ಹೊಸಪೇಟೆ: ಮನೆಯಂಗಳದಲ್ಲಿ ಕಟ್ಟಿಹಾಕಿದ ಜಾನುವಾರು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಕಳ್ಳನನ್ನು ನಗರದ ಗ್ರಾಮೀಣ ಠಾಣೆ ಪೊಲೀಸರು, ಮಂಗಳವಾರ(ಜೂ.7 ರಂದು ) ಬಂಧಿಸಿದ್ದಾರೆ.
ಸಮೀಪದ ಟಿ.ಬಿ.ಡ್ಯಾಂ ನಿಶ್ಯಾನಿ ಕ್ಯಾಂಪ್ ನಿವಾಸಿ ಎಜಾಜ್ ಅಲಿಯಾಸ್ ತಾಜ್ (25) ಬಂಧಿತ ಆರೋಪಿ. ಇಲ್ಲಿನ ಅನಂತಶಯನ ಗುಡಿ ಗ್ರಾಮದ ನಿವಾಸಿ ಕಪ್ಲಿ ಭರಮ್ಮಪ್ಪ ಎಂಬ ರೈತನ ಮನೆಂಗಳದಲ್ಲಿ ಕಟ್ಟಿ ಹಾಕಿದ್ದ 1.10 ಲಕ್ಷ ರೂ ಮೌಲ್ಯದ 1 ಹಸು ಹಾಗೂ 3 ಎತ್ತುಗಳನ್ನು ಕಳೆದ ಮಾರ್ಚ್ ತಿಂಗಳಲ್ಲಿ ಆರೋಪಿ ತಾಜ್, ಕದ್ದು ಪರಾರಿಯಾಗಿದ್ದನು.
ಈ ಕುರಿತು ಕಪ್ಲಿ ಭರ‍್ಮಪ್ಪ, ನಗರದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯದಲ್ಲಿದ್ದ ಪೊಲೀಸರಿಗೆ, ಮಂಗಳವಾರ ನಸುಕಿನಲ್ಲಿ ಅನಂತಶಯನ ಗುಡಿಯ ಬನ್ನಿ ಮಹಾಂಕಾಳಿ ದೇವಸ್ಥಾನದ ಹತ್ತಿರ ಆರೋಪಿ ತಾಜ್ ಸಿಕ್ಕಿ ಬಿದ್ದಿದ್ದಾನೆ.
ಹಗರಿಬೊಮ್ಮನಹಳ್ಳಿ ಜಾನುವಾರು ಸಂತೆಯಲ್ಲಿ ಮಾರಾಟ ಮಾಡಲು ಹೋಗುತ್ತಿರುವ ಸಂದರ್ಭದಲ್ಲಿ ದಾರಿ ಮಧ್ಯದ ವರದಪುರ ಗ್ರಾಮದಲ್ಲಿ ಇಬ್ಬರು ವ್ಯಕ್ತಿಗಳಿಗೆ ಜಾನುವಾರು ಮಾರಾಟ ಮಾಡಿರುವುದಾಗಿ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ಈ ಹಿಂದೆಯೂ ಕೂಡ ಆರೋಪಿ ಜಾನುವಾರ ಕಳ್ಳತನ ಪ್ರಕರಣದಲ್ಲಿಯೂ ಭಾಗಿಯಾಗಿದ್ದನು.
ಈ ಕುರಿತು ಟಿ.ಬಿ.ಡ್ಯಾಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.