Advertisement
ಸೋಮವಾರ ರಾತ್ರಿ 8.30ರ ಸುಮಾರಿಗೆ ನೆರೆನೀರಿನಿಂದ ಮುಳುಗಡೆಯಾಗಿದ್ದ ಸೇತುವೆ ಮಂಗಳವಾರ ಮಂಜಾನೆ ಸಂಚಾರಕ್ಕೆ ಮುಕ್ತವಾಗಿತ್ತು. ಮಂಗಳವಾರ ಬೆಳಗ್ಗೆ 8 ಗಂಟೆಯ ಸುಮಾರಿಗೆ ಸೇತುವೆಯ ಮೇಲೆ ಮತ್ತೆ ನೆರೆನೀರು ಹರಿಯಲಾರಂಭಿಸಿ ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು. ಮಧ್ಯಾಹ್ನದ ವೇಳೆಗೆ ನೆರೆನೀರಿನ ಮಟ್ಟ ಕಡಿಮೆಯಾದರೂ ಸೇತುವೆಯ ಮೇಲೆ ಸಣ್ಣ ಪ್ರಮಾಣದಲ್ಲಿ ನೆರೆನೀರು ಹರಿಯುತ್ತಿತ್ತು. ಸೇತುವೆ ಮುಳುಗಡೆಯಿಂದಾಗಿ ಪ್ರಯಾಣಿಕರು ಸುತ್ತು ಬಳಸಿ ಉಪ್ಪಿನಂಗಡಿಯಿಂದ ಕಡಬ, ಸುಬ್ರಹ್ಮಣ್ಯದತ್ತ ಪ್ರಯಾಣಿಸಬೇಕಾಯಿತು. ಕೆಲವು ಪ್ರಯಾಣಿಕರು ಸೇತುವೆಯ ಒಂದು ಭಾಗದಲ್ಲಿ ವಾಹನಗಳನ್ನು ನಿಲ್ಲಿಸಿ ಇನ್ನೊಂದು ಭಾಗಕ್ಕೆ ನಿರ್ಮಾಣ ಹಂತದಲ್ಲಿರುವ ನೂತನ ಸೇತುವೆಯ ಮೂಲಕ ನಡೆದು ಹೋಗಿ ಬೇರೆ ವಾಹನಗಳಲ್ಲಿ ತೆರಳುತ್ತಿದ್ದರು. ಇತ್ತ ಸರಕಾರಿ ಬಸ್ ಗಳಲ್ಲಿ ಬರುತ್ತಿದ್ದ ಜನರು ಒಂದು ಬದಿಯಿಂದ ಇನ್ನೊಂದು ಬದಿ ಸೇರಲು ನೂತನ ಸೇತುವೆಯನ್ನು ಆಶ್ರಯಿಸಿದ್ದಾರೆ.
ಮಂಗಳವಾರ ಬೆಳಗ್ಗೆ ನೆರೆ ನೀರು ಹರಿಯುತ್ತಿದ್ದ ಸೇತುವೆಯ ಮೇಲೆ ಅಪಾಯಕಾರಿ ರೀತಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಿ ಸೇತುವೆಯ ಎರಡೂ ಬದಿಯಲ್ಲಿ ಕಾವಲು ನಿರತರಾಗಿದ್ದ ಗೃಹರಕ್ಷಕ ಸಿಬಂದಿ ಹಾಗೂ ಪೊಲೀಸರು ಕರ್ತವ್ಯಲೋಪ ಎಸಗಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಹತ್ತು ವರ್ಷಗಳ ಹಿಂದೆ ನೆರೆನೀರು ಹರಿಯುತ್ತಿದ್ದಾಗ ಸೇತುವೆಯಲ್ಲಿ ಸಿಮೆಂಟ್ ಹೇರಿಕೊಂಡು ಬಂದಿದ್ದ ಲಾರಿಯೊಂದು ಸಾಗಿದ್ದ ಪರಿಣಾಮ ನೀರುಪಾಲಾಗಿ ನಾಲ್ವರು ಮೃತಪಟ್ಟಿದ್ದರು. ಅದಕ್ಕೂ ಮೊದಲು ಇದೇ ರೀತಿ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದರು. ಇಷ್ಟೆಲ್ಲ ಅಪಾಯ ಸಂಭವಿಸಿದ್ದರೂ ಪೊಲೀಸರು ಹಾಗೂ ಕಾವಲು ನಿರತ ಸಿಬಂದಿ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ ಎನ್ನುವ ಅಭಿಪ್ರಾಯ ಸಾರ್ವ ಜನಿಕ ವಲಯದಲ್ಲಿ ವ್ಯಕ್ತವಾಯಿತು. ಘಟನೆಗೆ ಸಂಬಂಧಿಸಿದ ಫೋಟೋ ಮತ್ತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸೇತುವೆಯ ಮೇಲೆ ನೀರು ಹರಿಯುತ್ತಿರುವಂತೆಯೇ ದ್ವಿಚಕ್ರ ವಾಹನಗಳೂ ಸಹಿತ ಹಲವಾರು ವಾಹನಗಳು ಸಂಚರಿಸುತ್ತಿರುವುದು ಮಾತ್ರವಲ್ಲದೇ ಪೊಲೀಸ್ ವಾಹನವನ್ನು ಹೋಲುವ ಸರಕಾರಿ ವಾಹನವೂ ಇತರ ವಾಹನಗಳೊಂದಿಗೆ ಸೇತುವೆ ಮೇಲೆ ಸಾಗುತ್ತಿರುವ ದೃಶ್ಯಾವಳಿ ವೈರಲ್ ಆಗುತ್ತಲಿದೆ.
Related Articles
ಸೇತುವೆಯ ಮೇಲೆ ನೆರೆ ನೀರು ಹರಿಯುತ್ತಿದ್ದ ಹಿನ್ನೆಲೆಯಲ್ಲಿ ಸೇತುವೆಯ ಎರಡೂ ಬದಿಗಳಲ್ಲಿ ರಕ್ಷಣಾ ಗೇಟುಗಳನ್ನು ಮುಚ್ಚಿ ಕಾವಲು ಕಾಯುವುದಕ್ಕೆ ಪೊಲೀಸ್ ಸಿಬಂದಿ ಜತೆಗೆ ಗೃಹರಕ್ಷಕ ಸಿಬಂದಿ ನೇಮಿಸಲಾಗಿದೆ. ಸೇತುವೆಯ ಮೇಲೆ ನೀರಿನ ಹರಿವು ಕಡಿಮೆಯಾಗಿದ್ದ ಸಂದರ್ಭದಲ್ಲಿ ಕೆಲವು ವಾಹನಗಳು ಸಂಚರಿಸಿರುವ ವಿಚಾರ ಗಮನಕ್ಕೆ ಬಂದಿದೆ. ಈ ಬಗ್ಗೆ ಮಾಹಿತಿ ಪಡೆದು ಸಿಬಂದಿ ನಿರ್ಲಕ್ಷ್ಯ ವಹಿಸಿದ್ದು ಸಾಬೀತಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
– ಪ್ರಕಾಶ್ ದೇವಾಡಿಗ, ಕಡಬ PSI
Advertisement