ಹೊಸಪೇಟೆ: ಹತ್ತು ರೂಪಾಯಿಗೆ ಒಂದು ಲೀಟರ್ ನೀರು ಸಿಗದಂತ ಕಾಲದಲ್ಲಿ ಕೇವಲ ಹತ್ತು ರೂಪಾಯಿಗೆ ಊಟ ನೀಡಿ, ಜನರಿಗೆ ಹಸಿವು ನೀಗಿಸಲು ನಗರದ ವಾತ್ಸಲ ಟ್ರಸ್ಟ್‌ನ ಆಕಾಂಕ್ಷ ವಿಶೇಷ ಮಕ್ಕಳ ಶಾಲೆ ಮುಂದಾಗಿದೆ.
ನಗರದ ಅನಂತಶಯನ ಗುಡಿ ಗ್ರಾಮದ ಅಮೃತ್ ಶಕ್ತಿ ಬಡವಾಣೆಯಲ್ಲಿರುವ ವಾತ್ಸಲ ಟ್ರಸ್ಟ್‌ನ ಆಕಾಂಕ್ಷ ವಿಶೇಷ ಮಕ್ಕಳ ಶಾಲೆ ಈ ಬಾರಿ ಹಂಪಿ ಉತ್ಸವದಲ್ಲಿ ಪ್ರಥಮ ಬಾರಿಗೆ 10 ರೂ ಬಾಳೆ ಎಲೆಯಲ್ಲಿ ಊಟ ಮಣ್ಣಿನ ಮಡಿಕೆಯಲ್ಲಿ ಕುಡಿಯುವ ನೀರು ನೀಡುತ್ತಿದೆ.
ಹಂಪಿ ಪಾರ್ಕಿಂಗ್ ಪ್ರದೇಶ ತೆರೆಯಲಾದ ಊಟದ ಮಳಿಗೆಯಲ್ಲಿ ದೇಶಿ ಊಟ ಹಾಗೂ ದೇಶಿ ವಸ್ತುಗಳ ಬಳಕೆ ಮಾಡುವುದರ ಜೊತೆಗೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇ ಧಿಸಬೇಕು ಎಂಬ ಜಾಗೃತಿ ಮೂಡಿಸುತ್ತಿದೆ. ಸ್ಥಳದಲ್ಲಿ ಚಿತ್ರನ್ನ, ಪುದಿನಾ ರೈಸ್, ಪಾಲಕ್ ರೈಸ್ ಸೇರಿದಂತೆ ನಾನಾ ರೈಸ್ ಐಟಂ ತಯಾರಿಸಿ, ಪ್ರವಾಸಿಗರಿಗೆ ಉಣ ಬಡಿಸುತ್ತಿದ್ದಾರೆ.
ಈ ಊಟಕ್ಕಾಗಿ ಜನರು, ಮುಗಿ ಬೀಳುತ್ತಿದ್ದು, ಸರದಿ ಕಾಲಿನಲ್ಲಿ ಕಾದು ನಿಂತ ಆಹಾರ ಪಡೆದುಕೊಳ್ಳುತ್ತಿದ್ದಾರೆ. ಬುದ್ದಿಮಾಂದ್ಯ ಮಕ್ಕಳ ಮನೋವಿಕಾಸಕ್ಕಾಗಿ ಹಗಲಿರಳು ಶ್ರಮಿಸುತ್ತಿರುವ ಆಂಕಾಕ್ಷ ಶಾಲೆಯ ಆಡಳಿತ ಮಂಡಳಿಯೊಂದಿಗೆ ಮಕ್ಕಳ ಪಾಲಕರು ಕೈಜೋಡಿಸಿದ್ದು, 15 ಸದಸ್ಯರ ತಂಡ, ಕಳೆದ ಎರಡು ದಿನಗಳಿಂದ ಹಗಲಿರಳು ಶ್ರಮಿಸುತ್ತಿದ್ದಾರೆ. ಊಟ ಮಾಡಿದ ಪ್ರತಿಯೊಬ್ಬ ಪ್ರವಾಸಿಗರು ರುಚಿಯಾದ ಊಟ ಸೇವಿಸಿ, ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಪಾರಾಂಪರಿಕ ಊಟ: ಮಾತಂಗ ಪರ್ವತ ಪ್ರದೇಶದ ತೆರೆಯಲಾಗಿರುವ ಮಳಿಗೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕಡಿಮೆ ಬೆಲೆಯಲ್ಲಿ ಬಡ-ಮಧ್ಯಮ ವರ್ಗದ ಜನರಿಗೂ ಕೈಗೆಟುವ ರೀತಿಯಲ್ಲಿ ರುಚಿಗಟ್ಟದ ಊಟವನ್ನು ನೀಡುತ್ತಿದ್ದಾರೆ ಹಂಪಿಯ ಶ್ರೀ ಶಾರದ ಮಹಿಳಾ ಸ್ವಸಹಾಯ ಸಂಘದ ಸದಸ್ಯರು. 150 ರೂಪಾಯಿಗೆ ಹೋಳಿಗೆ, ಅನ್ನ, ಸಂಬಾರು, ರಸಂ, ಮೊಸರು, ಉಪ್ಪಿನಕಾಯಿ, ಕಾಯಿಚಟ್ನಿ ನೀಡುತ್ತಿದ್ದಾರೆ. 70 ರೂಪಾಯಿ ಅನ್ನ ಸಂಬಾರು, ಅಪ್ಪಳ, ಚಟ್ನಿ ನೀಡುವ ಮೂಲಕ ಜನರ ಹಸಿವನ್ನು ತಣಿಸುತ್ತಿದ್ದಾರೆ.
ಹಂಪಿ ಉತ್ಸವದ ಅಂಗವಾಗಿ ವಾತ್ಸಲ ಟ್ರಸ್ಟ್‌ನ ಆಕಾಂಕ್ಷ
ವಿಶೇಷ ಮಕ್ಕಳ ಶಾಲೆವತಿಯಂದ ಹತ್ತು ರೂಪಾಯಿ ಬಾಳೆ ಎಲೆಯಲ್ಲಿ ಊಟವನ್ನು ನೀಡಲಾಗುತ್ತಿದೆ. ಈ ಮೂಲಕ ದೇಶಿ ಊಟ, ದೇಶಿಯ ವಸ್ತುಗಳನ್ನು ಬಳಕೆ ಮಾಡುವುದು ಸೇರಿದಂತೆ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಕ್ಕಾಗಿ ಜಾಗೃತಿ ಮೂಡಿಸಲಾಗುತ್ತಿದೆ.
ಯಶ್ವಸಿನಿ, ವಾತ್ಸಲ ಟ್ರಸ್ಟ್,
ಅನಂತಶಯನ ಗುಡಿ, ಹೊಸಪೇಟೆ
ಹತ್ತಾರು ವರ್ಷದಿಂದ ಕುಟಂಬ ಸಮೇತ ಹಂಪಿ ಉತ್ಸವಕ್ಕೆ ಬರುತ್ತಿದ್ದೇವೆ. ಉತ್ಸವದಲ್ಲಿ ಹಣ ನೀಡಿದರೂ ಉತ್ತಮ ಗುಣಮಟ್ಟದ ಊಟ ಸಿಗುತ್ತಿರಲ್ಲಿಲ್ಲ. ಈ ವರ್ಷದ ಉತ್ಸವದಲ್ಲಿ ಕಡಿಮೆ ಬೆಲೆಯಲ್ಲಿ ಆಹಾರ ಸಿಗುತ್ತಿದೆ. ಇದರಿಂದ ತುಂಬ ಸಂತೋಷವಾಗಿದೆ.
ರಾಜೇಶ್ ಪ್ರವಾಸಿಗ,
ಶಿವಮೊಗ್ಗ
ಪಿ.ಸತ್ಯನಾರಾಯಣ