Advertisement

ಹಂಪಿಯಲ್ಲಿ ಸರಳ ಬ್ರಹ್ಮರಥೋತ್ಸವ

04:07 PM Apr 09, 2020 | Naveen |

ಹೊಸಪೇಟೆ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ದಕ್ಷಿಣಕಾಶಿ ಖ್ಯಾತಿಯ ಹಂಪಿ ವಿರೂಪಾಕ್ಷೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಬುಧವಾರ ಸರಳವಾಗಿ ನಡೆಯಿತು. ವಿರೂಪಾಕ್ಷೇಶ್ವರ ಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ವಿದ್ಯಾರಣ್ಯ ಭಾರತಿ ಸ್ವಾಮೀಜಿ ನೇತೃತ್ವದಲ್ಲಿ ಬೆಳಗ್ಗೆ ಮಡಿತೇರು ಸಂಜೆ ರಥೋತ್ಸವ ನಡೆಯಿತು.

Advertisement

ವಿಜಯನಗರ ಅರಸರ ಕಾಲದಿಂದಲೂ ವೈಭವದಿಂದ ನಡೆಯುತ್ತಿದ್ದ ವಿರೂಪಾಕ್ಷೇಶ್ವರ ಸ್ವಾಮಿ, ಚಂದ್ರಮೌಳೇಶ್ವರ ಸ್ವಾಮಿ ಬ್ರಹ್ಮರಥೋತ್ಸವಕ್ಕೆ ದೇವಸ್ಥಾನದ ಪಟ್ಟದ ಆನೆ ಲಕ್ಷ್ಮೀ, ಅರ್ಚಕರು, ಅಧಿಕಾರಿ ಹಾಗೂ ಸಿಬ್ಬಂದಿಗಳಷ್ಟೇ ಸಾಕ್ಷಿಯಾದರು. ರಥೋತ್ಸವದ ಅಂಗವಾಗಿ ಸಿಂಹ ವಾಹನೋತ್ಸವ, ಚಂದ್ರ ಮಂಡಲ ವಾಹನೋತ್ಸವ, ಸೂರ್ಯಪ್ರಭಾ ವಾಹನೋತ್ಸವ, ಶೇಷ ವಾಹನೋತ್ಸವ, ಪುಷ್ಪ ಮಂಟಪ ವಾಹನೋತ್ಸವ, ಗಜ ವಾಹನೋತ್ಸವ, ವಿರೂಪಾಕ್ಷೇಶ್ವರ ಕಲ್ಯಾಣೋತ್ಸವ, ತೆಪ್ಪೋತ್ಸವ ಹಾಗೂ ರಜತ ನಂದಿ ವಾಹನೋತ್ಸವ ಸೇರಿದಂತೆ ವಿವಿಧ ಪೂಜಾ ವಿಧಾನಗಳು ನಡೆದವು.

ದೇವಸ್ಥಾನದ ಪ್ರಧಾನ ಅರ್ಚಕ ಪಿ. ಶ್ರೀನಾಥ ಶರ್ಮಾ, ಮುರಳೀಧರ ಶಾಸ್ತ್ರಿ, ಜೆ.ಎಸ್‌. ಶ್ರೀನಾಥ ಶರ್ಮಾ ಸೇರಿದಂತೆ ಇತರರು ಪೂಜಾ-ವಿಧಿ -ವಿಧಾನಗಳನ್ನು ನೆರವೇರಿಸಿದರು. ಸಾರ್ವಜನಿಕರ ಪ್ರವೇಶ ನಿಷೇಧದ ನಡುವೆಯೂ ನಿತ್ಯ ವಿರೂಪಾಕ್ಷನಿಗೆ ತ್ರಿಕಾಲ ಪೂಜೆ, ನೈವೇದ್ಯ ಸೇರಿದಂತೆ ವಿಶೇಷ ಪೂಜೆಗಳು ನಿರಂತರವಾಗಿ ನಡೆಯುತ್ತಿವೆ.

ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಹಂಪಿ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ಇತರೆ ಎಲ್ಲಾ ಪುರಾತನ ದೇಗುಲಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ಕಳೆದ ಮಾ.21 ರಿಂದ ನಿಷೇಧ ಹೇರಲಾಗಿತ್ತು. ಈ ಆದೇಶದ ಅನ್ವಯ ಪ್ರವೇಶ ದ್ವಾರವನ್ನು ಬಂದ್‌ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯಬೇಕಿದ್ದ ಬ್ರಹ್ಮರಥೋತ್ಸವಕ್ಕೆ ಕೊರೊನಾ ಅಡ್ಡಿಯುಂಟು ಮಾಡಿರುವುದು ಭಕ್ತರಿಗೆ ತೀವ್ರ ಬೇಸರ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next