ಹೊಸಪೇಟೆ: ಕನ್ನಡ ಬೆಳವಣಿಗೆಯಲ್ಲಿ ಕುವೆಂಪು ಅವರ ಪಾತ್ರ ಹಿರಿದಾಗಿದ್ದು, ಜಾಗತಿಕ ಮಟ್ಟದಲ್ಲಿ ಕನ್ನಡಕ್ಕೆ ಅಸ್ಮಿತೆಯನ್ನು ತಂದು ಕೊಟ್ಟಿದ್ದಾರೆ ಎಂದು ಕಲಬುರ್ಗಿಕೇಂದ್ರಿಯ ವಿದ್ಯಾಲಯದ ಅಳವಿನಂಚಿನ ಭಾಷೆಗಳ ಅಧ್ಯಯನ ಕೇಂದ್ರದ ಯೋಜನಾ ಸಂಯೋಜಕ ಪ್ರೊ .ಜೆ. ರಾಮಸ್ವಾಮಿ ಬಣ್ಣಿಸಿದರು.
ರಾಷ್ಟ್ರಕವಿ ಕುವೆಂಪು 119ನೇ ಜನ್ಮದಿನದ ಅಂಗವಾಗಿ ನಗರದ ವಿಜಯನಗರ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೊದಲು ಮನುಷ್ಯನಾಗಬೇಕು. ಮಾನವೀಯತೆಯನ್ನು ಜೀವನದಲ್ಲಿ ರೂಢಿಸಿಕೊಂಡಾಗ ಮಾತ್ರ ವಿಶ್ವಮಾನವ ಆಗಲು ಸಾಧ್ಯ ಎಂದರು. ಭಾಷೆಯು ನಮ್ಮ ಜೀನ್ಸ್‌ನಲ್ಲಿದೆ. ಹುಟ್ಟಿನಿಂದಲೂ ಜಾತಿ ಮನುಷ್ಯ ಜತೆಗೆ ಬರುವುದಿಲ್ಲ. ಆದರೆ, ಭಾಷೆ ಬರುತ್ತದೆ. ಮಗು ಮನೆಯಲ್ಲಿ ಮಾತನಾಡುವುದನ್ನು ಕೇಳಿಸಿಕೊಂಡು, ಕಲಿಯಲು ಪ್ರಾರಂಭ ಮಾಡುತ್ತದೆ. ಭಾಷೆಗೆ ವ್ಯಾಪ್ತಿ ಇಲ್ಲ ಎಂದು ಹೇಳಿದರು. ಬದ್ಧತೆಯಿಂದ ರಾಜನು ಬುದ್ಧನಾದ. ರಾಜನಾದ ಸಂದರ್ಭದಲ್ಲಿ ಸಾಮಾನ್ಯ ವ್ಯಕ್ತಿ ಆಗಿದ್ದ. ಬದ್ಧತೆಯಿಂದ ಬುದ್ಧನಾಗಲು ಸಾಧ್ಯವಾಯಿತು. ಬುದ್ಧ, ಮಹಾವೀರ, ಬಸವಣ್ಣ ಕುವೆಂಪು ಮೇಲೆ ಪ್ರಭಾವ ಬೀರಿದ್ದಾರೆ. ಹಾಗಾಗಿ ಜಾತಿ ಮತ್ತು ಧರ್ಮ ಮೀರಲು ಸಾಧ್ಯವಾಗಿದೆ ಎಂದು ಹೇಳಿದರು.
ಬದುಕಿನ ನಿಯಮಗಳು ಧರ್ಮಗಳಾಗಿವೆ. ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮ ಅನುಸರಿಸಲು ಇವೆ. ರಸ್ತೆ ನಿಯಮಗಳನ್ನು ಪಾಲಿಸಿದಾಗ ಮಾತ್ರ ನಾವು ಉಳಿಯಲು ಸಾಧ್ಯ. ಅದೇ ಧರ್ಮವಾಗಿದೆ. ನಿಯಮಗಳನ್ನುಪಾಲಿಸದಿದ್ದರಿಂದ ಭೂಮಿಯಿಂದ ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದರು. ಇದಕ್ಕೂ ಮುನ್ನ ಕಲಾವಿದರಾದ ಹನುಮಯ್ಯ ಹಾಗೂ ರಾಮಚಂದ್ರಪ್ಪ ಕುವೆಂಪು ಗೀತಗಾಯನ ನಡೆಸಿಕೊಟ್ಟರು. ಬಳಿಕ ಕುವೆಂಪು ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.
ತಾಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು, ಚೇತನ ಸಾಹಿತ್ಯ ಸಂಸ್ಥೆ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಜೆ. ನೀಲಮ್ಮ, ಕನ್ನಡ ವಿವಿಯ ಬುಡಕಟ್ಟು ಅಧ್ಯಯನದ ಪ್ರಾಧ್ಯಾಪಕ ಡಾ| ಚಲುವರಾಜು, ವಿಜಯನಗರ ಕಾಲೇಜಿನ ಅಧ್ಯಕ್ಷ ಸಾಲಿ ಸಿದ್ದಯ್ಯಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ| ಎತ್ನಳ್ಳಿ ಮಲ್ಲಯ್ಯ, ಚೇತನ ಸಾಹಿತ್ಯ ಸಂಸ್ಥೆಯ ಅಧ್ಯಕ್ಷ ಎಚ್.ಎಂ. ಜಂಬಯ್ಯನಾಯಕ, ಕರ್ನಾಟಕ ಸಾಂಸ್ಕೃತಿಕ ಸಂಸ್ಥೆ ಮತ್ತು ರಂಗ
ಪ್ರಕಾಶದ ಅಧ್ಯಕ್ಷ ಟಿ.ಎಂ.ನಾಗಭೂಷಣ, ತಹಶೀಲ್ದಾರ್ ಎಚ್.ವಿಶ್ವನಾಥ, ತಾಪಂ ಇಒ ಶ್ರೀಕುಮಾರ, ಬಿಇಒ ಎಲ್.ಡಿ.ಜೋಷಿ ಇನ್ನಿತರರಿದ್ದರು.