ಹೊಸಪೇಟೆ: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಗರದ ಜಂಬುನಾಥ ರಸ್ತೆಯ ಶ್ರೀಕೃಷ್ಣ ಮಠದ ಶ್ರೀ ಕೃಷ್ಣ ಪ್ರತಿಮೆಗೆ ಶುಕ್ರವಾರ ಅಭಿಷೇಕ, ಅಲಂಕಾರ ಗೈದು ವಿಶೇಷ ಪೂಜೆ ನೆರವೇರಿಸಲಾಯಿತು.
ಉಡುಪಿ ಪೇಜಾವರ ಮಠಾಧೀಶರಾದ ವಿಶ್ವೇಶತೀರ್ಥ ಶ್ರೀಪಾದಂಗಳವರ ಹಾಗೂ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರ ಆಜ್ಞಾನುಸಾರ ಶ್ರೀ ಮಠದಲ್ಲಿ ಆರ್ಚನೆ, ವಿವಿಧ ಪೂಜೆ, ವಿಶೇಷ ಸೇವೆ, ಅಘ್ಯರ್ ಪ್ರದಾನ ಉತ್ಸವ ಜರುಗಿದವು.
ಬೆಳಗ್ಗೆ ಶ್ರೀ ಕೃಷ್ಣನಿಗೆ ಲಕ್ಷ ತುಳಸಿ ಆರ್ಚನೆ, ಭಜನೆ, ವಿಷ್ಣು ಸಹಸ್ರ ನಾಮ, ಸಂಜೆ 3ಕ್ಕೆ ರಂಗೋಲಿ ಸ್ಪರ್ಧೆ ನಡೆಯಿತು. ರಾತ್ರಿ 12:12ಕ್ಕೆ ಸರಿಯಾಗಿ ಶ್ರೀ ಕೃಷ್ಣನಿಗೆ ಅಘ್ಯರ್ ಪ್ರದಾನ ನಡೆಯಿತು.
ವೇಣುಗೋಪಾಲ ಕೃಷ್ಣ ದೇಗುಲ: ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತವಾಗಿ ನಗರದ ಪಟೇಲ್ ನಗರದಲ್ಲಿರುವ ಶ್ರೀ ವೇಣುಗೋಪಾಲ ಕೃಷ್ಣ ದೇವಾಲಯದ ಗೋಪಾಲ ಕೃಷ್ಣ ಸ್ವಾಮಿ ಪ್ರತಿಮೆಗೆ ಶುಕ್ರವಾರ ವಿಶೇಷ ಪೂಜೆ ನೆರವೇರಿಸಲಾಯಿತು. ಬೆಳಿಗ್ಗೆ ನಿರ್ಮಾಲ್ಯ ಪೂಜೆ, ಫಲ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಅಲಂಕಾರ ಗೈದು ಪೂಜೆ ಸಲ್ಲಿಸಲಾಯಿತು.
ಶ್ರೀ ವಿಷ್ಣು ಸಹಸ್ರ ನಾಮ ಪಠಣ, ಮಹಾಗಣಪತಿ ಪೂಜೆ, ಪ್ರಾರ್ಥನೆ ಪುಣ್ಯಾಹ ವಾಚನ ಋತ್ವಿಗ್ವರಣ, ಕಲಶಮ ಮಂಡಲಾರಾಧನೆ, ಗೋಪಾಲಕೃಷ್ಣ ಪ್ರೀತ್ಯರ್ಥ ಹವನ, ಮಹಾಪೂರ್ಣಾಹುತಿ, ಮಹಾಮಂಗಳಾರತಿ, ವೇದ ಪಾರಾಯಣ ಉತ್ಸವಮೂರ್ತಿಗಳಿಗೆ ವಿವಿಧ ಫಲ-ರಸಾಯನದಿಂದ ಅಭಿಷೇಕ, ಶ್ರೀ ಲಕ್ಷ್ಮೀ ಸಮಸ್ರನಾಮಾರ್ಚನೆ ಹಾಗೂ ಕಲ್ಯಾಣೋತ್ಸವ ನಡೆಯಿತು. ಬೆಳಗ್ಗೆಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ನಿಂತು ಕೃಷ್ಣನ ದರ್ಶನ ಪಡೆದರು. ಹೂ ಹಣ್ಣು, ಕಾಯಿ ಹಾಗೂ ಕಾಣಿಕೆ ಸಲ್ಲಿಸಿ ಧನ್ಯತೆ ಮೆರೆದರು.