ಹೊಸಪೇಟೆ: ವೈದ್ಯಕೀಯ ಲೋಕಕ್ಕೆ ಮಾರಕವಾಗಲಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯ್ದೆ ಜಾರಿಯನ್ನು ಕೇಂದ್ರ ಸರ್ಕಾರ ಕೈ ಬಿಡಬೇಕು ಎಂದು ಒತ್ತಾಯಿಸಿ, ಭಾರತೀಯ ವೈದ್ಯಕೀಯ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಬುಧವಾರ ತಹಶೀಲ್ದಾರ್‌ರಿಗೆ ಮನವಿ ಸಲ್ಲಿಸಿದರು.
ಅನೇಕ ವರ್ಷಗಳ ಭಾರತೀಯ ವೈದ್ಯಕೀಯ ಸಂಸ್ಥೆಯನ್ನು ಮುಚ್ಚಿ ವೈದ್ಯಕೀಯ ಲೋಕಕ್ಕೆ ಮಾರಕವಾಗಲಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ ಜಾರಿಗೆ ತರಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮವನ್ನು ತ್ರೀವವಾಗಿ ಖಂಡಿಸಿದರು. ವೈದ್ಯಕೀಯ ಶಿಕ್ಷಣದ ಗುಣಮಟ್ಟಕ್ಕಾಗಿ ಕೆಲ ಕಾನೂನಾತ್ಮಕ ಬದಲಾವಣೆ ತುರುವ ಮೂಲಕ ಹಾಲಿ ಇರುವ ಇಂಡಿಯನ್ ಮೆಡಿಕಲ್ ಕೌನ್ಸಿಲ್ ಕಾಯ್ದೆಗೆ ಆರ್ಹ ತಿದ್ದುಪಡಿ ತರಬಹುದಾಗಿದೆ. ಅದನ್ನು ಬಿಟ್ಟು ಇರುವ ಕಾಯ್ದೆ ಬದಲಿಗೆ ಮತ್ತೂಂದು ಕಾಯ್ದೆ ಜಾರಿಗೆ ತರಲು ಹೊರಟಿರುವುದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕಾಯ್ದೆ ಜಾರಿಯಿಂದ ವೈದ್ಯಕೀಯ ಶಿಕ್ಷಣದ ಗುಣಮಟ್ಟ ಪ್ರಪಾತಕ್ಕೆ ತಳ್ಳುವುದಲ್ಲದೇ, ವೈದ್ಯಕೀಯ ವಿದ್ಯಾರ್ಥಿಗಳ ಹಾಗೂ ವೈದ್ಯರ ಆತ್ಮವಿಶ್ವಾಸ ಕ್ಷೀಣವಾಗಲಿದೆ. ರಾಜ್ಯದಲ್ಲಿ ಈಗಾಗಲೇ ಶೇ. 80ರಷ್ಟು ವೈದ್ಯಕೀಯ ಸೀಟುಗಳ ಶುಲ್ಕವನ್ನು ನಿಯಂತ್ರಿಸುವ ಹಕ್ಕನ್ನು ರಾಜ್ಯ ಸರ್ಕಾರ ಉಳಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಅದು ಶೇ. 40ರಷ್ಟು ಸೀಟುಗಳಿಗೆ ಮಾತ್ರ ಅನ್ವಯವಾಗಲಿದೆ. ಶೇ. 60ರಷ್ಟು ವೈದ್ಯಕೀಯ ಸೀಟುಗಳ ಶುಲ್ಕ ನಿಗದಿ ಅವಕಾಶವನ್ನು ಖಾಸಗಿ ವೈದ್ಯಕೀಯ ಕಾಲೇಜುಗಳು ಪಡೆದುಕೊಳ್ಳುತ್ತವೆ. ಇದರಿಂದಾಗಿ ಬಡ-ಮಧ್ಯಮ ವರ್ಗದ ಜನರು ವೈದ್ಯಕೀಯ ಶಿಕ್ಷಣದ ಆಸೆಯನ್ನು ಕೈ ಬಿಡಬೇಕಾಗುತ್ತದೆ. ನೂತನ ಆಯೋಗ ಕಾಯ್ದೆ ಜಾರಿಯಿಂದ ಮುಂದಿನ ದಿನಗಳಲ್ಲಿ ಕೆಲ ದಿನಗಳ ಮಾತ್ರ ತರಬೇತಿ ಪಡೆದ ಇತರೆ ಪದ್ಧತಿಯ ವೈದ್ಯರು ಕೂಡ ಅಧಿಕೃತವಾಗಿ ಅಲೋಪತಿ ವೈದ್ಯಕೀಯ ಪದ್ಧತಿಯನ್ನು ಅಳವಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇದರಿಂದಾಗಿ ವೈದ್ಯಕೀಯ ನಿರ್ಲಕ್ಷ್ಯತೆಯಿಂದಾಗಿ ಸಾವು-ನೋವುಗಳ ಸಂಖ್ಯೆ ದುಪ್ಪಟ್ಟಾಗುವ ಸಂಭವಿದೆ ಎಂದು ಅಳಲು ತೋಡಿಕೊಂಡರು.
ಕೂಡಲೇ ಕೇಂದ್ರ ಸರ್ಕಾರ ಜಾರಿ ತರಲು ಹೊರಟಿರುವ ಈ ಕಾಯ್ದೆಯನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು. ಡಾ| ಸೋಮೇಶ್ವರ, ಡಾ| ಹೇಮಂತ್, ಡಾ| ನಾರಾಯಣ ಸ್ವಾಮಿ, ಡಾ| ಮೃತ್ಯುಂಜಯ ವಸ್ತ್ರದ್, ಡಾ| ಅಶೋಕ ದಾತರ್, ಡಾ| ಅಮರೇಶ್ ಗುಗ್ರಿ, ಡಾ| ಮಹಾಬಲೇಶ್ವರ ರೆಡ್ಡಿ, ಡಾ| ಭಾಗವತ್ ಇನ್ನಿತರರಿದ್ದರು. ದೇಶದಾದ್ಯಂತ ಮುಷ್ಕರದ ಭಾಗವಾಗಿ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಸೇವೆ ಸ್ಥಗಿತಗೊಳಿಸಲಾಗಿತ್ತು. ವೈದ್ಯರ ಮುಷ್ಕರ ಮಾಹಿತಿ ಇಲ್ಲದೇ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದ ಸಾರ್ವಜನಿಕರು ಪರದಾಡಿದರು.