ಬಳ್ಳಾರಿ: ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಹೊಸಪೇಟೆ- ಕೊಟ್ಟೂರು ರೈಲು ಸಂಚಾರದ ಬೇಡಿಕೆ ಕೊನೆಗೂ ಈಡೇರಿದ್ದು, ಹೊಸಪೇಟೆ ರೈಲು ನಿಲ್ದಾಣದಲ್ಲಿ ರೈಲ್ಚೆ ಸಚಿವ ಸುರೇಶ್ ಅಂಗಡಿ ನೂತನ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರುವ ಮೂಲಕ ಗುರುವಾರ ಚಾಲನೆ ನೀಡಿದರು.
ಬಳಿಕ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸುರೇಶ್ ಅಂಗಡಿ, ಹೊಸಪೇಟೆ-ಕೊಟ್ಟೂರು ರೈಲಿಗಾಗಿ ನಡೆಸಿದ ದಶಕದ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿಯವರು ಯೋಗಾ ಮುಖಾಂತರ ಜಗತ್ತು ಒಂದು ಮಾಡಿದರು. ಜಮ್ಮು ಕಾಶ್ಮೀರಕ್ಕೆ ಇದ್ದ 370ನೇ ವಿಧಿಯನ್ನು ರದ್ದು ಮಾಡುವ ಮೂಲಕ ದೇಶವನ್ನು ಒಂದು ಮಾಡಿದರು ಎಂದು ತಿಳಿಸಿದರು.
370 ರದ್ದು ಮಾಡಲು ಅಮಿತ್ ಷಾ ಹುಟ್ಟಿ ಬರಬೇಕಾಯ್ತ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಒಂದು ಮಾಡೋ ರೈಲ್ವೆ ಇಲಾಖೆ ನಮ್ಮ ಹೆಮ್ಮೆ. ರೈಲ್ವೆ ಬಜೆಟ್ ಬೇರೆ ಇತ್ತು. ಒಂದೆರಡು ರೂಪಾಯಿ ಜಾಸ್ತಿ ಮಾಡಿದರೆ ಪ್ರತಿಭಟನೆ ಮಾಡಿ ರಾಜಕೀಯ ಮಾಡುತ್ತಿದ್ದರು. ಇದೆಲ್ಲಾ ಬಿಟ್ಟು ಒಂದೇ ಬಜೆಟ್ ಮಾಡಿದ್ದು ಮೋದಿ. ಹಳ್ಳಿ ಹಳ್ಳಿಗೂ ಕನೆಕ್ಟಿವಿಟಿ ಮಾಡಿದ ಹೆಗ್ಗಳಿಕೆ ಮೋದಿಗೆ ಸೇರುತ್ತದೆ. ರೈಲ್ವೆ ಸ್ಟೇಷನ್ ಗೆ ಮೂಗು ಮುಚ್ಚಿಕೊಂಡುವ ಹೋಗಬೇಕಾಗಿತ್ತು. ಈಗ ಸೆಲ್ಫಿ ತೆಗೆದುಕೊಳ್ಳವಷ್ಟು ಸ್ವಚ್ಛವಾಗಿದೆ. ಇದೆಲ್ಲದಕ್ಕೆ ಮೋದಿ ಕಾರಣ. ಮೋದಿ ಪೊರಕೆ ಹಿಡಿದ ಕೂಡಲೇ ಎಲ್ಲಾ ಬದಲಾಯ್ತು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ರಾಜ್ಯದಲ್ಲಿ ಹಲವಾರು ರೈಲ್ವೆ ಯೋಜನೆಗಳು ಇವೆ. ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತೇವೆ. ಮಾಜಿ ಪ್ರಧಾನಿ ದೇವೇಗೌಡ, ಮಾಜಿ ರೈಲ್ವೆ ಸಚಿವ ದಿ. ಜಾಫರ್ ಷರಿಫ್ , ಬಸವರಾಜ ರಾಯರೆಡ್ಡಿ ಹಲವು ಯೋಜನೆ ಅಡಿಗಲ್ಲು ಹಾಕಿದ್ದಾರೆ. ಆ ಎಲ್ಲಾ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಇದೀಗ ಹಣ ನೀಡಿದ್ದು, ಎಲ್ಲವನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುರೇಶ್ ಅಂಗಡಿ, ಆರ್ಥಿಕ ಪ್ರಗತಿಗೆ ರೈಲ್ವೆ ಯೋಜನೆ ಸಹಕಾರಿಯಾಗಲಿದೆ. ರಾಜ್ಯ ಸರ್ಕಾರದ ಸಹಕಾರದೊಂದಿಗೆ ಕೆಲಸ ಮಾಡುತ್ತೇವೆ. ಕೆಲವೆಡೆ ಭೂ ಸ್ವಾಧೀನ ಸಮಸ್ಯೆ ಇದೆ. ಕರ್ನಾಟಕ, ಕೇರಳ, ಮಹಾರಾಷ್ಟ್ರ ಎಲ್ಲ ರಾಜ್ಯಗಳಿಗೂ ರೈಲು ಸಂಪರ್ಕ ಮಾಡುತ್ತೇವೆ. ಹಿಂದಿನ ಸರ್ಕಾರ ಭೂ ಸ್ವಾಧೀನ ಮಾಡಿಲ್ಲ. ಇದರಿಂದ ಕೆಲವೆಡೆ ಸಮಸ್ಯೆಯಾಗಿದ್ದು, ಯೋಜನೆ ವಿಳಂಬವಾಗುತ್ತಿದೆ. ಹಿಂದಿನ ಯೋಜನೆಗಳನ್ನು ಮೊದಲು ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದರು.
ಮಾಜಿ ಪ್ರಧಾನಿ ದೇವೇಗೌಡರು ಬರೀ ಅಡಿಗಲ್ಲು ಇಟ್ಟಿದ್ದರಾದರೂ, ಹಣ ನೀಡಿಲ್ಲ. ಗೋಲ್ಡನ್ ಚಾರಿಯಟ್ ಟ್ರೈನ್ ಸದ್ಯ ನಿಂತಿದೆ. ಅದರಿಂದ ರಾಜ್ಯ ಸರ್ಕಾರಕ್ಕೆ ನಷ್ಟವಾಗಿದೆ. ಕೇಂದ್ರಕ್ಕೆ ನೀಡಿದರೆ ನಾವು ಮಾಡುತ್ತೇವೆ ಎಂದ ಅವರು, ನೋ ಪ್ರಾಫಿಟ್ ನೋ ಲಾಸ್ ಆಗುವಂತೆ ಯೋಜನೆ ರೂಪಿಸುತ್ತೇವೆ. ಪ್ರೈವೇಟ್ ಟ್ರೈನ್ ಚೆನ್ನಾಗಿ ನಡೆಯುತ್ತದೆ. ಹೀಗಾಗಿ 150 ಟ್ರೈನ್ ಪ್ರೈವೇಟ್ ನೀಡೋ ಯೋಜನೆ ಇದೆ. ಕರ್ನಾಟಕಕ್ಕೂ ಖಾಸಗಿ ರೈಲು ಬರಲಿದೆ ಎಂದು ಸ್ಪಷ್ಟಪಡಿಸಿದರು.
ಬಳಿಕ ಹೊಸಪೇಟೆಯಿಂದ ಸಂಚಾರ ಆರಂಭಿಸಿದ 9 ಬೋಗಿಗಳುಳ್ಳ ನೂತನ ರೈಲು ಡಿಬಿಡ್ಯಾಂ, ವ್ಯಾಸನಕೆರೆ, ಮರಿಯಮ್ಮನಹಳ್ಳಿ, ಹಂಪಾಪಟ್ಟಣ ಮೂಲಕ ಕೊಟ್ಟೂರಿನತ್ತ ಪ್ರಯಾಣ ಬೆಳಸಿತು. ಈ ಮೂಲಕ ಕಳೆದ ಮೂರ್ನಾಲ್ಕು ದಶಕಗಳಿಂದ ಈ ಭಾಗದ ಜನರ ಬೇಡಿಕೆ ಕೊನೆಗೂ ಈಡೇರಿದಂತಾಯಿತು. ಹೊಸಪೇಟೆ, ಕೊಟ್ಟೂರು, ದಾವಣಗೆರೆ ಜನರಿಗೆ ಅನುಕೂಲವಾಗಲಿದೆ.
ನೂತನ ರೈಲು ಚಾಲನೆ ಕಾರ್ಯಕ್ರಮಕ್ಕೆ ಸಂಸದರಾದ ವೈ.ದೇವೇಂದ್ರಪ್ಪ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಜಿ.ಸೋಮಶೇಖರ ರೆಡ್ಡಿ ಸೇರಿದಂತೆ ಹಲವು ಮುಖಂಡರು ಇದ್ದರು.