Advertisement

ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ

07:46 PM Nov 09, 2019 | Team Udayavani |

ಹೊಸಪೇಟೆ: ಈ ಬಾರಿ ವಿಪರೀತ ಮಳೆಯಾಗಿದ್ದು, ಎಲ್ಲ ಗ್ರಾಮಗಳ ವ್ಯಾಪ್ತಿಯಲ್ಲಿ ಸೊಳ್ಳೆಗಳು ಹೆಚ್ಚಾಗಿವೆ. ಗ್ರಾಮಗಳ ಜನರು ರಾತ್ರಿ ಸಮಯದಲ್ಲಿ ಮಲಗಲು ಸಾಧ್ಯವಾಗುತ್ತಿಲ್ಲ ಎಂದು ತಾಪಂ ಸದಸ್ಯ ರಾಜಪ್ಪ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದ ತಾಲೂಕು ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಗರಗ ನಾಗಲಾಪುರದ ಗ್ರಾಮದಲ್ಲಿ ಕೋಳಿ ಫಾರ್ಮ ಇದ್ದು ರೈತರಿಗೆ ವಾಂತಿ ಪ್ರಾರಂಭವಾಗಿದೆ. ಹೊಲದಲ್ಲಿ ಊಟ ಮಾಡದಂತ ಪರಿಸ್ಥಿತಿ ಇದೆ. ಕೋಳಿ ಫಾರ್ಮ ಮಾಲೀಕ ಹಲವು ವರ್ಷಗಳಿಂದ ತೆರಿಗೆ ಪಾವತಿಸಿಲ್ಲ.

ಗ್ರಾಮ ಪಂಚಾಯಿತಿ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. ಮಲೇರಿಯಾ ಪ್ರಕರಣ ಹೆಚ್ಚಾಗುತ್ತಿವೆ. ಖಾಸಗಿ ಆಸ್ಪತ್ರೆಯಲ್ಲಿ ರೋಗಿಗಳ ಹಿಂಡು ಇದೆ. ಆದರೆ ಸರಕಾರಿ ಆಸ್ಪತ್ರೆಗಳು ಏನು ಕೆಲಸ ಮಾಡುತ್ತಿವೆ. 14ನೇ ಯೋಜನೆ ಹಣವನ್ನು ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿಲ್ಲ.

ಆ ಹಣ ದುರ್ಬಳಕೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಪಿಡಿಒ ಮಂಜುಳಾ ಬಾಯಿ ಮಾತನಾಡಿ, 5 ವರ್ಷದಿಂದ ಕಟ್ಟಡ ತೆರಿಗೆ ಪಾವತಿಸಿಲ್ಲ. ತೆರಿಗೆ ಪಾವತಿಸುವಂತೆ ಮಾಲೀಕರಿಗೆ ನೋಟಿಸ್‌ ನೀಡಲಾಗಿದೆ.

ಕೆಇಬಿ ಅವರಿಗೆ ವಿದ್ಯುತ್‌ ಕಡಿತಗೊಳಿಸುವಂತೆ ಸೂಚನೆ ನೀಡಲಾಗಿದೆ. ತೆರಿಗೆ ಪಾವತಿಸುವಂತೆ ಒತ್ತಾಯಿಸಿದರೆ ಮೈಸೂರು ಕೋರ್ಟ್‌ನಿಂದ ಪತ್ರವನ್ನು ಮಾಲೀಕರು ತೋರಿಸುತ್ತಿದ್ದಾರೆ ಎಂದು ಸಭೆ ಗಮನಕ್ಕೆ ತಂದರು. ತಾಲೂಕಿನಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಗ್ರಾಮ ಪಂಚಾಯಿತಿಯೊಂದಿಗೆ ಸಮನ್ವಯ ಸಾಧಿಸಿ ಡೆಂಘೀಯನ್ನು ತಡೆಗಟ್ಟಬೇಕು.

Advertisement

ಒಂದು ವೇಳೆ ನಿಷ್ಕಾಳಜಿಯನ್ನು ತೋರಿಸಿದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ ಮಾತನಾಡಿ, ತಾಲೂಕಿನಲ್ಲಿ 56 ಶಂಕಿತ ಡೆಂಘೀ ಪ್ರಕರಣಗಳು ಕಂಡು ಬಂದಿವೆ. ಶಂಕಿತ ಡೆಂಘೀಯಿಂದ ತಾಲೂಕಿನ ಗರಗದ ಸಲ್ಮಾ ಬಾಲಕಿ ಮೃತಪಟ್ಟಿದ್ದಾಳೆ.

ಗ್ರಾಮದಲ್ಲಿ ಲಾರ್ವಾ ಸರ್ವೇ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಫಾಗಿಂಗ್‌ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು. ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಕೆ. ವಾಮದೇವ, ಜನವರಿಯಿಂದ ಅಕ್ಟೋಬರ್‌ ತಿಂಗಳಿನವರೆಗೂ 583 ಎಂ.ಎಂ. ವಾಡಿಕೆ ಮಳೆ ಆಗಬೇಕಿತ್ತು. ಬಿದ್ದ ಮಳೆ 548 ಎಂ.ಎಂ. ಶೇ. 6ರಷ್ಟು ಕಡಿಮೆ ಮಳೆ ಆಗಿದೆ. ಕಟಾವು ಸಂದರ್ಭದಲ್ಲಿ ಮಳೆಯಾಗಿದ್ದರಿಂದ ತೊಂದರೆ ಉಂಟಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ 1750.29 ಕ್ವಿಂಟಲ್‌ ಬಿತ್ತನೆ ಬೀಜವನ್ನು ವಿತರಣೆ ಮಾಡಲಾಗಿದೆ. ಇನ್ನು 518 ಕ್ವಿಂಟಲ್‌ ಬಿತ್ತನೆ ಬೀಜ ವಿತರಣೆ ಮಾಡಬೇಕಾಗಿದೆ. ಈ ಹಿಂದೆ ವಿಷಜಂತು ಕಚ್ಚಿ ಸಾವನ್ನಪ್ಪಿದರೇ 1 ಲಕ್ಷ ರೂ. ನೀಡಲಾಗುತ್ತಿತ್ತು. ಈಗ 2 ಲಕ್ಷ ರೂ. ನೀಡಲಾಗುತ್ತಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿ ಕಾರಿ ಎಲ್‌.ಡಿ. ಜೋಷಿ, ತಾಲೂಕಿನ ಕಡ್ಡಿರಾಂಪುರ ಶಾಲೆಗೆ 5 ನೂತನ ಕೊಠಡಿ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಸೂಚಿಸಲಾಗಿದೆ.

ಸರಕಾರಿ ಶಾಲೆಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಸಲು ಯೋಚನೆ ಇದೆ. 17 ಪ್ರೌಢಶಾಲೆ ಹಾಗೂ 1 ಪ್ರಾಥಮಿಕ ಶಾಲೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಅಧ್ಯಕ್ಷೆ ಜೋಗದ ನೀಲಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಜ್ಜಿಗೆ ಶಿವಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಷಣ್ಮುಖಪ್ಪ, ಸದಸ್ಯರಾದ ಮಲ್ಲೆ ಹನುಮಕ್ಕ, ನಾಗರತ್ನಮ್ಮ, ತೋಟಗಾರಿಕೆ ಇಲಾಖೆ ಅಧಿಕಾರಿ ರಾಜೇಂದ್ರ, ಬಿಸಿಎಂ ಅಧಿಕಾರಿ ಎರ್ರಿಸ್ವಾಮಿ ಸೇರಿದಂತೆ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next