ತಿಪಟೂರು: ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ತಮಗೆ 3 ತಿಂಗಳಾದರೂ ಸಂಬಳ ನೀಡಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ನಮ್ಮ ಸಮಸ್ಯೆ ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ನಗರದ ಸಾರ್ವಜನಿಕ ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿ ಹಾಗೂ ಡಿ-ಗ್ರೂಪ್‌ನ ನೌಕರರು ಆಸ್ಪತ್ರೆ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.
ಸ್ವಚ್ಛತಾ ಸಿಬ್ಬಂದಿ ಧರ್ಮಾವತಿ ಮಾತನಾಡಿ, ನಮ್ಮನ್ನು ಹೊರಗುತ್ತಿಗೆ ಆಧಾರದ ಮೇಲೆ ಬೆಂಗಳೂರಿನ ಡಿಟೆಕ್ಟ್ವಿಲ್ ಖಾಸಗಿ ಕಂಪನಿ ಕೆಲಸಕ್ಕೆ ಪಡೆದಿದೆ. ಆದರೆ ನಮಗೆ ಡಿಸೆಂಬರ್‌ನಿಂದ ಇದುವರೆಗೆ ಸಂಬಳ ನೀಡಿಲ್ಲ. ಕುಟುಂಬ ನಿರ್ವಹಣೆ ಕಷ್ಟಕರವಾಗಿದ್ದು, ದೂರದ ಊರಿನಿಂದ ಬರುವ ನಮಗೆ ಬಸ್ ಪ್ರಯಾಣದರವೂ ಇಲ್ಲದಂತಾಗಿದೆ. ನಾವು ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದು, ಕುಟುಂಬ ನಿರ್ವಹಣೆ ತುಂಬಾ ಕಷ್ಟಕರವಾಗಿದೆ ಎಂದು ಹೇಳಿದರು.
ನಾವು 12 ಗಂಟೆ ಕೆಲಸ ಮಾಡುತ್ತೇವೆ. ಹಾಜರಾತಿಗೆ ಬಯೋಮೆಟ್ರಿಕ್ ವ್ಯವಸ್ಥೆ ಇಲ್ಲ. ಮಾಸಿಕವಾಗಿ 8721ರೂ., ಹಣ ನೀಡುತ್ತಾರೆ. ಸಂಬಳ ನೀಡಿ ಎಂದು ಇಲ್ಲಿನ ಮೇಲ್ವಿಚಾರಕ ಲೋಕೇಶ್ ಅವರನ್ನು ಕೇಳಿದರೆ ಮೊದಲು ನಿಯಮದ ಪ್ರಕಾರ ಕೆಲಸ ಮಾಡಿ, ನಮ್ಮ ಖಾತೆಗೆ ಹಣ ಬಂದಿಲ್ಲ. ನಿಮಗೆಲ್ಲಿಂದ ಕೊಡೋಣ ಎಂದು ಸಬೂಬು ಹೇಳುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಬ್ಬಂದಿ ಮಲ್ಲಿಕಾರ್ಜುನ ಮಾತನಾಡಿ, ನಮಗೆ ಡಿಟೆಕ್ಟ್ವಿಲ್ ಕಂಪನಿಯಿಂದ ಗುರುತಿನ ಚೀಟಿ ನೀಡಿದ್ದಾರೆ. ಅದರಲ್ಲಿ ಪಿಎಫ್ ನಂಬರ್ ಕೊಟ್ಟಿದ್ದು, ಇದುವರೆಗೂ ಅದು ಚಾಲ್ತಿಯಲ್ಲಿಲ್ಲ. ನಮಗೆ ಸಂಬಳ ನೀಡದೆ ಸತಾಯಿಸುತ್ತಿದ್ದಾರೆ. ನಮಗೆ ಸಂಬಳ ಕೊಡಿಸಿಕೊಡಿ ಎಂದು ಅಳಲು ತೋಡಿಕೊಂಡರು.
ಸ್ಥಳಕ್ಕೆ ಮೇಲ್ವಿಚಾರಕ ಲೋಕೇಶ್ ಭೇಟಿ ನೀಡಿ, ಈಗಾಗಲೇ 2 ತಿಂಗಳ ಸಂಬಳ ಮಂಜೂರು ಮಾಡುವಂತೆ ದಾಖಲಾತಿ ಸಿದ್ಧಪಡಿಸಿ ಸಂಬಂಧಿಸಿದ ಕಚೇರಿಗೆ ಕಳುಹಿಸಲಾಗಿದೆ. 3-4ದಿನಗಳಲ್ಲಿ ಹಣ ಮಂಜೂರದ ಕೂಡಲೇ ಸಂಬಳ ಕೊಡುತ್ತೇನೆ. ಅಲ್ಲಿಯವರೆಗೂ ಕಾಯಬೇಕು ಎಂದರು.
ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಈಶ್ವರಯ್ಯ ಮಾತನಾಡಿ, ಸಿಬ್ಬಂದಿಗಳ ಸಮಸ್ಯೆ ಬಗ್ಗೆ ಈಗಾಗಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ನಿರ್ದೇಶಕರಿಗೆ ಸಾಕಷ್ಟು ಬಾರಿ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ 2 ದಿನಗಳಲ್ಲಿ ಸಂಬಳ ನೀಡುವ ದಾಖಲಾತಿ ಪರಿಶೀಲಿಸಿ ಸಂಬಂಧಿಸಿದ ಇಲಾಖೆಗೆ ಕಳುಹಿಸಲಾಗಿದೆ ಎಂದರು. ಪ್ರತಿಭಟನೆಯಲ್ಲಿ ಸ್ವಚ್ಛತಾ ಸಿಬ್ಬಂದಿಗಳಾದ ನರಸಿಂಹರಾಜು, ಮಂಜುನಾಥ್ ಸೇರಿ 30ಕ್ಕೂ ಹೆಚ್ಚು ಸಿಬ್ಬಂದಿ ಇದ್ದರು.