Advertisement

ಕೇಂದ್ರದಿಂದ ಅಂಗನವಾಡಿ ಮುಚ್ಚುವ ಹುನ್ನಾರ: ವರಲಕ್ಷ್ಮೀ

01:10 PM Jun 30, 2019 | Team Udayavani |

ಹೊಸಪೇಟೆ: ಮಾನವ ಸಂಪನ್ಮೂಲ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತಿರುವ ರಾಜ್ಯದ ಅಂಗನವಾಡಿ ಕೇಂದ್ರಗಳನ್ನು ಮುಚ್ಚಬೇಕು ಎಂಬ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ-ಯುಕೆಜಿ ಆರಂಭಿಸಿದೆ ಎಂದು ಅಂಗನವಾಡಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಎಸ್‌.ವರಲಕ್ಷ್ಮೀ ಆರೋಪಿಸಿದರು.

Advertisement

ತಾಲೂಕಿನ ಹಂಪಿಯ ಶಿವರಾಮ ಅವಧೂತರ ಮಠದಲ್ಲಿ ಶನಿವಾರದಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ರಾಜ್ಯಮಟ್ಟದ ಕೌನ್ಸಿಲ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಲವು ನೀತಿಗಳನ್ನು ರೂಪಿಸಿ ಅಂಗನವಾಡಿ ನೌಕರರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸುವ ಮೂಲಕ ಅಂಗನವಾಡಿ ಕೇಂದ್ರಗಳನ್ನು ಕ್ರಮೇಣ ಮುಚ್ಚಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ದೂರಿದರು.

ನೀತಿ ಆಯೋಗವು ಒಳ್ಳೆಯ ಅಂಶಗಳನ್ನು ಅಳವಡಿಸಿಕೊಳ್ಳುತ್ತಿಲ್ಲ. ಅದರಲ್ಲಿ ಕಾರ್ಮಿಕ ಕಾನೂನನ್ನು ಬದಲಾವಣೆ ಮಾಡಲಾಗುತ್ತಿದೆ. ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದೆ. 3 ರಿಂದ 6 ವರ್ಷದ ಮಕ್ಕಳನ್ನು ಪ್ರಾಥಮಿಕ ಶಾಲೆ ವಿಲೀನ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ. ಇದು ಅಂಗನವಾಡಿ ಮುಚ್ಚುವ ಹುನ್ನಾರ ಎಂದು ಆರೋಪಿಸಿದರು. ಕೇಂದ್ರ ಸರಕಾರ ಶೇ.75 ರಷ್ಟು ಅಂಗನವಾಡಿ ಕೇಂದ್ರಗಳಿಗೆ ಅನುದಾನ ನೀಡುವುದನ್ನು ನಿಲ್ಲಿಸಿದೆ. ಹಾಗಾಗಿ ಕೇಂದ್ರಗಳ ಸಿಬ್ಬಂದಿಗೆ ವೇತನ ನೀಡುವುದರ ಜತೆಗೆ ಇತರೆ ಸಮಸ್ಯೆಗಳಾದವು. ಅಂಗನವಾಡಿಯ 27 ಲಕ್ಷ ಸಿಬ್ಬಂದಿ ನೌಕರಿ ಅಭದ್ರತೆಯಿಂದ ಕೂಡಿದೆ. ಕೇಂದ್ರ ಸರಕಾರ ಅಂಗನವಾಡಿಗಳನ್ನು ಮುಚ್ಚುವುದಕ್ಕೆ ಕೈ ಹಾಕಿದೆ ಎಂದು ದೂರಿದರು.

ಬಜೆಟ್‌ನಲ್ಲಿ ಅಂಗನವಾಡಿ ನೌಕರರಿಗೆ 1,500 ರೂ. ನೀಡಲಾಗುವುದು ಎಂದು ಕೇಂದ್ರ ಸರಕಾರ ಭರವಸೆ ನೀಡಿತ್ತು. ಆದರೆ, ಅದು ಕಡತದಲ್ಲಿ ಉಳಿದುಕೊಂಡಿದೆ. ಚುನಾವಣೆ ಪೂರ್ವದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಅಂಗನವಾಡಿಯಲ್ಲಿ ಗುತ್ತಿಗೆ ಆಧಾರದ ನೌಕರರನ್ನು ಕಾಯಂ ಮಾಡಲಾಗುವುದು. ಜತೆಗೆ 12 ಸಾವಿರ ರೂ.ವೇತನ ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರು. ಅವರು ಅನಿರೀಕ್ಷಿತವಾಗಿ ಮುಖ್ಯಮಂತ್ರಿಯಾಗಿದ್ದಾರೆ. ಹಾಗಾಗಿ ಅವರಿಗೆ ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಅಪೌಷ್ಟಿಕತೆ ಹೋಗಲಾಡಿಸಲು ಅಂಗನವಾಡಿ ಆರಂಭಿಸಲಾಯಿತು. ಈಗ ಆ ಕೇಂದ್ರಗಳನ್ನೇ ಮುಚ್ಚಲು ಹೊರಟಿರುವುದು ಸರಿಯಲ್ಲ. ಈ ಕುರಿತು ಕೇಂದ್ರ ಸರಕಾರವನ್ನು ಪ್ರಶ್ನಿಸಿದರೆ ಉತ್ತರ ನೀಡುತ್ತಿಲ್ಲ. ಅಲ್ಲದೇ, ಕೇಂದ್ರ ಸರಕಾರ ನಡೆಯನ್ನು ಸಿಐಟಿಯು ಮಾತ್ರ ಪ್ರಶ್ನೆ ಮಾಡುತ್ತಿದೆ. ಉಳಿದ ಸಂಘಟನೆಗಳು ಪ್ರಶ್ನೆ ಮಾಡುತ್ತಿಲ್ಲ. ಇದರಲ್ಲಿ ದೊಡ್ಡ ಹುನ್ನಾರ ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿದರು. ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಚ್.ಎಸ್‌.ಸುನಂದಾ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

ಇದಕ್ಕೂ ಮುನ್ನ ಸಂಘದ 25 ವರ್ಷದ ಪೂರೈಸಿದ ಹಿನ್ನೆಲೆಯಲ್ಲಿ ನೂತನ ಲಾಂಛನವನ್ನು ಗಣ್ಯರು ಬಿಡುಗಡೆಗೊಳಿಸಿದರು. ರಾಜ್ಯ ಘಟಕದ ಕಾರ್ಯಾಧ್ಯಕ್ಷೆ ಶಾಂತಾಗಂಟೆ, ಕಾರ್ಯದರ್ಶಿ ಯಮುನಾ ಗಾಂವ್ಕರ್‌, ಖಜಾಂಚಿ ಕಮಲಾಕ್ಷಿ, ಜಿಲ್ಲಾ ಅಧ್ಯಕ್ಷೆ ಉಮಾದೇವಿ, ಗೌರವ ಅಧ್ಯಕ್ಷೆ ನಾಗರತ್ನಮ್ಮ, ಸಿಐಟಿಯುನ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಭಾಸ್ಕರ ರೆಡ್ಡಿ, ಮುಖಂಡರಾದ ಕೆ.ಎಂ.ಸಂತೋಷ, ಬಂಡಿ ಬಸವರಾಜ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next