ವಾಡಿ: ಸರ್ಕಾರದ ಮೇಲೆ ಮುನಿಸಿಕೊಂಡಿರುವ ಆರೋಗ್ಯ ಇಲಾಖೆಯ ಒಳಗುತ್ತಿಗೆ ನೌಕರರು ಸೇವೆ ಖಾಯಂ ಮಾಡುವಂತೆ ಆಗ್ರಹಿಸಿ ರಾಜ್ಯಮಟ್ಟದಲ್ಲಿ ಅನಿರ್ಧಿಷ್ಟಾವದಿ ಮುಷ್ಕರ ಹೂಡಿ ಮೂವತ್ತು ದಿನಗಳು ಕಳೆದಿದ್ದಾರೆ. ಸರ್ಕಾರ ಬೇಡಿಕೆ ಈಡೇರಿಸಲು ಹಿಂದೇಟು ಹಾಕಿರುವ ಕಾರಣ ಹೋರಾಟ ಮುಂದುವರೆದಿದೆ. ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳು ಆಸ್ಪತ್ರೆಗೆ ಬೆನ್ನು ತೋರಿಸಿದ್ದರಿಂದ ಚಿತ್ತಾಪುರ ತಾಲೂಕಿನ ಗ್ರಾಮೀಣ ಪ್ರದೇಶಗಳ ಸರ್ಕಾರಿ ಆರೋಗ್ಯ ಸೇವೆ ತೀವ್ರ ಸಂಕಷ್ಟಕ್ಕೀಡಾಗಿದೆ. ಚಿಕಿತ್ಸೆಗೆಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಗಮಿಸುತ್ತಿರುವ ಬಡ ರೋಗಿಗಳು ವೈದ್ಯಕೀಯ ನೆರವು ಲಭ್ಯವಾಗದೆ ನರಳಾಡುತ್ತಿದ್ದಾರೆ.
ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎನ್‌ಎಚ್‌ಎಂ-ಒಳ ಗುತ್ತಿಗೆ ನೌಕರರ ಸಂಘ ಫೆ.13 ರಿಂದ ಚಳುವಳಿ ಆರಂಬಿಸಿ ಹಟ ತೊಟ್ಟಿದ್ದು, ನೌಕರರ ಈ ಮುಷ್ಕರ ಸರ್ಕಾರಿ ಆರೋಗ್ಯ ಸೇವೆಯ ಮೇಲೆ ದೊಡ್ಡ ಪರಿಣಾಮ ಬಿದ್ದಿದೆ. ಜ್ವರ, ಕೆಮ್ಮು, ನೆಗಡಿ, ನೋವು, ಹೆರಿಗೆ, ರಕ್ತ ಗಾಯಗಳಿಗೆ ಪ್ರಾಥಮಿಕ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಹೆರಿಗಾಗಿ ಬರುವ ಮಹಿಳೆಯರು ನೋವು ಸಹಿಸಲಾಗದೆ ಬೆಡ್‌ಗಳ ಮೇಲೆ ಮಲಗಿ ಹಿಂಸೆ ಅನುಭವಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ವಾಡಿ ನಗರ ಪ್ರಾಥಮಿಕ ಕೇಂದ್ರದಲ್ಲಿ ವೈದ್ಯಕೀಯ ಸೇವೆ ಸ್ಥಗಿತಗೊಂಡಿದೆ. ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹನ್ನೊಂದು ಜನ ನೌಕರರು ಮುಷ್ಕರದಲ್ಲಿದ್ದು, ಕೇವಲ ಒರ್ವ ವೈದ್ಯೆ ಮತ್ತು ಓರ್ವ ಶುಷ್ರೂಷಕಿ ಕರ್ತವ್ಯದಲ್ಲಿದ್ದಾರೆ. ಪ್ರತಿದಿನ 200 ಕ್ಕೂ ಹೆಚ್ಚು ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲು ಇವರು ಹರಸಾಹಸ ಪಡುತ್ತಿದ್ದಾರೆ.
ಇನ್ನೊಂದೆಡೆ ವೈದ್ಯರನ್ನು ಭೇಟಿಯಾಗಲು ಬೆಳಗ್ಗೆಯಿಂದ ಆಸ್ಪತ್ರೆಯಲ್ಲಿ ಕುಳಿತು ಬೇಸತ್ತರೂ ಚಿಕಿತ್ಸೆ ಸಿಗುತ್ತಿಲ್ಲ. ವಯೋ ವೃದ್ದರು ಮತ್ತು ಅಂಗವಿಕಲರ ಗೋಳು ಇನ್ನೂ ಘೋರ. ಸಕಾಲದಲ್ಲಿ ಮಕ್ಕಳಿಗೂ ಚಿಕಿತ್ಸೆ ಸಿಗದೆ ಪೋಷಕರು ನಗರಗಳತ್ತ ಹೊರಡುತ್ತಿದ್ದಾರೆ. ಖಾಸಗಿ ವಾಹನಗಳ ಮೂಲಕ ಪಟ್ಟಣ ಮತ್ತು ನಗರ ಪ್ರದೇಶಗಳ ಖಾಸಗಿ ಆಸ್ಪತ್ರೆಗಳಿಗೆ ದುಬಾರಿ ಹಣ ಪಾವತಿಸಬೇಕಾದ ಅನಿವಾರ್ಯ ಪರಸ್ಥಿತಿ ಆರೋಗ್ಯ ಇಲಾಖೆ ಸೃಷ್ಠಿಸಿದೆ. ಹದಗೆಟ್ಟ ಆರೋಗ್ಯ ವ್ಯವಸ್ಥೆಗೆ ಹಳ್ಳಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಮಸ್ಯೆ ಬಗೆಹರಿಸದ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ.
ಅತ್ತ ಆರೋಗ್ಯ ನೌಕರರ ಮುಷ್ಕರ ಕೊನೆಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಇತ್ತ ಸರ್ಕಾರವೂ ಒಂದು ಸ್ಪಷ್ಟ ನಿಲುವು ಪ್ರಕಟಿಸುತ್ತಿಲ್ಲ. ಈ ಮಧ್ಯೆ ಗ್ರಾಮೀಣ ಆರೋಗ್ಯ ಸೇವೆ ಜನಾಕ್ರೋಶಕ್ಕೆ ತುತ್ತಾಗಿದೆ.
– ಮಡಿವಾಳಪ್ಪ ಹೇರೂರ