Advertisement

ಕೊರೊನಾ ಹೆಚ್ಚದಂತೆ ಎಚ್ಚರ ವಹಿಸಿ

01:00 PM Apr 08, 2020 | Naveen |

ಹೊಸಪೇಟೆ: ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 6ಕ್ಕೆ ಏರಿದ್ದು, ಪ್ರಕರಣಗಳು ಹೆಚ್ಚಾಗದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಕಮಲಾಪುರದ ಮಯೂರ್‌ ಭುವನೇಶ್ವರಿ ಹೋಟಲ್‌ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ಜಿಲ್ಲಾಡಳಿತ ಒಳ್ಳೆಯ ರೀತಿಯ ಕೆಲಸ ಮಾಡುತ್ತಿದೆ; ಆದರೂ ಪ್ರಕರಣಗಳು ದೃಢಪಟ್ಟಿರುವುದು ತಮ್ಮೆಲ್ಲರಿಗೂ ಪರೀಕ್ಷೆಯ ಕಾಲವಿದ್ದಂತೆ. ಆದ ಕಾರಣ ತಾವು ಸಾಮಾಜಿಕ ಅಂತರ, ಜನರು ಶಾಂತ ರೀತಿಯಿಂದ ಇರುವ ನಿಟ್ಟಿನಲ್ಲಿ ಕ್ರಮವಹಿಸುವುದು, ಜನರು ಗುಂಪುಗೂಡದಂತೆ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.

ಉಪಕೇಂದ್ರಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಜರುಗಿಸಿ ಎಂದ ಅವರು, ನಿರ್ವಹಣೆ ಮತ್ತು ಸಾರಿಗೆ ವೆಚ್ಚವನ್ನು ಜಿಲ್ಲಾಡಳಿತದಡಿ ಭರಿಸಿ ಎಂದು ಡಿಸಿ ನಕುಲ್‌ ಗೆ ಸೂಚಿಸಿದರು. ರಾಜ್ಯದಲ್ಲಿ ಏ.14ರ ನಂತರವೂ ಲಾಕ್‌ ಡೌನ್‌ ಮುಂದುವರಿಸಬೇಕೇ ಅಥವಾ ಬೇಡವೇ ಅಥವಾ ಹಂತಹಂತವಾಗಿ ಕೈಬಿಡಬೇಕೇ ಎಂಬುದಕ್ಕೆ ಸಂಬಂಧಿಸಿದಂತೆ ರಾಜ್ಯಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಡಿಎಂಎಫ್‌ ಅನುದಾನ ಬಳಕೆ ಚರ್ಚೆ: ಜಿಲ್ಲಾ ಖನಿಜ ನಿಧಿಯನ್ನು ಈ ಕೋವಿಡ್‌-19 ಸಂದರ್ಭದಲ್ಲಿ ಯಾವ
ರೀತಿ ಬಳಸಿಕೊಳ್ಳಬೇಕು ಮತ್ತು ಈಗ ಖರ್ಚು ಮಾಡಲಾಗಿರುವುದನ್ನು ಯಾವ ರೀತಿ ಪರಿವರ್ತಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಹಾಗೂ ಇದಕ್ಕಿರುವ ಕಾನೂನಿನ ತೊಡಕು ಮತ್ತು ಪರಿಹಾರ ಕುರಿತು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳ ಮಟ್ಟದಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಡಿಎಂಎಫ್‌ ನಿಧಿ ಅಡಿ ಶೇ.10ರಷ್ಟು ಅನುದಾನವನ್ನು ಕೋವಿಡ್‌-19 ಗಾಗಿ ಖರ್ಚು ಮಾಡಲು ಮಾ.28 ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ತಿಳಿಸಲಾಗಿದ್ದು, ಅದರಂತೆ ಅತ್ಯವಶ್ಯಕ ವೈದ್ಯಕೀಯ ಪರಿಕರಗಳು ಹಾಗೂ ಮಾಸ್ಕ್ ಖರೀದಿಸಲು ತೀರ್ಮಾನಿಸಲಾಗಿದ್ದನ್ನು ಡಿಸಿ ಎಸ್‌.ಎಸ್‌. ನಕುಲ್‌ ಸಭೆಯ ಗಮನಕ್ಕೆ ತಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಆನಂದಸಿಂಗ್‌, ಡಿಎಂಎಫ್‌ ಅಡಿ 62 ಕೋಟಿ ರೂ. ಉಳಿದಿದ್ದು, ಅದನ್ನು ಈ ಕೋವಿಡ್‌-19 ಸಂದರ್ಭದಲ್ಲಿ ತೀವ್ರ ತೊಂದರೆ ಅನುಭವಿಸುತ್ತಿರುವ ನಿರಾಶ್ರಿತರು, ನಿರ್ಗತಿಕರು ಮತ್ತು ಬಡವರಿಗೆ ರೇಷನ್‌ ಒದಗಿಸುವ ನಿಟ್ಟಿನಲ್ಲಿ ಪ್ರತಿ ತಾಲೂಕಿಗೆ 5 ಕೋಟಿ ರೂ. ಒದಗಿಸುವಂತೆ ಕೋರಿದರು.

Advertisement

ನಿಯಮಾವಳಿಯಲ್ಲಿ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ನಕುಲ್‌ ಹೇಳುತ್ತಿದ್ದಂತೆ, ಬಡವರು ತೀವ್ರ ತೊಂದರೆ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ನಾವು ಅವರಿಗೆ ನೆರವಾಗುವುದು ನಮ್ಮ ಕರ್ತವ್ಯ; ದಾಗದಿದ್ದರೆ ಹೇಗೆ ಎಂಬ ಧಾಟಿಯಲ್ಲಿ ಮಾತನಾಡಿದರು.

ಇದಕ್ಕೆ ಶಾಸಕ ಸೋಮಶೇಖರ್‌ ರೆಡ್ಡಿ, ನಾಗೇಂದ್ರ ಸೇರಿ ಕೆಲ ಶಾಸಕರು ದನಿಗೂಡಿಸಿದರು. ಮಧ್ಯಪ್ರವೇಶಿಸಿದ ಡಿಸಿಎಂ ಲಕ್ಷ್ಮಣ ಸವದಿ, ನಿಯಮಾವಳಿಗಳ ತಿದ್ದುಪಡಿ ಮತ್ತು ಕೋವಿಡ್‌-19 ಅಗತ್ಯ ಕಾಲದಲ್ಲಿ ರೇಷನ್‌ ಒದಗಿಸುವ ನಿಟ್ಟಿನಲ್ಲಿ ಈ ಡಿಎಂಎಫ್‌ ಹಣ ಬಳಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಹತ್ತಿರ ನಾನು ಮತ್ತು ಆನಂದಸಿಂಗ್‌ ಚರ್ಚಿಸುತ್ತೇವೆ. ಹಾಗೂ ಪ್ರಧಾನಮಂತ್ರಿ ಖನಿಜ ಕಲ್ಯಾಣ ನಿಧಿ ಅಡಿ ನಿಯಮಾವಳಿ ತಿದ್ದುಪಡಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಸಂಸದರಾದ ಸಂಗಣ್ಣ ಕರಡಿ, ವೈ.ದೇವೇಂದ್ರಪ್ಪ, ಶಾಸಕರಾದ ಸೋಮಶೇಖರ್‌ ರೆಡ್ಡಿ, ನಾಗೇಂದ್ರ, ಈ.ತುಕಾರಾಂ, ಸೋಮಲಿಂಗಪ್ಪ, ಎಸ್ಪಿ ಸಿ.ಕೆ. ಬಾಬಾ, ಜಿಪಂ ಸಿಇಒ ನಿತೀಶ್‌, ಡಿಎಚ್‌ಓ ಡಾ|ಜನಾರ್ಧನ್‌, ಆಹಾರ ಇಲಾಖೆ ಜಂಟಿ ನಿರ್ದೇಶಕ ರಾಮೇಶ್ವರಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next