Advertisement

ಚಿರತೆ ಭಯಕ್ಕೆ ವಾನರ ಸೇನೆಯ ಸೀಮೋಲ್ಲಂಘನೆ !

12:49 PM Oct 21, 2019 | Naveen |

„ಪಿ.ಸತ್ಯನಾರಾಯಣ
ಹೊಸಪೇಟೆ:
ವಿಶ್ವಪ್ರಸಿದ್ಧ ಹಂಪಿಯಲ್ಲಿ ಚಿರತೆ ಸಂತತಿ ಹೆಚ್ಚಾಗಿರುವ ಪರಿಣಾಮ ಕೋತಿಗಳು ತಮ್ಮ ಜೀವ ಉಳಿಸಿಕೊಳ್ಳಲು ಪ್ರತಿನಿತ್ಯ ತುಂಗಭದ್ರಾ ನದಿ ದಾಟುವ ಸಾಹಸ ಮಾಡುತ್ತಿವೆ. ತಮ್ಮ ಚಿಕ್ಕ, ಚಿಕ್ಕ ಮರಿಯಗಳನ್ನು ಬೆನ್ನೇರಿಸಿಕೊಂಡು ನದಿ ದಾಟುವ ಸಾಹಸಕ್ಕೆ ತಾಯಿ ಕೋತಿಗಳು ಮುಂದಾಗಿವೆ.

Advertisement

ಭಯದಿಂದ ಹಿಂದೆ ಮುಂದೆ ನೋಡುತ್ತಲೇ ನದಿಯಲ್ಲಿ ಈಜುತ್ತಾ ದಡ ಸೇರುತ್ತಿರುವ ದೃಶ್ಯ ಮನಕಲುಕುವಂತಿದೆ. ವಿಶ್ವವಿಖ್ಯಾತ ಹಂಪಿಯ ಚಕ್ರತೀರ್ಥ ಕೋದಂಡ ರಾಮಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಹರಿಯುವ ನದಿಯಲ್ಲಿ ಪ್ರತಿದಿನ ಸಂಜೆ ಮತ್ತು ಬೆಳಗಿನ ಜಾವ ಚಿರತೆ ಭಯಕ್ಕೆ ಈ ವಾನರ ಸೈನ್ಯ ಹರಸಾಹಸ ಪಟ್ಟು ನದಿ ದಾಟಲು ಮುಂದಾಗುತ್ತಿವೆ.

ದಿನವಿಡೀ ರಾಮಸ್ವಾಮಿ ದೇವಸ್ಥಾನಕ್ಕೆ ಬರುವ ಭಕ್ತರು ನೀಡುವ ಹಣ್ಣು-ಹಂಪಲು, ಪ್ರಸಾದವನ್ನು ತಿಂದು ಹೊಟ್ಟೆ ತುಂಬಿಸಿಕೊಂಡು ಸುಖದಿಂದ ಇರುವ ಈ ಕೋತಿಗಳಿಗೆ ಸಂಜೆಯಾಗುತ್ತಿದಂತೇ ಸಾಕು ಪ್ರಾಣ ಭಯ ಕಾಡುತ್ತೆ. ಪ್ರತಿ ಸಂಜೆ ಈ ರೀತಿ ನದಿ ದಾಟುವುದು ಸ್ವಲ್ಪ ತಡವಾದ್ರು ಸಾಕು ತಮ್ಮ ಜೀವ ಎಲ್ಲಿ ಚಿರತೆಗೆ ಬಲಿಯಾಗಿಬಿಡುತ್ತೋ ಎಂಬ ಭಯದಿಂದ ಕೋತಿಗಳು ತಮ್ಮ ಅವಾಸ ಸ್ಥಾನವನ್ನು ಬದಲಿ ಮಾಡಿಕೊಳ್ಳುತ್ತಿವೆ. ಇದುವರೆಗೆ ಕೋದಂಡರಾಮಸ್ವಾಮಿ ದೇವಸ್ಥಾನ ಮತ್ತು ಹಿಂದಿನ ಕಲ್ಲು ಬೆಟ್ಟದ ಮೇಲೆ ಮಲಗಿ ಜೀವನ ಸಾಗಿಸುತ್ತಿದ್ದ ವಾನರ ಸೈನ್ಯ ಇದೀಗ ದೇವಸ್ಥಾನದ ಮುಂಭಾಗದಲ್ಲಿರುವ ಋಷಿ ಮುಖ ಪರ್ವತಕ್ಕೆ ತಮ್ಮ ರಾತ್ರಿ ವಾಸ್ತವ್ಯವನ್ನ ಸ್ಥಳಾಂತರಿಸಿವೆ. ಹಾಗಾಗಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಈ ರೀತಿಯಾಗಿ ಹರಸಾಹಸ ಪಟ್ಟು ನದಿ ದಾಟುವ ಮೂಲಕ ತಮ್ಮ ಪ್ರಾಣವನ್ನು ಉಳಿಸಿಕೊಳ್ಳುತ್ತೆ ಈ ವಾನರಸೈನ್ಯ. ಇನ್ನು ಇತ್ತೀಚೆಗೆ ಹಂಪಿ ಸುತ್ತಮುತ್ತ ಚಿರತೆಗಳ ಸಂತತಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ, ಅದರಲ್ಲೂ ಸಂಜೆ ಏಳು ಗಂಟೆ ಆದರೆ ಸಾಕು ಹಂಪಿ ಪ್ರವಾಸಿ ಪೋಲಿಸ್‌ ಠಾಣೆ ಅಕ್ಕಪಕ್ಕದಲ್ಲೇ ಸಂಚರಿಸುತ್ತವೆ. ಹೀಗಿದ್ದರೂ ಮನುಷ್ಯರಿಗೆ ಮಾತ್ರ ಯಾವುದೇ ಪ್ರಾಣಹಾನಿ ಮಾಡಿಲ್ಲ, ಇದಕ್ಕೆ ಕಾರಣ ಇಲ್ಲಿರುವ ಕೋತಿಗಳ ಹಿಂಡು. ಚಿರತೆಗಳಿಗೆ ಹಸಿವಾದಗಲೆಲ್ಲ ಕಲ್ಲುಬೆಟ್ಟಗಳ ಮಧ್ಯದಲ್ಲಿ ವಾಸವಾಗಿರುವ ಕೋತಿಗಳನ್ನ ಬೇಟೆಯಾಡಿ ತಿಂದು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತವೆ.

ಚಿರತೆಗಳ ಬೇಟೆಯಿಂದ ತಪ್ಪಿಸಿಕೊಳ್ಳುವ ಸಂಬಂಧ ಸ್ಥಳ ಬದಲಿಸುವ ಕೋತಿಗಳ ಹಿಂಡು ಒಂದು ದಿನ ಕೋದಂಡ ರಾಮಸ್ವಾಮಿ ದೇವಸ್ಥಾನದ ಹಿಂಭಾಗದ ಕಲ್ಲುಗುಡ್ಡದಲ್ಲಿ ವಾಸಮಾಡುತ್ತವೆ. ಮತ್ತೂಂದು ದಿನ ಮುಂಭಾಗದ ಋಷಿ ಮುಖ ಪರ್ವತವನ್ನ ಏರಿ ರಾತ್ರಿ ಪೂರ್ತಿ ವಾಸಮಾಡಿ ಮತ್ತೆ ದೇವಸ್ಥಾನದ ಮುಂದೆ ಬಂದು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತವೆ.

ಈ ಕೋತಿಗಳು ಪಡುವ ಕಷ್ಟ ಮನುಷ್ಯನಿಗೆ ಬಂದಿದ್ದರೆ ಇದುವರೆಗೆ ಎಷ್ಟೆಲ್ಲ ರಾದ್ಧಾಂತಗಳು ಆಗಿಬಿಡುತ್ತಿದ್ದವೋ ಏನೊ? ಚಿರತೆ ಇಲ್ಲಿಯವರೆಗೆ ಮನುಷ್ಯರಿಗೇನು ಮಾಡದೇ ಹೋದರು ಕಾಡುಪ್ರಾಣಿಗಳು ಅದರಲ್ಲೂ ಇಷ್ಟವಾದ ಕೋತಿಗಳನ್ನು ಆಹಾರವನ್ನಾಗಿ ಮಾಡಿಕೊಂಡಿದೆ. ಚಿರತೆಯಿಂದ ಜೀವ ಉಳಿಸಿಕೊಳ್ಳಲು ವಾನರ ಸೇನೆ ಪಡುತ್ತಿರುವ ಯಾತನೆ ನೋಡಿ ಸ್ಥಳೀಯರು ಮರಗುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next