ಹೊಸಪೇಟೆ: ಕಾಂಗ್ರೆಸ್ ಪಕ್ಷದಲ್ಲಿದ್ದ ಆನಂದ ಸಿಂಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲೆ ನಮಗೂ ಧೈರ್ಯ ಬಂದು 17 ಜನ ಶಾಸಕರು ರಾಜೀನಾಮೆ ನೀಡಿ ಇದೀಗ ಸಚಿವರಾಗಿದ್ದೇವೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಸ್ಥಳೀಯ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಮಂಡಲ ಕಾರ್ಯಕರ್ತರ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಆನಂದ ಸಿಂಗ್ ಮೊದಲು ರಾಜೀನಾಮೆ ನೀಡಿದ ನಂತರವೇ ನಾವೆಲ್ಲರೂ ರಾಜೀನಾಮೆ ನೀಡಿ ಬಿಜೆಪಿ ಸೇರಿಕೊಂಡು, ಸಚಿವ ಸ್ಥಾನ ಅಲಂಕರಿಸಲು ಸಾಧ್ಯವಾಯಿತು. ರಾಜ್ಯದಲ್ಲಿ ಕೂಡ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಪ್ರಗತಿಯತ್ತ ಸಾಗಿದೆ. ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ವಿಶ್ವದ ದೊಡ್ಡ ದೇಶವಾಗಿ ಹೊರಹೊಮ್ಮಲಿದೆ ಎಂದು ಬಣ್ಣಿಸಿದರು.
ಸಹಕಾರ ಸಚಿವ ಟಿ.ಎಸ್. ಸೋಮಶೇಖರ್ ಮಾತನಾಡಿ, ಆನಂದ ಸಿಂಗ್ ಅವರ ಜೊತೆಯಲ್ಲಿ ಕಷ್ಟದಲ್ಲಿ ಹಾಗೂ ಸುಖದಲ್ಲಿಯೂ ಇದ್ದೇವೆ. ನಾವೆಲ್ಲರೂ ಒಗ್ಗಟ್ಟಿನಲ್ಲಿ ಇದ್ದೇವೆ. ಸರ್ಕಾರಕ್ಕೆ ಒಳ್ಳೆ ಹೆಸರು ತರುವ ಹಿನ್ನಲೆಯಲ್ಲಿ ನಾವೆಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
ಸಮಾರಂಭದಲ್ಲಿ ಕಾರ್ಯಕರ್ತರು ಸಚಿವರಾದ ಟಿ.ಎಸ್. ಸೋಮಶೇಖರ್, ಬಿ.ಸಿ.ಪಾಟೀಲ್ ಹಾಗೂ ಆನಂದ ಸಿಂಗ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಆರಂಭದಲ್ಲಿ ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಮುಖಂಡರಾದ ಅಯ್ನಾಳಿ ತಿಮ್ಮಪ್ಪ, ಸಾಲಿ ಸಿದ್ದಯ್ಯ, ಅನಂತ ಪದ್ಮನಾಭ, ಜಿ.ಬಸವ ರಾಜ, ಭೋಜರಾಜ, ಗುದ್ಲಿ ಬಸವ ರಾಜ, 81 ರೈಮಾನ್, ನಾಗ ವೇಣಿ,
ಜೀವ ರತ್ನಂ, ಅಪ್ಪರಾವ್ ಸಾನಬಾಳ್, ಶಂಕರ ಮೇಟಿ ಇನ್ನಿತರರಿದ್ದರು.