ಹೊಸಪೇಟೆ: ಹೈದರಾಬಾದಿನ ಪಶುವೈದ್ಯ ಮೇಲಿನ ಅತ್ಯಾಚಾರ, ಕೊಲೆ ಕ್ರಮ ಖಂಡಿಸಿ, ನೇತೃತ್ವದಲ್ಲಿ ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ನಗರದ ರೋಟರಿ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಅಖೀಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ, ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್, ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ ನೇತೃತ್ವದಲ್ಲಿ ಅಂಬೇಡ್ಕರ್ ವೃತ್ತದಿಂದ ರೋಟರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆ ಸಿದ ವಿದ್ಯಾರ್ಥಿಗಳು ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಹಸುಳೆಗೆ (ಮಗುವಿಗೆ) ರಕ್ಷಣೆಯಾವಾಗ, ಸರ್ಕಾರಗಳ ಬೇಜವಬ್ದಾರಿತನಕ್ಕೆ ಧಿಕ್ಕಾರ, ಅಶ್ಲೀಲ ಸಿನಿಮಾ ಸಾಹಿತ್ಯ ನಿಷೇಧಿಸಬೇಕು ಎಂದು ವಿದ್ಯಾರ್ಥಿಗಳು ಮಳೆಯಲ್ಲಿಯೇ ಘೋಷಣೆಗಳನ್ನು ಕೂಗಿದರು.
ಎಐಎಂಎಸ್‌ಎಸ್‌ನ ಜಿಲ್ಲಾ ಘಟಕದ ಅಧ್ಯಕ್ಷೆ ಎ.ಶಾಂತಾ ಅವರು ಮಾತನಾಡಿ, ಸಮಾಜದಲ್ಲಿ ದಿನದಿಂದ ದಿನಕ್ಕೆ ಇಂತಹ ಕೃತ್ಯಗಳು ಹೆಚ್ಚಾಗುತ್ತಿವೆ. ಇದು ಸರ್ಕಾರಗಳ ಮತ್ತು ನ್ಯಾಯಾಲಯಗಳ ನಿರ್ಲಕ್ಷ್ಯತಯೇ ಸಂಕೇತವಾಗಿದೆ. ನಿರ್ಭಯಾಘಟನೆ ನಡೆದ ನಂತರ ಜಸ್ಟೀಸ್ ವರ್ಮಾ ಆಯೋಗದ ಶಿಫಾರಸ್ಸುಗಳಲ್ಲು ಇನ್ನೂ ಜಾರಿಗೊಳಿಸಿಲ್ಲ. ಅಪರಾಧಿಗಳಿಗೆ ಶಿಕ್ಷೆಯಾಗುತ್ತಿಲ್ಲ. ಇಂತಹ ಘಟನೆಗಳಿಂದ ಸಮಾಜ ಅಧೋಗತಿಗೆ ಹೋಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಡಿವೈಓನ ಜಿಲ್ಲಾ ಸಂಚಾಲಕ ಎನ್. ಜಗದೀಶ್ ಅವರು ಮಾತನಾಡಿ, ದೇಶದಲ್ಲಿ ಮಹಿಳೆಯರಿಗೆ ಭದ್ರತೆಯಿಲ್ಲ. ಅತ್ಯಾಚಾರ ನಡೆದ ನಂತರ ಆರೋಪಿಗಳಿಗೆ ರಕ್ಷಣೆ ಸಿಗುತ್ತಿದೆ. ಇದು ದುರಂತದ ಸಂಗತಿಯಾಗಿದೆ. ಇಂತಹ ವ್ಯವಸ್ಥೆಯಲ್ಲಿ ನಮ್ಮ ಹೆಣ್ಣುಮಕ್ಕಳು ಬದುಕುತ್ತಿದ್ದಾರೆ. ಕೊಳೆತ ಸಮಾಜವನ್ನು ಕಿತ್ತುಹಾಕಿ ಮಹಿಳೆಯರನ್ನು ಗೌರವಿಸುವಂತಹ ಸಮಾಜವನ್ನು ನಾವೆಲ್ಲರೂ ನಿರ್ಮಿಸಬೇಕಾಗಿದೆ ಎಂದರು.
ಎಐಡಿಎಸ್‌ಓನ ಜಿಲ್ಲಾಧ್ಯಕ್ಷರಾದ ಜಿ.ಸುರೇಶ್, ಜಿಲ್ಲಾ ಕಾರ್ಯದರ್ಶಿ ಎರ್ರಿಸ್ವಾಮಿ, ಮುಖಂಡರಾದ ದಿವ್ಯಾ, ಅಭಿಷೇಕ್ ಕಾಳೆ, ಪಂಪಾಪತಿ ಕೋಳೂರ್, ರವಿ ದರೋಜಿ, ಹುಲುಗಪ್ಪ, ಯೇಸುದಾಸ್, ರಾಜು, ಆರ್.ನಾಗರಾಜ್, ಎ.ಮಲ್ಲಿಕಾರ್ಜುನ್ ಇನ್ನಿತರರಿದ್ದರು.