Advertisement

ಹೊಸ್ಮಾರು-ಈದು ರಸ್ತೆಯಲ್ಲ; ಹೊಂಡಗುಂಡಿಗಳೇ ಎಲ್ಲ…

12:30 AM Jan 19, 2019 | |

ಹೊಸ್ಮಾರು: ಬೆಳ್ತಂಗಡಿ-ಧರ್ಮಸ್ಥಳ ಮುಖ್ಯರಸ್ತೆಗೆ ಸಂಪರ್ಕಿಸುವ ಕಾರ್ಕಳ ತಾಲೂಕಿನ ಹೊಸ್ಮಾರು-ಈದು ಒಳರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಂಚಾರ ದುಸ್ತರವಾಗಿದೆ. ಕಳೆದ ಮೂರ್‍ನಾಲ್ಕು ವರ್ಷಗಳಿಂದ ಈ ರಸ್ತೆ ದುರಸ್ತಿಗೊಳ್ಳದೇ ಆ ಭಾಗದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಹೊಸ್ಮಾರು ಸಮೀಪದ ಈದು ಕ್ರಾಸ್‌ನಿಂದ ಒಳಸಂಚರಿಸಿ ಸುಮಾರು 5 ಕಿ.ಮೀ. ಉದ್ದದ ರಸ್ತೆ ಇದು. ಅದೇ ಭಾಗದಿಂದ ನಾರವಿಗೆ ಸಂಪರ್ಕಿಸುವ ರಸ್ತೆ ಕೂಡ ಪೂರ್ತಿ ಹದಗೆಟ್ಟಿದೆ. ಈ ರಸ್ತೆಯಲ್ಲಿ ವಾಹನ ಸಂಚಾರ ಮಾತ್ರವಲ್ಲದೇ ಜನತೆ ನಡೆದಾಡುವುದು ಅಸಾಧ್ಯ ಎಂಬಂತಾಗಿದೆ. ಹತ್ತೆನ್ನೆರಡು ವರ್ಷಗಳ ಹಿಂದೆ ಈ ರಸ್ತೆ ಡಾಮರೀಕರಣಗೊಂಡಿತ್ತು. ಅನಂತರ ಯಾವುದೇ ದುರಸ್ಥಿ ಕಾರ್ಯ ನಡೆದಿಲ್ಲ.

ಎಲ್ಲೆಲ್ಲೂ ಹೊಂಡಗುಂಡಿಗಳೇ
ಅಲ್ಲಲ್ಲಿ ಬೃಹತ್‌ ಹೊಂಡಗಳು ತುಂಬಿದ್ದು, ರಸ್ತೆ ಎಲ್ಲಿದೆ ಎಂದು ಹುಡುಕಬೇಕಾದ ಪ್ರಮೇಯ ಎದುರಾಗಿದೆ. ಜಲ್ಲಿಕಲ್ಲುಗಳು ಮೇಲೆದ್ದು ಅಲ್ಲಲ್ಲಿ ರಾಶಿ ಬಿದ್ದಿದೆ. ಪೂರ್ಣ ಕಿತ್ತು ಹೋದ ರಸ್ತೆಯಲ್ಲಿ ಆ ಭಾಗದ ಜನರು ಸರ್ಕಸ್‌ ಮಾಡುವಂತಾಗಿದೆ. ಮಳೆಗಾಲದಲ್ಲಿ ಈ ರಸ್ತೆಯ ಗುಂಡಿಗಳಲ್ಲಿ ನೀರು ನಿಂತು ಸಮಸ್ಯೆ ಎದುರಾಗುತ್ತಿದೆ. ಈ ರಸ್ತೆ 2007-08ರಲ್ಲಿ ಗ್ರಾಮ ಸಡಕ್‌ ಯೋಜನೆಯಲ್ಲಿ ದುರಸ್ಥಿ ಆಗಿತ್ತು.

ಅಟೋಗಳೂ ಬರುವುದಿಲ್ಲ
ಪೂರ್ಣ ಹದಗೆಟ್ಟಿರುವ ರಸ್ತೆಯಿಂದಾಗಿ ಆ ಭಾಗಕ್ಕೆ ಆಟೋಗಳು ಬಾಡಿಗೆಗೆ ಬರುವುದಕ್ಕೂ ಹಿಂದೇಟು ಹಾಕುತ್ತಿವೆ. ಅದೇ ರಸ್ತೆಯನ್ನು ಅವಲಂಭಿಸಿ ನೂರಾರು ಮನೆಗಳಿದ್ದು, ಒಂದು ಶಾಲೆಯಿದೆ. ಆಟೋ ಸಂಚಾರ ಕೂಡ ಕಡಿಮೆಯಾಗಿ ನಾರವಿ ಹಾಗೂ ಹೊಸ್ಮಾರು ಭಾಗದಿಂದ ಈದು ಭಾಗಕ್ಕೆ ತೆರಳುವವರಿಗೆ ಸಂಕಷ್ಟ ಎದುರಾಗಿದೆ. ದ್ವಿಚಕ್ರ ವಾಹನದಲ್ಲಿ ತೆರಳುವವರಿಗೆ ಬೆನ್ನು ನೋವು ಎದುರಾಗುವುದು ಖಂಡಿತ ಎನ್ನುತ್ತಾರೆ ಆ ಭಾಗದ ಕೆಲವು ಮಂದಿ.

ಬಸ್ಸುಗಳ ಸಂಚಾರ ಸ್ಥಗಿತ
ಈ ಭಾಗಕ್ಕೆ ಕೆಲವು ವರ್ಷಗಳ ಹಿಂದೆ ದಿನಕ್ಕೆ 9 ಬಸ್‌ಗಳು ಓಡಾಡುತ್ತಿದ್ದವು. ಕಾರ್ಕಳ ಹೊಸ್ಮಾರು ಈದು ಹಾಗೂ ವೇಣೂರು ಕಡೆಯಿಂದ ಬರುವ ಬಸ್‌ ನಾರವಿ ಮೂಲಕ ಈದುವಿಗೆ ತೆರಳುತ್ತಿತ್ತು.ಆದರೆ ಸದ್ಯ ಒಂದು ಬಸ್‌ ಮಾತ್ರ ದಿನಕ್ಕೊಮ್ಮೆ ಆಭಾಗದಲ್ಲಿ ಓಡಾಡುತ್ತಿದೆ. ರಸ್ತೆ ಕಾರಣದಿಂದಾಗಿ ಬಸ್‌ಗಳನ್ನು ಸ್ಥಗಿತಗೊಳಿಸಿದ್ದಾರೆ.

Advertisement

ಟೆಂಡರ್‌ ಪ್ರಕ್ರಿಯೆ ಆಗಿದೆ
ಈದು-ಹೊಸ್ಮಾರು ರಸ್ತೆ ದುರಸ್ಥಿಗೆ ಸಂಬಂಧಿಸಿದಂತೆ 70 ಲಕ್ಷ ರೂ. ಇಡಲಾಗಿದ್ದು, ಈಗಾಗಲೇ ಟೆಂಡರ್‌ ಪ್ರಕ್ರಿಯೆ ಮುಗಿದಿದೆ. ಜನತೆಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಗಮನಿಸುತ್ತಿದ್ದು, ಕೆಲಸ ಪ್ರಾರಂಭಿಸಲು ಸೂಚನೆ ನೀಡಲಾಗಿದೆ.
– ದಿವ್ಯಶ್ರೀ ಅಮೀನ್‌,ಜಿ.ಪಂ. ಸದಸ್ಯೆ.

ಕಳಪೆ ಕಾಮಗಾರಿ
ಈ ಹಿಂದೆ ಹಾಕಲಾಗಿದ್ದ ಡಾಮರು 30 ವರ್ಷಗಳು ಕಳೆದರೂ ಗಟ್ಟಿಯಾಗಿತ್ತು.  ಗ್ರಾಮ ಸಡಕ್‌ನಲ್ಲಿ ಇತ್ತೀಚಿನ ವರ್ಷದಲ್ಲಿ ಹಾಕಲಾಗಿದ್ದ ರಸ್ತೆ ಪೂರ್ತಿ ಹೋಗಿದ್ದು, ಅದು ಕಳಪೆ ಕಾಮಗಾರಿಯಾಗಿದೆ. ಆ ಭಾಗದ ನೂರಾರು ಮನೆಯ ಜನತೆ 
ಇದೇ ರಸ್ತೆಯನ್ನು ಅಲವಂಬಿಸಿದ್ದಾರೆ. ಆದರೆ ರಸ್ತೆಯ ಕಾರಣದಿಂದಾಗಿ ಬರುತ್ತಿದ್ದ ಬಸ್‌ಗಳೂ ಕೂಡ ನಿಂತಿವೆ.
– ಸಂಜಯ್‌ ಭಟ್‌, 
ಸ್ಥಳೀಯರು.

Advertisement

Udayavani is now on Telegram. Click here to join our channel and stay updated with the latest news.

Next