ಹೊಸಪೇಟೆ: ಸುಡು ಬಿಸಿಲಿನ ತಾಪ, ಕುಡಿಯುವ ನೀರಿನ ಅಭಾವದ ನಡುವೆ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳು ದಿಢೀರ್ ಸ್ಥಗಿತಗೊಂಡು ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.
ನಗರದ ವಿವಿಧೆಡೆ ಕಾರ್ಯನಿರ್ವಹಿಸುತ್ತಿದ್ದ 70ಕ್ಕೂ ಆಧಿಕ ಶುದ್ಧ ಕುಡಿಯುವ ಘಟಕಗಳನ್ನು ನಗರಸಭೆ ಮುಚ್ಚಿಸಿರುವ ಪರಿಣಾಮ ಸಾರ್ವಜನಿಕರು, ನೀರಿನ ಘಟಕ ಹುಡುಕಿಕೊಂಡು ತಿರುಗಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಅನುಮತಿ ಪಡೆಯದೆ ನೀರಿನ ಘಟಕಗಳನ್ನು ನಡೆಸಲಾಗುತ್ತಿದೆ ಎಂದು ನಗರಸಭೆ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮುಚ್ಚುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ನಗರದಲ್ಲಿ ಒಂದೆರೆಡು ಬಿಟ್ಟರೆ, ಉಳಿದೆಲ್ಲ ಶುದ್ಧ ನೀರಿನ ಘಟಕಗಳ ಬಾಗಿಲಿಗೆ ಬೀಗ ಜಡಿಯಲಾಗಿದೆ. ಇದರಿಂದಾಗಿ ಸಾರ್ವಜನಿಕರು ಶುದ್ಧ ನೀರಿಗಾಗಿ ಸಾರ್ವಜನಿಕರು ಬೀದಿ, ಬೀದಿ ಅಲೆಯುವಂತಾಗಿದ್ದು, ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ದಿನಕ್ಕೆ ಬೇಕಿದೆ 3.5ಲಕ್ಷ ಲೀಟರ್ ನೀರು: ನಗರದಲ್ಲಿ ಒಟ್ಟು 70 ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಪ್ರತಿ ನಿತ್ಯ ಮೂರುವರೆ ಲಕ್ಷ ಲೀಟರ್ ನೀರು ಖರ್ಚಾಗುತ್ತಿದೆ. 5 ರೂ. ಕ್ಕೆ 20 ಲೀಟರ್ ನೀರು ಮಾರಾಟ ಮಾಡುತ್ತವೆ. ಇತ್ತೀಚೆಗೆ ಕಡಿಮೆ ಬೆಲೆಯಲ್ಲಿ ಶುದ್ಧ ನೀರು ಸಿಗುವುದರಿಂದ ಘಟಕಗಳ ಮೇಲೆ ಜನರ ಅವಲಂಬನೆ ಹೆಚ್ಚಾಗಿದೆ.
ನಗರದ ವಿವಿಧ ಬಡಾವಣೆಯ ನಿವಾಸಿಗಳ ಜತೆಗೆ ರಸ್ತೆಬದಿಯ ಗೂಡಂಗಡಿಗಳು, ಸಣ್ಣ ಹೋಟೆಲ್ಗಳು ಘಟಕಗಳ ನೀರನ್ನೇ ಉಪಯೋಗಿಸುತ್ತಿದ್ದು, ಇದೀಗ ಪೇಚಿಗೆ ಸಿಲುಕಿದ್ದಾರೆ. ಕೆಲವು ಘಟಕಗಳು ನೀರು ಇಲ್ಲ ಎಂದು ಫಲಕ ಹಾಕಿದ್ದರೆ, ಮತ್ತೆ ಕೆಲವು ಘಟಕಗಳು ಸಂಪೂರ್ಣವಾಗಿ ಮುಚ್ಚಿವೆ. ಒಂದೆಡೆ ಸಿಗದಿದ್ದರೆ ಮತ್ತೂಂದು ಕಡೆಯಾದರೂ ಸಿಗಬಹುದು ಎಂದು ಜನ ಘಟಕದಿಂದ ಘಟಕಗಳಿಗೆ ಓಡಾಡಿದರೂ ನೀರು ಸಿಗದೇ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮನೆ ದಾರಿ ಹಿಡಿಯುತ್ತಿದ್ದಾರೆ. ಎಂ.ಪಿ. ಪ್ರಕಾಶ್ ನಗರ, ಪಟೇಲ್ ನಗರ ಸೇರಿದಂತೆ ಕೆಲವೆಡೆ ಸಾರ್ವಜನಿಕರು ನೀರು ಕೊಡುವಂತೆ ಒತ್ತಾಯ ಮಾಡಿದರು. ಈಗ ಕಡು ಬೇಸಿಗೆ. ಇಂತಹ ಸಂದರ್ಭದಲ್ಲಿ ಘಟಕಗಳನ್ನು ಮುಚ್ಚಿಸಿರುವುದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಘಟಕಗಳ ಮಾಲೀಕರು ವಾಸ್ತವ ಸ್ಥಿತಿ ಕುರಿತು ಮನವರಿಕೆ ಮಾಡಿಕೊಡಲು ಯತ್ನಿಸಿದರು.
ಈಗಲೂ ನಗರದ ಅನೇಕ ಕಡೆಗಳಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಇತ್ತೀಚೆಗೆ ಚಿತ್ತವಾಡ್ಗಿಯಲ್ಲಿ ಅನೇಕ ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿದ್ದು, ಅವುಗಳಿಗೆ ಮುಕ್ತಿ ಹಾಡಬೇಕು. ಜನರಿಗೆ ಯಾವುದೇ ರೀತಿಯ ಸಮಸ್ಯೆಯಿಲ್ಲದೆ ಶುದ್ಧ ಕುಡಿಯುವ ನೀರು ಪೂರೈಸುವ ಕೆಲಸವಾಗಬೇಕು ಎಂದು ಒತ್ತಾಯಿಸಿದರು.
ನೀರಿನ ಘಟಕಗಳನ್ನು ಮುಚ್ಚಿಸಿರುವುದ ರಿಂದ ಜನರಿಗೆ ಎಷ್ಟು ತೊಂದರೆ ಆಗುತ್ತಿದೆ ಎನ್ನುವುದು ಜಿಲ್ಲಾಧಿಕಾರಿಗಳಿಗೆ ಗೊತ್ತಾಗುತ್ತಿಲ್ಲ. ಒಂದು ವೇಳೆ ಸಮಸ್ಯೆ ಗೊತ್ತಾಗಿದ್ದರೆ ಬೇಸಿಗೆಯಲ್ಲಿ ಘಟಕಗಳನ್ನು ಮುಚ್ಚಿಸಿರುತ್ತಿರಲಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಹೋಟೆಲ್ ನಲ್ಲಿ ನಿತ್ಯ ಎಂಟರಿಂದ ಹತ್ತು ಕ್ಯಾನ್ ನೀರು ಖರ್ಚಾಗುತ್ತದೆ. 5 ರೂ. ಒಂದು ಕ್ಯಾನ್ (20 ಲೀಟರ್ ) ನೀರು ಖರೀದಿಸುತ್ತೇನೆ. ಈಗ ಖಾಸಗಿ ಘಟಕಗಳು ಮುಚ್ಚಿರುವುದರಿಂದ ಸಮಸ್ಯೆಯಾಗುತ್ತಿದೆ. ಖಾಸಗಿ ಘಟಕಗಳು ತೆರೆಯುವವರೆಗೆ ಹೋಟೆಲ್ ಬಂದ್ ಮಾಡಲು ತೀರ್ಮಾನಿಸಿದ್ದೇನೆ.
•
ಮಾಲೀಕ ಮಂಜುನಾಥಗೂಡಂಗಡಿ
ಹೋಟೆಲ್ ಮಾಲೀಕರು