ಆನೇಕಲ್: ಸರ್ಜಾಪುರ ಗ್ರಾಮದಲ್ಲಿ ಪ್ರಾಣಿಗಳಿಗೆ ಚಿಕಿತ್ಸೆ ನೀಡಬೇಕಾದ ಪಶು ವೈದ್ಯಕೀಯ ಆಸ್ಪತ್ರೆ ಆವರಣ, ಈಗ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ತಾಲೂಕಿನ ಸರ್ಜಾಪುರ ಬಸ್ ನಿಲ್ದಾಣದ ಮುಂಭಾಗದ ಪಶು ವೈದ್ಯಕೀಯ ಆಸ್ಪತ್ರೆ ಇದ್ದು, ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಹಾಜರಾತಿ ಇರುವುದಿಲ್ಲ. ಆಸ್ಪತ್ರೆಯ ಸುತ್ತಲಿನ ಆವರಣವನ್ನು ಸ್ವಚ್ಛ, ಸಂರಕ್ಷಣೆ ಮಾಡಿಕೊಳ್ಳುವಲ್ಲಿ ಇಲಾಖೆವಿಫಲವಾಗಿದ್ದು, ರಾತ್ರಿ ಆಗುತ್ತಿದ್ದಂತೆ ಪುಂಡ-ಪೋಕರಿಗಳ ನೆಚ್ಚಿನ ತಾಣವಾಗಿದೆ. ಈ ಸಂಬಂಧ ಅಧಿಕಾರಿಗಳಿಗೆ ದೂರು ನೀಡಿದರೂ, ಕ್ಯಾರೆ ಎನ್ನುತ್ತಿಲ್ಲವೆಂದು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೌಲಭ್ಯ ವಂಚಿತ: ಸುತ್ತಮುತ್ತಲಿನ ಗ್ರಾಮದಲ್ಲಿ ರೈತಾಪಿ ಕುಟುಂಬ ವಾಸಿಸುತ್ತಿದ್ದು, ಹೈನುಗಾರಿಕೆ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ, ರಾಸು, ಆಡು, ಕುರಿ, ಮೇಕೆ, ನಾಯಿ ಮುಂತಾದಪ್ರಾಣಿಗಳಿಗೆ ಖಾಯಿಲೆ ಉದ್ಭವಗೊಂಡರೆ ಸೂಕ್ತ ಚಿಕಿತ್ಸೆ ಸಿಗದೆ ಎಷ್ಟೋ ಪ್ರಾಣಿಗಳು ಜೀವ ಬಿಟ್ಟಿವೆ. ಎಲ್ಲ ಸೌಕರ್ಯ ಇದ್ದರೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ರೈತರು ಸೌಲಭ್ಯ ಪಡೆಯುವಲ್ಲಿ ವಂಚಿತರಾಗಿದ್ದಾರೆ. ಆಸ್ಪತ್ರೆ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುವ ಸಾರ್ವಜನಿಕರು ತಮ್ಮ ಮನೆಯಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಆಸ್ಪತ್ರೆ ಆವರಣದೊಳಗೆ ಎಸೆಯು ತ್ತಿದ್ದಾರೆ. ಆಸ್ಪತ್ರೆ ಆವರಣವನ್ನು ಶೌಚಾಲಯವನ್ನಾಗಿ ಉಪಯೋಗಿಸುತ್ತಿದ್ದಾರೆ. ಇದಕ್ಕೆಲ್ಲ ಮೂಲ ಕಾರಣ ಕಾಂಪೌಂಡ್ ವ್ಯವಸ್ಥೆ ಇಲ್ಲದಿರುವುದು.
ಆವರಣದಲ್ಲಿ ಪಾರ್ಕಿಂಗ್: ಬೆಂಗಳೂರು ನಗರದಲ್ಲಿ ಮತ್ತು ಬೊಮ್ಮಸಂದ್ರ, ಅತ್ತಿಬೆಲೆ, ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುವ ಸುತ್ತಮುತ್ತಲಿನ ಹಳ್ಳಿ ಜನರು ತಮ್ಮ ವಾಹನಗಳನ್ನು ಆಸ್ಪತ್ರೆ ಆವರಣದಲ್ಲೇ ಪಾರ್ಕಿಂಗ್ ಮಾಡುತ್ತಾರೆ. ಇದರಿಂದ ರಾಸುಗಳಿಗೆ, ಆಸ್ಪತ್ರೆಗೆ ಬರುವಂತಹ ರೈತರಿಗೆ ತೊಂದರೆಯಾಗುತ್ತಿದೆ.
ಎರಡು ಆಸ್ಪತ್ರೆಗಳ ಜವಾಬ್ದಾರಿ: ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿ ಸರ್ಜಾಪುರ ಪಶು ವೈದ್ಯಕೀಯ ಆಸ್ಪತ್ರೆ ಮುಖ್ಯ ಪಶು ವೈದ್ಯಾಧಿಕಾರಿ ಡಾ.ರಾಜಶೇಖರ್, ಅತ್ತಿಬೆಲೆ ಪಶು ವೈದ್ಯಕೀಯ ಆಸ್ಪತ್ರೆಗೆ ಪ್ರಭಾರಿಯಾಗಿ ನೇಮಕವಾಗಿದ್ದು, ಗ್ರಾಪಂಚುನಾವಣೆಯ ಚುನಾವಣಾಧಿಕಾರಿಯಾಗಿ ಸಾಕಷ್ಟು ಭಾಗಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರಿಂದಕೆಲಸದ ಒತ್ತಡ ಹೆಚ್ಚಿದ್ದು, ಒಂದೇ ಸಮಯದಲ್ಲಿ ಎರಡು ಆಸ್ಪತ್ರೆಗಳ ಜವಾಬ್ದಾರಿ ಹೆಚ್ಚಾಗಿದೆ. ಶುಚಿತ್ವ ಮತ್ತು ಆಸ್ಪತ್ರೆಯ ಸಂರಕ್ಷಣೆ ಬಗ್ಗೆ ಸರ್ಜಾಪುರಗ್ರಾಪಂ ಅಧಿಕಾರಿಗಳಿಗೆ, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಕೆಲಸ ಮಾಡಿ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆಂದು ತಿಳಿಸಿದರು.
ಗ್ರಾಮದಲ್ಲಿ ನೂರಾರು ರೈತರು ಹೈನುಗಾರಿಕೆ ನಂಬಿಕೊಂಡು ಜೀವನ ಸಾಗಿಸುತ್ತಿದ್ದು, ರಾಸುಗಳಿಗೆ ಆರೋಗ್ಯದಲ್ಲಿ ಏರುಪೇರಾದರೆ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದೆ. ಸಾರ್ವಜನಿಕರು ಆರೋಪಿ ಸುತ್ತಿದ್ದಂತೆ ಆಸ್ಪತ್ರೆ ಆವರಣ ಸಂಪೂರ್ಣ ಕಸಮಯವಾಗಿದೆ. ಗ್ರಾಪಂ ಸಭೆಯಲ್ಲಿ ಚರ್ಚಿಸಿ ಅನೈತಿಕ ಚಟುವಟಿಕೆಗೆ ಅವಕಾಶವಾಗದಂತೆ ಕ್ರಮ ಕೈಗೊಳ್ಳುತ್ತೇವೆ.
–ಕಲಾವತಿ, ಸರ್ಜಾಪುರ ಗ್ರಾಪಂ ಸದಸ್ಯೆ