ಹೊಸಪೇಟೆ: ಹಿಂದಿ ಕಡ್ಡಾಯ ಹೇರಿಕೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ 2019ರನ್ನು ಖಂಡಿಸಿ ಸ್ಥಳೀಯ ಪ್ರಜಾಸತ್ತಾತ್ಮಕ ಸಾಂಸ್ಕೃತಿಕ ರಂಗದ ನೇತೃತ್ವದಲ್ಲಿ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು, ನಗರದ ರೋಟರಿ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾಕಾರರು, ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿದ ಅವರು, ಹಿಂದಿ ಕಡ್ಡಾಯ ಹೇರಿಕೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ 2019ಯನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಬಳಿಕ ರಂಗದ ಸಂಚಾಲಕ ಎ. ಕರುಣಾನಿಧಿ ಮಾತನಾಡಿ, ಶಿಕ್ಷಣ ಸಂವಿಧಾನದ ಮೂಲ ಹಕ್ಕು. ಸ್ವಾತಂತ್ರ್ಯದಾಚೆಗೆ ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು ಎಂಬುದರ ಆಶಯದೊಂದಿಗೆ, ಹದಿನಾಲ್ಕು ವರ್ಷದೊಳಗಿನ ಮಕ್ಕಳು ಉಚಿತ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಕಲಿಕೆಯನ್ನು ನೀಡಲಾಗುತ್ತಿದೆ. ಬಹು ಭಾಷೆಗಳಿಂದ ಕೂಡಿದ ದೇಶ ಭಾರತ. ರಾಜ್ಯಗಳಿಗೆ ಮಾತೃಭಾಷೆಯ ಹಕ್ಕನ್ನು ಸಂವಿಧಾನ ನೀಡಿದೆ. ಆದರೆ, ಕೇಂದ್ರ ಸರಕಾರ ಹಿಂದಿ ಭಾಷೆಯನ್ನು ರಾಜ್ಯಗಳಿಗೆ ಹೇರಿಕೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರಕಾರ ತನ್ನ ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಿಕ್ಷಣ, ಉನ್ನತ ಶಿಕ್ಷಣವನ್ನು ಖಾಸಗೀಕರಣ ಮಾಡುವ ಮೂಲಕ ಕೇಂದ್ರಿಕರಣಗೊಳಿಸಲು ರಾಷ್ಟ್ರೀಯ ಶಿಕ್ಷಣ ಕಾಯ್ದೆ 2019ನ್ನು ಅಭಿಪ್ರಾಯಕ್ಕಾಗಿ ತಿಳಿಸಲು ರಾಜ್ಯದ ವಿಶ್ವವಿದ್ಯಾಲಯಗಳಿಗೆ ತಿಳಿಸಲಾಗಿದೆ. ಜತೆಗೆ ಹಿಂದೆ ಭಾಷೆ ಹೇರಿಕೆ ಮಾಡಲು ಮುಂದಾಗಿದೆ. ಮಗು ಮೂರು ವರ್ಷಕ್ಕೆ ಶಾಲೆಗೆ ಹೋಗಬೇಕು. 6ನೇ ತರಗತಿ ತ್ರಿಭಾಷಾ ಸೂತ್ರ(ಹಿಂದಿ) ಕಡ್ಡಾಯ ಎಸ್ಸೆಸ್ಸೆಲ್ಸಿ, ಪಿ.ಯು.ಸಿ, ಪ್ರೌಢಶಿಕ್ಷಣ, ಪದವಿ ಶಿಕ್ಷಣ, ಬಿ.ಇಡಿ ಸೇರಿಸಿ ನಾಲ್ಕು ವರ್ಷ ಹಾಗೂ ಉನ್ನತ ಶಿಕ್ಷಣ ಯುಜಿಸಿ ಪರ್ಯಾಯವಾಗಿ (ರಾಷ್ಟ್ರೀಯ ಉನ್ನತ ಶಿಕ್ಷಣ ಪರಿಷತ್) ಮೂಲಕ ಮಾನವ ಸಂಪನ್ಮೂಲ ಇಲಾಖೆ ನೇರ ಆಡಳಿತದ ತೆಕ್ಕೆಗೆ ತೆಗೆದುಕೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಖಂಡರಾದ ಮುನಿರಾಜು, ಭಾಸ್ಕರರೆಡ್ಡಿ, ನಾಗರತ್ನಮ್ಮ, ಯಲ್ಲಾಲಿಂಗ, ಪೂಜಾರ ದುರುಗಪ್ಪ, ಸ್ಲಂ ವೆಂಕಟೇಶ, ಗುಜ್ಜಲ ನಾಗರಾಜ, ದೀಪಕ ಸಿಂಗ್, ಇಮಾಮ್ ನಿಯಾಜಿ, ಕಟಗಿ ಜಂಬಯ್ಯ,ನಿಂಬಗಲ್ ರಾಮಕೃಷ್ಣ, ತಾಯಪ್ಪ ನಾಯಕ, ನಾಗರತ್ನಮ್ಮ, ಮಾರೆಣ್ಣ, ಭರತ್ ಕುಮಾರ್,ಎಚ್.ಎಸ್.ವೆಂಕಪ್ಪ,ಬಾನುಬೀ ಹಾಗಾ ಸರಸ್ವತಿ ಇನ್ನಿತರರಿದ್ದರು.