ಹೊಸನಗರ: ಹುಲಿಕಲ್ ಘಾಟ್ ರಸ್ತೆಯಲ್ಲಿ ಕಾಡುಕೋಣ ಇದೆ. ಅದೇನೂ ಮಾಡಲ್ಲ. ಸ್ವಲ್ಪ ಜಾಗ್ರತೆ ಎನ್ನುತ್ತಾ ಬೇರೆ ವಾಹನ ಸವಾರರಿಗೆ ತಿಳಿ ಹೇಳಿ ಹೋಗುವುದು ಈ ಪ್ರದೇಶದಲ್ಲಿ ಮಾಮಾಲು ಎನಿಸಿ ಬಿಟ್ಟಿದೆ.
Advertisement
ಹೌದು ರಾಜ್ಯದ ಪ್ರಮುಖ ಘಾಟ್ ಸಂಪರ್ಕಗಳಲ್ಲಿ ಒಂದಾದ ಹುಲಿಕಲ್ ಘಾಟ್‌ನಲ್ಲಿ ಕಳೆದ ಮೂರು ತಿಂಗಳಿಂದ ಕಾಡುಕೋಣ ರಸ್ತೆ ಅಕ್ಕಪಕ್ಕದಲ್ಲಿ ಆಗಿಂದಾಗ್ಗೆ ಪ್ರತ್ಯಕ್ಷವಾಗುತ್ತಿದೆ. ಕೆಲವೊಮ್ಮೆ ರಸ್ತೆ ಮೇಲೆ, ಇನ್ನೊಮ್ಮೆ ರಸ್ತೆ ಅಕ್ಕಪಕ್ಕದಲ್ಲಿ ಹುಲ್ಲು ಮೇಯುತ್ತಿರುವ ಕಾಡುಕೋಣ ಬಹಳಷ್ಟು ಜನರಿಗೆ ಕಾಣಿಸಿಕೊಂಡಿದೆ. ಹೀಗಾಗಿ ಪ್ರತಿನಿತ್ಯ ಆ ಮಾರ್ಗದಲ್ಲಿ ಸಂಚರಿಸುವವರು ಸ್ವಲ್ಪ ಎಚ್ಚರಿಕೆ ವಹಿಸುತ್ತಾರೆ. ಅಪರಿಚಿತರು ಸಿಕ್ಕರೆ ಅವರಿಗೂ ಜಾಗ್ರತೆ ಹೇಳುತ್ತಾರೆ.
ಹುಲಿಕಲ್ ಘಾಟಿ ರಸ್ತೆ ಅಕ್ಕಪಕ್ಕದಲ್ಲಿ ಬೀಡು ಬಿಟ್ಟಿರುವ ಕಾಡುಕೋಣ ದಿನವೂ ಘಾಟಿ ರಸ್ತೆಗೆ ಲಗ್ಗೆ ಇಡುತ್ತಿದೆ. ಸಂಜೆ ವೇಳೆಗೆ ಕಾಡುಕೋಣ ಸಂಚರಿಸುವುದು ಸಾಮಾನ್ಯವಾದರೂ ಇಲ್ಲಿ ಹಗಲು ವೇಳೆಯೇ ಕೋಣ ತಿರುಗಾಡುತ್ತಿರುತ್ತದೆ. ರಸ್ತೆ ಮಾರ್ಗಕ್ಕೆ ಧುತ್ತೆಂದು ಧುಮುಕುವ ಕೋಣ ಅಲ್ಲೇ ಲಂಗು ಲಗಾಮು ಇಲ್ಲದೆ ಠಿಕಾಣಿ ಹೂಡುತ್ತದೆ. ಒಮ್ಮೊಮ್ಮೆ ಮಧ್ಯರಾತ್ರಿ, ಬೆಳಗ್ಗಿನ ಜಾವ ರಸ್ತೆಯಲ್ಲಿರುತ್ತದೆ. ಆದರೆ ಜನರೇ ಬರಲಿ, ವಾಹನಗಳೇ ಬರಲಿ ತಾನು ಮಾತ್ರ ಸ್ವಚ್ಚಂದವಾಗಿ ಹುಲ್ಲು ಮೇಯುತ್ತಲೇ ಇರುತ್ತದೆ. ಈತನಕ ಯಾರ ತಂಟೆಗೂ ಬಂದ ಮಾಹಿತಿ ಇಲ್ಲ.
Related Articles
Advertisement
ಮೊಬೈಲ್ ನಲ್ಲಿ ದೃಶ್ಯ ಸೆರೆ: ಅಂದು ಮದ್ಯಾಹ್ನ ವೇಳೆ. ಉಡುಪಿಯಿಂದ ಬರುತ್ತಿದ್ದೆ. ಘಾಟಿ ರಸ್ತೆ ತಿರುವಿನಲ್ಲಿ ಕಾಡುಕೊಣವೊಂದು ನಿಂತಿದೆ. ಅದರಷ್ಟಕ್ಕೆ ಅದು ಮೇಯುತ್ತಿತ್ತು. ಸ್ವಲ್ಪ ಹತ್ತಿರ ಹತ್ತಿರ ಹೋದರೂ ಅದು ಸುಮ್ಮನೇ ಮೇಯುತ್ತಿತ್ತು. ಹಾಗಾಗಿ ಕಾಡುಕೋಣ ಮೇಯುತ್ತಿರುವ ದೃಶ್ಯವನ್ನು ಹತ್ತಿರದಿಂದ ಮೊಬೈಲ್ ನಲ್ಲಿ 2 ನಿಮಿಷ ರೆಕಾರ್ಡ್ ಮಾಡಿದೆವು. ಆದರೂ ಅದು ಅಲ್ಲೇ ಇತ್ತು. ಆಮೇಲೆ ನಾವು ನಮ್ಮ ದಾರಿ ಹಿಡಿದೆವು ಎಂದು ನಗರ ಅಜೇಯ್ ಖುಷಿಯಿಂದ ಹೇಳುತ್ತಾರೆ.