ಹೊಸಪೇಟೆ: ಕಡ್ಡಾಯ ವರ್ಗಾವಣೆ ನೀತಿಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕು ಘಟಕದ ನೇತೃತ್ವದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು, ತಹಶೀಲ್ದಾರ್ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಈಗಾಗಲೇ ಎ ವಲಯದಲ್ಲಿ ಹತ್ತು ವರ್ಷಗಳ ಸೇವೆ ಪೂರೈಸಿದ ಶಿಕ್ಷಕರನ್ನು ಸಿ ವಲಯಕ್ಕೆ ಕಡ್ಡಾಯ ವರ್ಗಾವಣೆ ಮಾಡಲು ಹೊರಟಿರುವ ಸರ್ಕಾರದ ಕ್ರಮ ಅವೈಜ್ಞಾನಿಕವಾಗಿದೆ.
ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಿ ಸಿ ವಲಯದಿಂದ ಎ ವಲಯಕ್ಕೆ ಬಂದಿರುವ ಶಿಕ್ಷಕರಿಗೆ ಈ ನೀತಿ ತೊಡಕಾಗಲಿದೆ ಎಂದು ಅಳಲು ತೋಡಿಕೊಂಡರು.
10 ವರ್ಷ ಸೇವೆ ಸಲ್ಲಿಸಿದ್ದ ಶಿಕ್ಷಕರನ್ನು ಸಿ.ವಲಯಕ್ಕೆ ವರ್ಗಾಯಿಸಲು ನಿಯಮ ರೂಪಿಸಿದ್ದು, ಪತಿ-ಪತ್ನಿ ಪ್ರಕರಣದಲ್ಲಿ ಕೆಲವರಿಗೆ ವಿನಾಯತಿ ನೀಡಿದೆ. ಸುಮಾರು 20 ವರ್ಷಗಳಿಂದ ಎ ವಲಯದಲ್ಲಿ ಸೇವೆ ಸಲ್ಲಿಸಿದ ಪತಿ, ಪತ್ನಿಯರು ಅಲ್ಲೆ ಉಳಿಯಲಿದ್ದಾರೆ. ಪತ್ನಿ ಅಥವಾ ಪತಿ ನೌಕರರಲ್ಲದ ಶಿಕ್ಷಕರು ಮಾತ್ರ ಸಿ ವಲಯಕ್ಕೆ ವರ್ಗಾವಣೆಯಾಗಬೇಕು. ಇತಂಹ ನೀತಿಯಿಂದ ಅನೇಕ ಶಿಕ್ಷಕರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಸರ್ಕಾರ ಕಡ್ಡಾಯ ವರ್ಗಾವಣೆ ನೀತಿಯನ್ನು ಮರು ಪರಿಶೀಲಿಸಿ ಶಿಕ್ಷಕರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಇಲ್ಲವಾದಲ್ಲಿ ಪ್ರಾಥಮಿಕ ಶಿಕ್ಷಕರ ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಶಿಕ್ಷಕರಾದ ಪಿ.ಎನ್.ಲಕ್ಷ್ಮೀ, ರಾಮಚಂದ್ರಪ್ಪ, ಎ.ಕೊಟ್ರೇಶ್, ಮಲ್ಲಿಕಾರ್ಜುನ, ಶಿವಶಂಕರ, ನಾಗರಾಜಯ್ಯ, ಕೆ.ತಿಪ್ಪೇಸ್ವಾಮಿ, ಎ.ಕುಬೇರಾಚಾರಿ ಹಾಗೂ ನವೀನ್ ಕುಮಾರ್ ಇನ್ನಿತರರಿದ್ದರು.