ಹೊಸಪೇಟೆ: ಹಗಲಿರುಳು ಸಮಾಜದ ಏಳುಬೀಳು-ಏಳ್ಗೆಯ ಬಗ್ಗೆ ಬೆಳಕು ಚೆಲ್ಲುವ ಪತ್ರಕರ್ತರು ಅನೇಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಶಾಸಕ ಆನಂದ್ ಸಿಂಗ್ ಹೇಳಿದರು.
ನಗರದ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಪತ್ರಕರ್ತರು, ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಕೈಗನ್ನಡಿಯಂತೆ ಹಗಲಿರುಳು ಶ್ರಮಿಸುತ್ತಿರುವ ಪತ್ರಕರ್ತರ ಬದುಕು ಸಂಕಷ್ಟದಲ್ಲಿದೆ. ಸರ್ಕಾರ ಹಾಗೂ ಪತ್ರಿಕಾ ಸಂಸ್ಥೆಗಳು ಇವರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ ಎಂದರು.
ಸಮಾಜಕ್ಕೆ ವಸ್ತು ನಿಷ್ಠೆಯನ್ನು ಚೆಲ್ಲುವ ನೇರ ನಿಷ್ಠುರ ಪತ್ರಕರ್ತರಿಂದ ಸಾಮಾಜಿಕ ಜನ ಜೀವನ ಬದಲಾವಣೆ ಕಾಣುತ್ತಿದೆ. ಅದರಂತೆಯೇ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಮೇಲಿನ ನಂಬಿಕೆ ಜೊತೆಗೆ ಪತ್ರಿಕಾಂಗದ ಕಾರ್ಯದ ಮೇಲೆ ಜನರು ಹೆಚ್ಚಿನ ನಂಬಿಕೆ ಇಟ್ಟಿದ್ದಾರೆ. ಪತ್ರಿಕೋದ್ಯಮ ತಂತ್ರಜ್ಞಾನದೊಂದಿಗೆ ಸಾಗುತ್ತಿರುವುದರಿಂದ ಅತಿ ವೇಗವಾಗಿ ಸುದ್ದಿಗಳು ಜನರ ಮನ ಸೇರುತ್ತಿವೆ. ಹಾಗಾಗಿ ಪತ್ರಿಕೋದ್ಯಮ ಕಲಿಕೆಯಲ್ಲಿರುವ ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನದ ಜತೆಗೆ ತಂತ್ರಜ್ಞಾನ ಅಳವಡಿಸಿಕೊಂಡು ಅಭಿವೃದ್ಧಿ ಕಾಣಬೇಕು. ಧಾರ್ಮಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸಮಾಜಕ್ಕೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಪತ್ರಕರ್ತರಲ್ಲಿ ಇರಬೇಕು. ಹೊಸಪೇಟೆಯ ಪತ್ರಕರ್ತರಲ್ಲಿನ ಸಹೋದರತ್ವದ ಅನ್ಯೋನ್ಯತೆ ರಾಜ್ಯಕ್ಕೆ ಮಾದರಿಯಾಗಿದ್ದು, ಇದೇ ರೀತಿ ನಿಮ್ಮ ಸಮಾಜ ಮುಖೀ ಪತ್ರಿಕಾ ಬರವಣೆಗಳು ಮೂಡಲಿ ಎಂದರು.
ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ| ಸ.ಚಿ.ರಮೇಶ್ ಮಾತನಾಡಿ, ಪ್ರತಿಕೆಗಳು ಸಮಾಜಮುಖೀಯಾಗಿ ಕೆಲಸ ಮಾಡುತ್ತಿವೆ. ಇತ್ತಿಚಿನ ದಿನಗಳಲ್ಲಿ ಮೊಬೈಲ್ ಹಾಗೂ ಟಿವಿಗಳಲ್ಲಿ ಮುಳುಗಿಹೋಗಿರುವ ವಿದ್ಯಾರ್ಥಿಗಳು, ನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಈ ಮೂಲಕ ತಮ್ಮ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಸಂಸ್ಕೃತಿ ಚಿಂತಕ ಡಾ.ವೆಂಕಟಗಿರಿ ದಳವಾಯಿ ವಿಶೇಷ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿಕನಕೇಶ್ ಮೂರ್ತಿ, ವಕೀಲರಾದ ಎ.ಕರುಣಾನಿಧಿ, ಐಎಂಎ ಅಧ್ಯಕ್ಷ ಡಾ.ಜಿ.ಎಂ.ಸೋಮೇಶ್ವರ, ಡಿವೈಎಸ್ಪಿ ಕೆ.ಶಿವರೆಡ್ಡಿ, ಪತ್ರಕರ್ತ ಬಿ.ಎಚ್.ರಾಜು ವೇದಿಕೆಯಲ್ಲಿದ್ದರು. ಹಿರಿಯ ಪತ್ರಕರ್ತ ಕೆ.ಲಕ್ಷ್ಮಣ ಪ್ರಾಸ್ತವಿಕವಾಗಿ ಮಾತನಾಡಿ, ಪತ್ರಕರ್ತರ ಪ್ರಸ್ತುತ ಸ್ಥಿತಿಗತಿಗಳ ಕುರಿತು ಬೆಳಕು ಚೆಲ್ಲಿದರು.ಪತ್ರಕರ್ತರಾದ ಸೋಮೇಶ್ ಉಪ್ಪಾರ್ ನಿರೂಪಿಸಿದರು. ವೆಂಕೋಬ ನಾಯಕ ಪೂಜಾರಿ ಸ್ವಾಗತಿಸಿದರು. ಪತ್ರಕರ್ತ ಕಿಚಿಡಿ ಕೊಟ್ರೇಶ್ ವಂದಿಸಿದರು.
ಪತ್ರಕರ್ತರಾದ ಉಮಾಪತಿ, ಪಿ.ಸತ್ಯನಾರಾಯಣ, ಬಿ.ಕುಮಾರಸ್ವಾಮಿ, ಸಿ.ಕೆ.ನಾಗರಾಜ, ಅನೂಪ್ ಕುಮಾರ್, ಪ್ರಕಾಶ್,ಅಂಬರೇಶ್, ರಾಮಚಂದ್ರ, ಕಾಕುಬಾಳು ವೀರಭದ್ರ, ಸಂಜಯ್ ಕುಮಾರ್, ಶಿವಂಕರ ಬಣಗಾರ್, ಮಂಜುನಾಥ, ಶಂಕರ್, ಅಬ್ದುಲ್ ಗಪಾರ್, ಮುಖಂಡರಾದ ಸಂದೀಪ್ ಸಿಂಗ್, ಗುಜ್ಜಲ ನಾಗರಾಜ, ಎಂ.ಜಂಬಯ್ಯ ನಾಯಕ, ಆರ್.ಭಾಸ್ಕರರೆಡ್ಡಿ, ಪ್ರಕಾಶ್, ಕೆ.ನಾಗರತ್ನಮ್ಮ. ಬಿ.ಮಹೇಶ್, ಬಿ.ಎಸ್.ಜಂಬಯ್ಯ ನಾಯಕ, ಗುಜ್ಜಲ ನಿಂಗಪ್ಪ, ರಮೇಶ್ ಕುಮಾರ್ ಹಾಗೂ ವಾಸು ಇನ್ನಿತರರಿದ್ದರು. ಇದಕ್ಕೂ ಮುನ್ನ ಕಾಲೇಜಿನ ಆವರಣದಲ್ಲಿ ಗಣ್ಯರು, ಸಸಿ ನೆಟ್ಟು ನೀರೆರೆದರು.