ಹೊಸಪೇಟೆ: ಐತಿಹಾಸಿಕ ಹಂಪಿ ಹೇಮಕೂಟದ ಗಾಯತ್ರಿಪೀಠ ಸಂಸ್ಥಾನ ಮಠದ ವತಿಯಿಂದ ಬಾದಾಮಿ ಶ್ರೀ ಬನ ಶಂಕರಿದೇವಿಗೆ ಪೀತಾಂಬರ ಸೀರೆ ಹೊತ್ತ ಫಲಕ್ಕಿ ಮೆರವಣಿಗೆ ಬಾದಾಮಿ ಕ್ಷೇತ್ರಕ್ಕೆ ಶುಕ್ರವಾರ ಹೆಜ್ಜೆ ಹಾಕಿತು.
ಶ್ರೋ ಬಾದಾಮಿ ಬನಶಂಕರಿದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಹಂಪಿ ಹೇಮಕೂಟ ಗಾಯತ್ರಿ ಪೀಠಾಧ್ಯಕ್ಷ ದಯಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪೀತಾಂಬರ ಸೀರೆ ಅರ್ಪಣೆ ಪಾದಯಾತ್ರೆಯಲ್ಲಿ ಸಹಸ್ರಾರು ಭಕ್ತರು ಹೆಜ್ಜೆ ಹಾಕುವ ಮೂಲಕ ಬಾದಾಮಿ ಕ್ಷೇತ್ರಕ್ಕೆ ತೆರಳಿದರು. ಮೆರವಣಿಗೆಯಲ್ಲಿ ಭಕ್ತರ ಜಯ ಘೋಷ ಹಾಗೂ ಮಂಗಳ ವಾದ್ಯ ಮುಗಿಲು ಮುಟ್ಟಿತ್ತು.
ಇದಕ್ಕೂ ಮುನ್ನ ಪೀಠದಲ್ಲಿ ದೇವಿ ಪ್ರತಿಮೆ ಹಾಗೂ ಸೀರೆ ಪ್ರತಿಷ್ಠಾಪಿಸಿರುವ ಪಲ್ಲಕ್ಕಿಗೆ ವಿಶೇಷ ಪೂಜೆಯನ್ನು ಸಲ್ಲಿಸುವ ಮೂಲಕ ಗಾಯತ್ರಿ ಪೀಠದ ದಯಾನಂದಪುರಿ ಸ್ವಾಮೀಜಿ ಪಾದಯಾತ್ರೆಗೆ ಚಾಲನೆ ನೀಡಿದರು. ಲೋಕ ಕಲ್ಯಾಣಾರ್ಥವಾಗಿ ಹಂಪಿ ಗಾಯತ್ರಿಪೀಠ ಸಂಸ್ಥಾನ ಮಠ ದವತಿ ಯಿಂದ ಬಾದಾಮಿ ಶ್ರೀ ಬನ ಶಂಕರಿದೇವಿಗೆ ಪೀತಾಂಬರ ಸೀರೆ ಅರ್ಪಣೆ ಮಾಡಲಾಗುತ್ತಿದೆ. ಇದು ಎರಡನೇ ವರ್ಷದ ಪಾದಯಾತ್ರೆಯಾಗಿದ್ದು, ದಾರಿಯುದ್ದಕ್ಕೂ ಭಕ್ತರು, ಪಲ್ಲಕ್ಕಿ ದರ್ಶನ ಮಾಡುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.
120 ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಹಿಂದಿನ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಎಂದರು.ಪಾದಯಾತ್ರೆಯ ಮೊದಲನೇ ವರ್ಷದ ಕೈಪಿಡಿಯನ್ನು ಗಣ್ಯರು ಬಿಡುಗಡೆಗೊಳಿಸಿದರು. ದೇವಾಂಗ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ರಮೇಶ, ರಾಜ್ಯ ನೇಕಾರ ಸಮುದಾಯದ ಒಕ್ಕೂಟದ ಅಧ್ಯಕ್ಷ ಎಂ.ಡಿ.ಲಕ್ಷ್ಮೀ ನಾರಾಯಣ, ಅಖೀಲ ಭಾರತ ಸಹಕಾರ ಮಹಾಮಂಡಳಿ ನಿರ್ದೇಶಕ ಕೊಂಕತಿ ಕಾಳಪ್ಪ, ಕರ್ನಾಟಕದ ವಿದ್ಯುತ್ ಚಾಲಿತ ಮಗ್ಗಗಳ ನಿಗಮದ ಮಾಜಿ ಅಧ್ಯಕ್ಷ ಗೋ. ತಿಪ್ಪೇಶ, ಗಾಯತ್ರಿ ಪೀಠದ ಮಹಾಸಂಸ್ಥಾನ ಟ್ರಸ್ಟ್ ನ ಅಧ್ಯಕ್ಷ ಪಿ.ಆರ್. ಗಿರಿಯಪ್ಪ, ಪಾದಯಾತ್ರೆ ಸಮಿತಿ ಅಧ್ಯಕ್ಷ ಪಿ. ರವೀಂದ್ರ ಕಲಬುರ್ಗಿ, ಸಂಚಾಲಕ ಪರಗಿ ನಾಗರಾಜ, ಹೊಸಪೇಟೆ ತಾಲೂಕು ನೇಕಾರ ಸಂಘದ ಅಧ್ಯಕ್ಷ ಬಸವರಾಜ ನಲತ್ವಾಡ ಇನ್ನಿತರರಿದ್ದರು.