ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದಿಂದ 2 ಲಕ್ಷ ಕ್ಯೂಸೆಕ್‌ಗೂ ಹೆಚ್ಚು ನೀರು ತುಂಗಭದ್ರಾ ನದಿಗೆ ಹರಿ ಬಿಟ್ಟಿರುವ ಪರಿಣಾಮ ಐತಿಹಾಸಿಕ ಹಂಪಿಯ ಸ್ಮಾರಕಗಳು ಮುಳಗಡೆಯಾಗಿವೆ.
ಜಲಾಶಯದಿಂದ ಹೆಚ್ಚುವರಿ ನೀರು ಹೊರ ಬಿಡುತ್ತಿರುವುದರಿಂದ ಭಾನುವಾರ ನದಿ ಅಪಾಯಮಟ್ಟ ಮೀರು ಹರಿಯುತ್ತಿದ್ದು, ಅನೇಕ ಸ್ಮಾರಕಗಳು ಸಂಪೂರ್ಣ ಜಲಾವೃತಗೊಂಡಿವೆ. ವೈದಿಕ ಮಂಟಪ, ಸ್ನಾನಘಟ್ಟ, ರಾಮಲಕ್ಷ್ಮಣ ದೇವಸ್ಥಾನ, ಕೋಟಿ ಲಿಂಗ, ಪುರಂದರ ದಾಸರ ಮಂಟಪ, ಕಡಲೆಕಾಳು ಗಣಪ, ಸಾಸ್ವಿಕಾಳು ಗಣಪ ಸ್ಮಾರಕ ಸೇರಿದಂತೆ ಸುಮಾರು 63ಕ್ಕೂ ಹೆಚ್ಚು ಸ್ಮಾರಕಗಳು ನೀರಿನಲ್ಲಿ ಮುಳುಗಿವೆ. ಹಂಪಿಯ ಸಂಚಾರಿ ಪೊಲೀಸ್ ಠಾಣೆ, ವೃತ್ತ ನಿರೀಕ್ಷಕರ ಕಚೇರಿಗಳಲ್ಲಿ ನೀರು ತುಂಬಿಕೊಂಡಿದ್ದು, ಬಹುತೇಕ ಮುಳಗಡೆಯಾಗಿವೆ. ಪೊಲೀಸ್ ಠಾಣೆಯನ್ನು ತಾತ್ಕಾಲಿಕವಾಗಿ ಜೈನ ಮಂಟಪಕ್ಕೆ ಸ್ಥಳಾಂತರ ಮಾಡಲಾಗಿದೆ.
ಪ್ರವಾಹ ಕಡಿಮೆಯಾಗುವವರೆಗೆ ಹಂಪಿಗೆ ಬರದಂತೆ ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗಿದೆ. ನೀರಿನ ಪ್ರಮಾಣ ಏರಿಕೆಯಿಂದಾಗಿ ವಿಜಯವಿಠಲ ಮಂಟಪಕ್ಕೆ ತೆರಳುವ ರಸ್ತೆ ಬಂದ್ ಆಗಿದೆ. ಹಂಪಿ ಬಳಿಯ ವಿರುಪಾಪುರ ಗಡ್ಡೆ ಸಂಪೂರ್ಣ ಜಲಾವೃತ್ತಗೊಂಡಿದ್ದು, ಅಲ್ಲಿ ಸುಮಾರು 200ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು ಸಿಕ್ಕುಹಾಕಿಕೊಂಡಿದ್ದಾರೆ. ಅವರಲ್ಲಿ 26 ಜನರನ್ನು ರಕ್ಷಣೆ ಮಾಡಲಾಗಿದೆ. ಜಲಾಶಯದ ಹೊರ ಬಿಡುವ ನೀರಿನ ಪ್ರಮಾಣ ಏರಿಕೆಯಾಗುತ್ತಲೇ ಇರುವುದರಿಂದ ಹಂಪಿ ಬಳಿಯ ಸುಮಾರು 1,250 ಹೆಕ್ಟೇರ್‌ನಷ್ಟು ಬಾಳೆ ಹಾಗೂ ಕಬ್ಬು ಬೆಳೆಗಳು ಸಂಪೂರ್ಣ ಜಲಾವೃತ್ತಗೊಂಡಿವೆ.
ಚಕ್ರತೀರ್ಥ ಕೋದಂಡರಾಮ ದೇವಸ್ಥಾನ ಗರ್ಭಗುಡಿಯಲ್ಲಿ ನೀರು, ದೇವಸ್ಥಾನದ ಕೋದಂಡರಾವ, ಸೀತೆ, ಲಕ್ಷ್ತ್ರಣ ದೇವರ ಮೂರ್ತಿ ಕಾಲಿನ ಭಾಗದವರೆಗೆ ನೀರು ನುಗ್ಗಿವೆ. ದೇವರಿಗೆ ಪೂಜೆ ಸಲ್ಲಿಸಿ, ಮುಂಜಾಗ್ರತವಾಗಿ ದೇವಸ್ಥಾನಕ್ಕೆ ಬೀಗವನ್ನು ಹಾಕಲಾಗಿದೆ. ದೇವಸ್ಥಾನ ಆವರಣ ಸಂಪೂರ್ಣ ಜಲಾವೃತಗೊಂಡಿತು. ದೇವಸ್ಥಾನ ಮುಂಭಾಗದ ಶೆಡ್‌ಗಳು ನೀರಿನ ಮುಳಗಡೆಯಾಗಿದ್ದವು. ಇನ್ನು ಯಂತ್ರೋದ್ಧಾರಕ ದೇವಸ್ಥಾನ ಮುಂಭಾಗದ ಕೋಟಿ ಲಿಂಗ ಸ್ಮಾರಕವಾಗಿ ಜಲಾವೃತವಾಗಿವೆ. ಅಲ್ಲದೇ, ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ತೆರಳು ಮಾರ್ಗ ಪ್ರವಾಹದಿಂದ ಸಂಪರ್ಕವನ್ನು ಕಡೆದುಕೊಂಡಿತ್ತು. ದೇವಸ್ಥಾನಕ್ಕೆ ಹೋಗುವ ಭಕ್ತರು ಎದುರು ಬಸವಣ್ಣ ಹಿಂಭಾಗದಿಂದ ತೆರಳಿದರು.