•
ಪಿ.ಸತ್ಯನಾರಾಯಣ
ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಯಲ್ಲಿ ಇನ್ಮುಂದೆ ಡಬಲ್ ಡೆಕ್ಕರ್ ಬಸ್ ಸಂಚರಿಸಲಿವೆ. ಹಂಪಿಯಲ್ಲಿರುವ ಎಲ್ಲ ಸ್ಮಾರಕಗಳು ಹಾಗೂ ಐತಿಹಾಸಿಕ ಸ್ಥಳಗಳಿಗೆ ತೆರಳಲು ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಡಬಲ್ ಡೆಕ್ಕರ್ ಬಸ್ ಓಡಿಸಲು ಚಿಂತನೆ ನಡೆದಿದೆ.
ಪ್ರವಾಸಿಗರು ಈ ಬಸ್ಸಿನಲ್ಲಿ ಪ್ರಯಾಣಿಸುತ್ತ ಹಂಪಿ ಪರಿಸರವನ್ನು ಕಣ್ತುಂಬಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಬಸ್ ಸೌಕರ್ಯ ಕಲ್ಪಿಸುವ ಹೊಸ ಯೋಜನೆ ಜಾರಿಗೆ ಮುಂದಾಗಿದೆ. ಈಗಾಗಲೇ ಈ ಯೋಜನೆ ಟೆಂಡರ್ ಹಂತದಲ್ಲಿದ್ದು, ಈ ತಿಂಗಳಾಂತ್ಯಕ್ಕೆ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಯಾವುದೇ ಅಡೆತಡೆ ಇಲ್ಲದೆ ಎಲ್ಲವೂ ನಡೆದರೆ ಇನ್ನು ಐದಾರು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಐತಿಹಾಸಿಕ ನೆಲದಲ್ಲಿ ಡಬಲ್ ಡೆಕ್ಕರ್ ಬಸ್ ಸಂಚರಿಸಲಿವೆ.
ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಐತಿಹಾಸಿಕ ನಗರಗಳಾದ ಮೈಸೂರು ಮತ್ತು ಹಂಪಿಗಳಲ್ಲಿ ಡಬಲ್ ಡೆಕ್ಕರ್ ಬಸ್ ಸೇವೆಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ. ಮೈಸೂರು ಮತ್ತು ಹಂಪಿಯಲ್ಲಿ ಆರು ಡಬಲ್ ಡೆಕ್ಕರ್ ಬಸ್ಸುಗಳನ್ನು ಓಡಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ 5 ಕೋಟಿ ರೂ. ಅನುದಾನ ಕಲ್ಪಿಸಿದ್ದರು. ಈ ಹಿನ್ನೆಲೆಯಲ್ಲಿ ಯೋಜನೆಯ ರೂಪುರೇಷೆಗಳೆಲ್ಲ ಸಿದ್ಧಗೊಂಡಿದ್ದು, ಹಂಪಿ, ಮೈಸೂರು ಸೇರಿ ಒಟ್ಟೂ ಆರು ಡಬಲ್ ಡೆಕ್ಕರ್ ಬಸ್‌ಗಳನ್ನು ಖರೀದಿಸಲು ಮುಂದಾಗಲಾಗಿದೆ.
ಹೇಗಿರಲಿವೆ ಬಸ್?: ಬಸ್‌ನ ಕೆಳಗೆ ಮತ್ತು ಮೇಲ್ಭಾಗದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಸುಖಾಸಿನಗಳಿರಲಿವೆ. ಇಡೀ ಬಸ್ ಸಂಪೂರ್ಣ ಗ್ಲಾಸ್‌ಗಳಿಂದ ಕೂಡಿರಲಿದ್ದು, ಐತಿಹಾಸಿಕ ಸ್ಥಳಗಳನ್ನು ಬಸ್‌ನಲ್ಲಿ ಕುಳಿತುಕೊಂಡು ನೋಡಬಹುದಾಗಿದೆ.
ಮೈಸೂರಿನಲ್ಲಿ ಮೊದಲ ಬಾರಿಗೆ ಓಪನ್ ಬಸ್ ಸಾರಿಗೆಗೆ ಉತ್ತಮ ಪತಿಕ್ರಿಯೆ ಸಿಕ್ಕಿತ್ತು. ಆದ್ದರಿಂದ ಮೈಸೂರಿನಲ್ಲಿ ನಾಲ್ಕು ಮತ್ತು ಹಂಪಿಯಲ್ಲಿ ಎರಡು ಡಬಲ್ ಡೆಕ್ಕರ್ ಬಸ್ ಸೌಕರ್ಯ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಈ ಬಸ್‌ಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುವ ಭರವಸೆ ಇದೆ. ಐದು ಅಥವಾ ಆರು ತಿಂಗಳಲ್ಲಿ ಸೇವೆ ಪ್ರಾರಂಭವಾಗಬಹುದು.
•
ಕುಮಾರ್ ಪುಷ್ಕರ್,
ವ್ಯವಸ್ಥಾಪಕ ನಿರ್ದೇಶಕ, ಕೆಎಸ್‌ಟಿಡಿಸಿ, ಬೆಂಗಳೂರು.