Advertisement

ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ದ್ವಿಗುಣ

12:41 PM Jul 14, 2019 | Naveen |

ಹೊಸಪೇಟೆ: ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳ ರೈತರ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಐದು ದಿನದಲ್ಲಿ 7.5 ಟಿಎಂಸಿಯಷ್ಟು ನೀರು ಹರಿದು ಬಂದಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

Advertisement

ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಕಳೆದ ವಾರದಿಂದ ಬೀಳುತ್ತಿರುವ ಮಳೆಯಿಂದಾಗಿ ತುಂಗಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ಒಳ ಹರಿವಿನ ಪ್ರಮಾಣ ದ್ವಿಗುಣವಾಗಿದೆ. ತುಂಗಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ತುಂಗಾದಿಂದ 6501 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಹೀಗಾಗಿ ಶನಿವಾರ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, 26 ಸಾವಿರಕ್ಕೂ ಆಧಿಕ ಕ್ಯೂಸೆಕ್‌ ನೀರು ಹರಿದು ಬಂದಿದೆ. ಕಳೆದ ವರ್ಷ ಈ ದಿನಾಂಕದಲ್ಲಿ 59ಸಾವಿರ ಕ್ಯೂಸೆಕ್‌ ನೀರು ಜಲಾಶಯಕ್ಕೆ ಹರಿದು ಬಂದಿತ್ತು. ಕಳೆದ ವರ್ಷಗಿಂತಲೂ ಈ ವರ್ಷ ಸುಮಾರು ಅರ್ಧದಷ್ಟು ಒಳ ಹರಿವು ಕಡಿಮೆಯಾಗಿದೆ.

ಜು. 9ರಿಂದ ಜು. 13ರವರೆಗೆ ಒಟ್ಟು 7.5 ಟಿಎಂಸಿ ನೀರು ಹರಿದು ಬಂದಿದ್ದು, ಪ್ರಸ್ತುತ ಜಲಾಶಯದಲ್ಲಿ 9.314 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ನಾಲ್ಕು ವರ್ಷದಿಂದ ಮಳೆ ಕೊರತೆಯಿಂದ ಸಂಕಷ್ಟ ಎದುರಿಸುತ್ತಿದ್ದ ಈ ಭಾಗದ ರೈತರ ಬದುಕಿಗೆ ತುಂಗಭದ್ರಾ ಜಲಾಶಯ ಜೀವನ ಆಧಾರವಾಗಿದೆ. ಈ ಭಾಗದಲ್ಲಿ ಮಳೆ ಕೈಕೊಟ್ಟರೂ ತುಂಗಭದ್ರೆ ಎಂದಿಗೂ ರೈತರನ್ನು ಕೈ ಬಿಡುವುದಿಲ್ಲ ಎಂಬುದು ನಂಬಿಕೆ. ಹೀಗಾಗಿ ಕಳೆದ ಐದು ದಿನಗಳಿಂದ ಜಲಾಶಯದಲ್ಲಿ ಒಳಹರಿವು ಹರಿದು ಬರುತ್ತಿರುವ ಹಿನ್ನಲೆಯಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಚಟುವಟಿಕೆ ಗರಿಗೆದರಿವೆ.

Advertisement

Udayavani is now on Telegram. Click here to join our channel and stay updated with the latest news.

Next