Advertisement

ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದಹೆರಿಗೆ ಆಸ್ಪತ್ರೆ, ಬಡವರಿಗೆ ಸಮಸ್ಯೆ

12:43 PM Apr 19, 2019 | Team Udayavani |

ಬೆಂಗಳೂರು: ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗಾಗಿ ನಿರ್ಮಿಸುತ್ತಿರುವ ಸುಸಜ್ಜಿತ ಆಸ್ಪತ್ರೆ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದ ಪರಿಣಾಮ ಬಡ ಮಹಿಳೆಯರು ತೊಂದರೆ ಅನುಭವಿಸುವಂತಾಗಿದ್ದು, ಚಿಕಿತ್ಸೆಗಾಗಿ ಸಾವಿರಾರು ರೂ. ಖರ್ಚು ಮಾಡುವಂತಾಗಿದೆ.

Advertisement

ನಗರದ ಯಶವಂತಪುರ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿದ್ದ ಹಳೆಯ ಹೆರಿಗೆ ಆಸ್ಪತ್ರೆ ತೆರವುಗೊಳಿಸಲಾಗಿದ್ದು, ರಾಷ್ಟ್ರೀಯ ನಗರ ಆರೋಗ್ಯ ಯೋಜನೆ (ಎನ್‌ಯುಎಚ್‌ಎಂ) ಅಡಿಯಲ್ಲಿ ಪಾಲಿಕೆಯು ಆಸ್ಪತ್ರೆಯ ಮರು ನಿರ್ಮಾಣಕ್ಕೆ ಮುಂದಾಗಿದೆ. ಆದರೆ, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಭಾಗಗಳಲ್ಲಿನ ಬಡ ಗರ್ಭಿಣಿಯರು ಸಮಸ್ಯೆ ಎದುರಿಸುವಂತಾಗಿದೆ.

ಕೇಂದ್ರ ಸರ್ಕಾರದ ಎನ್‌ಯುಎಚ್‌ಎಂ ಅಡಿಯಲ್ಲಿ ಆಸ್ಪತ್ರೆಯ ಮರು ನಿರ್ಮಾಣ ಕಾಮಗಾರಿ ಆರಂಭವಾಗಿ ಸುಮಾರು ಎಂಟು ತಿಂಗಳು ಕಳೆದಿದ್ದು, ಕಟ್ಟಡ ನಿರ್ಮಾಣ ಬಹುತೇಕ ಪೂರ್ಣಗೊಂಡು ಕೆಲ ತಿಂಗಳು ಕಳೆದಿದೆ. ಆದರೆ, ನಿಗದಿತ ಅವಧಿಯಲ್ಲಿ ಆಸ್ಪತ್ರೆಯ ಒಳಾಂಗಣ ಕಾಮಗಾರಿಯನ್ನು
ಗುತ್ತಿಗೆದಾರರು ಪೂರ್ಣಗೊಳಿಸದಿರುವುದು ಸಮಸ್ಯೆಗೆ ಕಾರಣವಾಗಿದೆ.

ಯಶವಂತಪುರದಲ್ಲಿ ಹಿಂದೆಯಿದ್ದ ಹೆರಿಗೆ ಆಸ್ಪತ್ರೆಗೆ ಅಂಬೇಡ್ಕರ್‌ ನಗರ, ಪಂಪಾನಗರ, ಬಿ.ಕೆ.ನಗರ, ಗೋಕಲ ಬಡಾವಣೆ, ಮತ್ತಿಕೆರೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ಜನರು ಚಿಕಿತ್ಸೆಗಾಗಿ ಬರುತ್ತಿದ್ದರು. ಆದರೀಗ ಕಳೆದ ಎಂಟು ತಿಂಗಳಿಂದ ಆಸ್ಪತ್ರೆಯಿಲ್ಲದ ಪರಿಣಾಮ ಜನರು ನಾಲ್ಕೈದು ಕಿಲೋ ಮೀಟರ್‌ ದೂರದ ಶ್ರೀರಾಮಪುರ ರೆಫ‌ರಲ್‌ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಶ್ರೀರಾಮಪುರ ಆಸ್ಪತ್ರೆಯ ಮೇಲೆ ಹೊರೆ: ದಯಾನಂದ ನಗರ ವಾರ್ಡ್‌ನಲ್ಲಿರುವ ಶ್ರೀರಾಮಪುರ ರೆಫ‌ರಲ್‌ ಆಸ್ಪತ್ರೆಯಲ್ಲಿ 20 ಹಾಸಿಗೆ ಸಾಮರ್ಥಯ ಹೊಂದಿದ್ದು, ಪ್ರತಿ ತಿಂಗಳು ಕನಿಷ್ಠವೆಂದರೂ 100ಕ್ಕೂ ಹೆಚ್ಚು ಹೆರಿಗೆಗಳು ಆಗುತ್ತವೆ. ಹೆರಿಗೆಯೊಂದಿಗೆ ಹೊರ ರೋಗಿ ವಿಭಾಗವೂ ಇದೆ. ಇದೀಗ ಯಶವಂತಪುರ ಆಸ್ಪತ್ರೆಗೆ ಬರುವವರು ಶ್ರೀರಾಮಪುರ ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ಹೊರೆಯಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

Advertisement

ಅನಗತ್ಯ ವಿಳಂಬ: ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಒಂದೂವರೆ ತಿಂಗಳು ಮುಗಿದಿದೆ. ಆದರೆ, ಆಸ್ಪತ್ರೆಯ ಒಳಾಂಗಣ ವಿನ್ಯಾಸ ಪೂರ್ಣಗೊಳಿಸಲು ಮುಂದಾಗುತ್ತಿಲ್ಲ. ಇದೀಗ ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಯಾವುದೇ ಕಾಮಗಾರಿ ಆಗಿಲ್ಲ. ಇದರಿಂದಾಗಿ ಬಡ ಮಹಿಳೆಯರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳತ್ತ ಮೊರೆ ಹೋಗಬೇಕಾಗಿದೆ.

ನೀತಿ ಸಂಹಿತೆ ಅನ್ವಯಿಸುವುದಿಲ್ಲ: ಲೋಕಸಭಾ ನಾವಣೆಯ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಪಾಲಿಕೆಯಲ್ಲಿ ಹಲವು ಗುತ್ತಿಗೆದಾರರು ನೀತಿ ಸಂಹಿತೆಯ ಹೆಸರೇಳಿ ಕಾಮಗಾರಿಗಳನ್ನು ಸ್ಥಗಿತಗೊಳಿಸಿದ್ದಾರೆ. ಆದರೆ, ನೀತಿ ಸಂಹಿತೆ ಜಾರಿಗೆ ಮೊದಲು ಆರಂಭಿಸಿದ ಯೋಜನೆಗಳಿಗೆ ಇದು ಅನ್ವಯವಾಗುವುದಿಲ್ಲ ಎಂದು ಪಾಲಿಕೆಯ ಅಧಿಕಾರಿಗಳು ಹೇಳುತ್ತಾರೆ.

ಪಾಲಿಕೆಯಿಂದ ಎಚ್‌ಯುಎಚ್‌ಎಂ ಯೋಜನೆಯಡಿ ಹಳೇ ಆಸ್ಪತ್ರೆ ತೆರವುಗೊಳಿಸಿ ಹೊಸ ಆಸ್ಪತ್ರೆ ಕಾಮಗಾರಿ ನಡೆಸಲಾಗುತ್ತಿದೆ. ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಒಳಾಂಗಣ ಕಾಮಗಾರಿ ಬಾಕಿಯಿದ್ದು, ಕೂಡಲೇ ಪೂರ್ಣಗೊಳಿಸುವಂತೆ ಸೂಚಿಸಲಾಗುವುದು.
ನಿರ್ಮಲಾ ಬುಗ್ಗಿ, ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್‌)

Advertisement

Udayavani is now on Telegram. Click here to join our channel and stay updated with the latest news.

Next