ಸಂಬರಗಿ: ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸುಸಜ್ಜಿತವಾದ ಕಟ್ಟಡವಿದ್ದರೂ ಸಿಬ್ಬಂದಿ ಇಲ್ಲದ ಕಾರಣ ರೋಗಿಗಳಿಗೆ ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಬರಗಿ ಶಿರೂರ, ಪಾಂಡೆಗಾಂವ, ಅರಳಿಹಟ್ಟಿ ಖೋತವಾಡಿ ಗ್ರಾಮದ ರೋಗಿಗಳಿಗೆ ಈ ಆಸ್ಪತ್ರೆಯೇ ಮೂಲ ಆಧಾರವಾಗಿದೆ. ಆದರೆ ಈ ಸುಸಜ್ಜಿತ ಆಸ್ಪತ್ರೆಯಲ್ಲಿ ಸಿಬ್ಬಂದಿ ಇಲ್ಲದ ಕಾರಣ ರೋಗಿಗಳು ಖಾಸಗಿ ಆಸ್ಪತ್ರೆಯತ್ತ ಮುಖ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಆಸ್ಪತ್ರೆಗೆ ಬರುವ ರೋಗಿಗಳು ಆರೋಪವಾಗಿದೆ.
ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ, ಔಷಧ ವಿತರಕರು, ಗುಮಾಸ್ತ ಇಲ್ಲದ ಕಾರಣ ಇಲ್ಲಿ ರೋಗಿಗಳಿಗೆ ಉಪಚಾರ ಪಡೆಯಲು ಅಸಾಧ್ಯವಾಗುತ್ತಿದೆ. ಆಸ್ಪತ್ರೆಯಲ್ಲಿ 10 ಹಾಸಿಗೆ, ರಕ್ತ, ಮೂತ್ರ ತಪಾಸನೆ ವ್ಯವಸ್ಥೆಯಿದೆ. ಆದರೆ ಸಿಬ್ಬಂದಿ ಇಲ್ಲದ ಕಾರಣ ದಿನನಿತ್ಯ ಆಸ್ಪತ್ರೆಗೆ ಬರುವ ರೋಗಿಗಳು ಇಲ್ಲಿನ ಅವ್ಯವಸ್ಥೆ ನೋಡಿ ಮರಳಿ ಹೋಗುವಂತಾಗಿದೆ. ಇಲ್ಲಿರುವ ಸಮಸ್ಯೆ ಕುರಿತು ಅನೇಕ ಬಾರಿ ಮೇಲಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಶೀಘ್ರವೇ ಇಲ್ಲಿರುವ ಆಸ್ಪತ್ರೆಗೆ ವೈದ್ಯಾಧಿಕಾರಿ ಸೇರಿದಂತೆ ಇತರ ಸಿಬ್ಬಂದಿ ನೇಮಕ ಮಾಡುವ ಮೂಲಕ ರೋಗಿಗಳಿಗಾಗುವ ತೊಂದರೆಗೆ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮದಲ್ಲಿರುವ ಆಸ್ಪತ್ರೆಯಲ್ಲಿ ಸಿಬ್ಬಂದಿ ಇಲ್ಲದ ಕಾರಣ ಸುತ್ತಮುತ್ತ ಗ್ರಾಮದಲ್ಲಿರುವ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಶೀಘ್ರವೇ ಸಂಬಂಧಪಟ್ಟ ಅಧಿಕಾರಿಗಳು ಸಿಬ್ಬಂದಿ ನೇಮಕಾತಿ ಮಾಡಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು.
. ಬಸನಗೌಡ ಪಾಟೀಲ
ಕರವೇ ತಾಲೂಕಾಧ್ಯಕ್ಷ
ಸಂಬರಗಿ ಗ್ರಾಮದ ಆಸ್ಪತ್ರೆ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಅಲ್ಲಿರುವ ಸಮಸ್ಯೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
.
ಶಶಿಕಾಂತ ಮುನ್ಯಾಳ
ಚಿಕ್ಕೋಡಿ ಹೆಚ್ಚುವರಿ ವೈದ್ಯಾಧಿಕಾರಿ