ಬೆಳಗಾವಿ: ವಡಗಾವಿಯ ಹೊರ ರೋಗಿಗಳ ವಿಭಾಗವನ್ನು 30 ಹಾಸಿಗೆಗೆ ಮೇಲ್ದರ್ಜೆ ಗೇರಿಸಲಾಗುವುದು ಎಂದು ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ತಿಳಿಸಿದರು. ನಗರದ ವಡಗಾವಿ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸಮೀಪ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಿಸಿರುವ 10 ಹಾಸಿಗೆಗಳ ಆನಂದಿಬಾಯಿ ಜೋಶಿ ಹೆರಿಗೆ ಆಸ್ಪತ್ರೆ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಆಸ್ಪತ್ರೆಯಿಂದ ಬಡ ರೋಗಿಗಳಿಗೆ ಅನುಕೂಲವಾಗಲಿದೆ. ಆಸ್ಪತ್ರೆ ಮೇಲ್ದರ್ಜೆಗೇರಿಸಿ ಅನುಕೂಲ ಮಾಡಿಕೊಡಲಾಗುವುದು. ದೇಶದ ಮೊದಲ ವೈದ್ಯೆ ಆನಂದಿಬಾಯಿ ಜೋಶಿ ಹೆಸರಿಡಲಾಗಿದೆ. 2.50 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ಸುಧಾರಿಸಲಾಗುವುದು ಎಂದರು. ಈ ಆಸ್ಪತ್ರೆಗೆ ವೈದ್ಯರು ಮತ್ತು ಸಿಬ್ಬಂದಿ ಸರ್ಕಾರದಿಂದ ನೇಮಿಸಲಾಗುವುದು.
ಮುಂದಿನ ತಿಂಗಳು ಇಲ್ಲಿ ಸೇವೆ ಆರಂಭವಾಗಲಿದೆ. ಖಾಸಗಿ ಆಸ್ಪತ್ರೆಗೆ ಹೋಗಲು ಆಗದವರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಹೆರಿಗೆ ವಾರ್ಡ್, ಜನರಲ್ ವಾರ್ಡ್, ಶಸ್ತ್ರ ಚಿಕಿತ್ಸಾ ಕೊಠಡಿ (ಒಟಿ), ಪ್ರಯೋಗಾಲಯ, ಲೇಬರ್ ರೂಂ, ಪ್ರಯೋಗಾಲಯ, ಲಸಿಕಾ ಕೊಠಡಿ ಅನೇಕ ಸೌಲಭ್ಯಗಳು ಇಲ್ಲಿವೆ. ಅಗತ್ಯ ಉಪಕರಣ ಆರೋಗ್ಯ ಇಲಾಖೆ ಒದಗಿಸಲಿದೆ. ಬಾಕಿ ಇರುವ ಸೌಕರ್ಯ ಪೂರ್ಣಗೊಳಿಸಿ ಆರೋಗ್ಯ ಇಲಾಖೆಗೆ ಹಸ್ತಾಂತರ ಮಾಡಲಾಗುವುದು ಎಂದರು.
ವಡಗಾವಿಯಲ್ಲಿರುವ ನಗರ ಆರೋಗ್ಯ ಕೇಂದ್ರ 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದ ಅವರು, ಅತ್ಯಾಧುನಿಕ ಸೌಲಭ್ಯದ ಬಗ್ಗೆ ವಡಗಾವಿ, ಶಹಾಪುರ ಹಾಗೂ ಖಾಸಬಾಗ ಭಾಗದಲ್ಲಿ ಪ್ರಚಾರ ನಡೆಸುವಂತೆ ಅಂಗನವಾಡಿ-ಆಶಾ ಕಾರ್ಯಕರ್ತೆಯರಿಗೆ ತಿಳಿಸಲಾಗಿದೆ. ಈ ಭಾಗದ ಜನರ ಬೇಡಿಕೆಗೆ ಸ್ಪಂದಿಸಲಾಗಿದೆ ಎಂದರು. ಈ ವೇಳೆ ಮಹಾನಗರ ಪಾಲಿಕೆ ಸದಸ್ಯರಾದ ಮಂಗೇಶ ಪವಾರ, ಸಾರಿಕಾ ಪಾಟೀಲ, ಜಿಲ್ಲಾ ಆರೋಗ್ಯಾಧಿ ಕಾರಿ ಡಾ| ಶಶಿಕಾಂತ ಮುನ್ಯಾಳ, ತಾಲೂಕು ಆರೋಗ್ಯಾಧಿ ಕಾರಿ ಡಾ| ಶಿವಾನಂದ ಮಾಸ್ತಿಹೊಳಿ ಸೇರಿದಂತೆ ಇತರರು ಇದ್ದರು.
ಖಾಸಗಿ ಮಾರುಕಟ್ಟೆ ಯಿಂದ ಅನುಕೂಲ
ಗಾಂಧಿ ನಗರದ ರಾಷ್ಟ್ರೀಯ ಹೆದ್ದಾರಿ ಸಮೀಪದ ಜೈ ಕಿಸಾನ್ ಖಾಸಗಿ ಸಗಟು ತರಕಾರಿ ಮಾರುಕಟ್ಟೆಯಿಂದ ರೈತರಿಗೆ ಅನುಕೂಲವಾಗುಗುತ್ತದೆ. ಇದರಿಂದ ಎಪಿಎಂಸಿಗೆ ನಷ್ಟವಾಗುತ್ತಿರುವುದರ ಬಗ್ಗೆ ಇದನ್ನು ವಿರೋಧಿ ಸುವವರು ಹೇಳಲಿ. ಇದರಲ್ಲಿ ಅಕ್ರಮವಾಗಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಅಭಯ ಪಾಟೀಲ ತಿಳಿಸಿದರು.