರಸ್‌ ಪರಿಣಾಮ ಐಟಿ-ಬಿಟಿ ಕಂಪನಿಗಳಲ್ಲಿ ಉದ್ಯೋಗಿಗಳ ಹಾಜರಾತಿಗೆ ಅಳವಡಿಸಲಾಗಿದ್ದ ಬಯೋಮೆಟ್ರಿಕ್‌ ಯಂತ್ರವನ್ನು ನಿಷ್ಕ್ರಿಯಗೊಳಿಸಲಾಗಿದೆ. ವೈರಸ್‌ ಸಾಂಕ್ರಾಮಿಕ ಆಗಿರುವುದರಿಂದ ಬಯೋಮೆಟ್ರಿಕ್‌ ಯಂತ್ರಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಹುತೇಕ ಐಟಿ-ಬಿಟಿ ಕಂಪನಿಗಳಲ್ಲಿ ನಿಷ್ಕ್ರಿಯಗೊಳಿಸಲಾಗಿದೆ. ಎಲ್ಲ ಕಡೆಗೂ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿದೆ. ಕಂಪನಿಗಳಲ್ಲಿ ಮೀಟಿಂಗ್‌ಗಳೆಲ್ಲವನ್ನೂ ರದ್ದುಗೊಳಿಸಲಾಗಿದೆ. ಇನ್ನೂ ಮುಂದುವರೆದು, ವೈಯಕ್ತಿಕ ವಿದೇಶಿ ಪ್ರವಾಸಗಳನ್ನೂ ಸಾಧ್ಯವಾದಷ್ಟು ರದ್ದುಗೊಳಿಸಿ ಎಂದು ಮೌಖೀಕವಾಗಿ ಮನವಿ ಮಾಡಲಾಗಿದೆ ಎಂದು ಉದ್ಯೋಗಿಗಳು ತಿಳಿಸಿದ್ದಾರೆ.

ಪಾಲಿಕೆ ಶಾಲೆಗಳಲ್ಲೂ ಮುಂಜಾಗ್ರತೆ: ಪಾಲಿಕೆಯ ಶಾಲಾ- ಕಾಲೇಜುಗಳಲ್ಲೂ ಕೊರೊನಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಶಿಕ್ಷಣ ವಿಭಾಗದ ಸಹಾಯಕ ಆಯುಕ್ತರಾದ ನಾಗೇಂದ್ರ ನಾಯಕ್‌ ತಿಳಿಸಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ನಾಗೇಂದ್ರನಾಯಕ್‌ ಅವರು, ಈಗಾಗಲೇ ಸರ್ಕಾರ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಹಾಗೂ ಗ್ರಾಮಂತರ ಭಾಗದ ಸರ್ಕಾರಿ, ಅನುದಾನಿತ ಹಾಗೂ ರಹಿತ ಶಾಲೆಗಳ ನರ್ಸರಿ, ಎಲ್‌ಕೆಜಿ ಮತ್ತು ಯುಕೆಜಿಯ ವಿದ್ಯಾರ್ಥಿಗಳಿಗೆ ಮುಂದಿನ ಆದೇಶದ ವರೆಗೆ ರಜೆ ಘೋಷಿಸಲಾಗಿದೆ.

ಅದರಂತೆ ಪಾಲಿಕೆಯ ವಿದ್ಯಾರ್ಥಿಗಳಿಗೂ ರಜೆ ನೀಡಲಾಗಿದೆ ಎಂದರು. ಇನ್ನು ಶಾಲಾ ಮಕ್ಕಳಿಗೆ ಪಾಲಿಕೆಯ ಆರೋಗ್ಯಾಧಿಕಾರಿಗಳಿಂದ ಮಾತ್ರ ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಲು ಅವಕಾಶ ನೀಡಲಾಗಿದೆ.ಅಲ್ಲದೆ, ಶಾಲಾ ಮಕ್ಕಳನ್ನು ಯಾವುದೇ ಸಭೆ ಮತ್ತು ಸಮಾರಂಭಗಳಲ್ಲಿ ಭಾಗವಹಿಸುವುದಕ್ಕೆ ಅವಕಾಶ ನೀಡದಂತೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next