ಹೊಸನಗರ: ತಾಲೂಕಿನ ಇತಿಹಾಸ ಪ್ರಸಿದ್ಧ ಬಿದನೂರು ಕೋಟೆಯ ಸುತ್ತ ನಡೆಯುತ್ತಿರುವ ಬೇಲಿ ಅಳವಡಿಕೆ ಕಾಮಗಾರಿ ಸಂಶಯಕ್ಕೀಡಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಬೇಲಿ ಸಾಮಗ್ರಿಗಳು ನಾಪತ್ತೆಯಾದ ಪ್ರಕರಣ ಬೆಳಕಿಗೆ ಬಂದಿದೆ.
ಕೋಟೆ ಸುತ್ತ ಅಳವಡಿಸಲಾಗಿದ್ದ ಹಳೆ ಬೇಲಿಯನ್ನು ಈ ಹಿಂದೆಯೇ ತೆರವುಗೊಳಿಸಲಾಗಿದ್ದು, ಅದರ ಸಾಮಗ್ರಿಗಳು ನಾಪತ್ತೆಯಾಗಿವೆ. ಈ ಬಗ್ಗೆ ದೂರು ದಾಖಲಿಸುವಂತೆ ಪುರಾತತ್ವ ಅಧೀಕ್ಷಕರ ಕಚೇರಿ ಶಿವಮೊಗ್ಗ ಪುರಾತತ್ವ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಏನಿದು ಪ್ರಕರಣ: ಮೂರು ವರ್ಷದ ಹಿಂದೆ ಬಿದನೂರು ಕೋಟೆಯ ಸಂರಕ್ಷಣೆಗಾಗಿ ಸುತ್ತಲೂ ಕಬ್ಬಿಣ ಸರಳು, ಪೈಪ್ ಬಳಸಿ ಬೇಲಿ ಕಾಮಗಾರಿಯನ್ನು ಪುರಾತತ್ವ ಇಲಾಖೆ ನಿರ್ವಹಿಸಿತ್ತು. ಆದರೆ ಆ ಬೇಲಿ ಸಮರ್ಪಕವಾಗದ ಕಾರಣ 2018ರಲ್ಲಿ ತೆರವುಗೊಳಿಸಿ ಹೊಸ ಕಾಮಗಾರಿಯನ್ನು ಅನುಷ್ಠಾನಗೊಳಿಸಿತ್ತು.
ಸುಮಾರು 26 ಲಕ್ಷ ರೂ. ವೆಚ್ಚದಲ್ಲಿ ಹಳೇ ಬೇಲಿಯನ್ನು ತೆರವುಗೊಳಿಸಿದ್ದು, ಲಕ್ಷಾಂತರ ರೂ. ಬೆಲೆಬಾಳು ಕಬ್ಬಿಣದ ಪೈಪ್ ಮತ್ತು ಪಟ್ಟಿಗಳು ಕಣ್ಮರೆಯಾಗಿದ್ದು ವಿವಾದ ಸೃಷ್ಟಿಸಿದೆ. ಬೆಳಕಿಗೆ ಬಂದಿದ್ದು ಹೇಗೆ: ನಗರದ ಸಾಮಾಜಿಕ ಕಾರ್ಯಕರ್ತ ಆರ್ಮಿನೋ ಡಿಸೋಜ ಹಳೆ ಬೇಲಿ ತೆರವುಗೊಳಿಸಿದ ಕಾಮಗಾರಿ ಸಂಬಂಧ ಅದಕ್ಕೆ ಬಳಸಲಾಗಿದ್ದ ಸಾಮಗ್ರಿಗಳು ಎಲ್ಲಿ ಹೋದವು ಎಂದು ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ನಾಪತ್ತೆ ಪ್ರಕರಣ ಬೆಳಕಿಗೆ ಬಂದಿದೆ. ಹಳೇ ಸಾಮಗ್ರಿಗಳನ್ನು ಟೆಂಡರ್ ಕರೆಯದೆ ಮಾರಾಟ ಮಾಡುವಂತಿಲ್ಲ. ಆದರೆ ಇಲ್ಲಿ ಹಾಗೇ ಮಾರಾಟ ಮಾಡಲಾಗಿದೆ. ಇಲ್ಲಿ ಹಣದ ದುರುಪಯೋಗವಾಗಿರುವುದು ಕಂಡು ಬರುತ್ತದೆ ಎಂದು ಆರೋಪಿಸಿದ್ದರು.
ದೂರು ದಾಖಲಿಗೆ ಸೂಚನೆ: ಮಾಹಿತಿ ಹಕ್ಕಿನಡಿ ಬಂದ ಅರ್ಜಿ ಆಧರಿಸಿ, ಬೆಂಗಳೂರು ಪುರಾತತ್ವ ಅಧೀಕ್ಷಕ ಕಾರ್ಯಾಲಯ ಈ ಸಂಬಂಧ ದೂರು ದಾಖಲಿಸಿ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ಕೇಂದ್ರ ಪುರಾತತ್ವ ಅಧಿ ಕಾರಿಗೆ ಸೂಚಿಸಿದೆ. ಫೆ.20ರಂದೇ ಸೂಚಿಸಿದ್ದರೂ ಕೂಡ ಈವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಆರ್ಮಿನೋ ಆರೋಪಿಸಿದ್ದಾರೆ.
ಹೊಸ ಕಾಮಗಾರಿ: ಹಳೇ ಬೇಲಿ ತೆರವುಗೊಳಿಸಿದ ನಂತರ ಇದೀಗ ಸುಮಾರು 1 ಕೋಟಿ 67 ಲಕ್ಷ ರೂ. ವೆಚ್ಚದಲ್ಲಿ ಬಿದನೂರು ಕೋಟೆ ಮತ್ತು ದೇವಗಂಗೆ ಕೊಳದ ಸುತ್ತಲೂ ಸುಸಜ್ಜಿತ ಬೇಲಿ ನಿರ್ಮಾಣ ಕಾರ್ಯಕ್ಕೆ ಇಲಾಖೆ ಮುಂದಾಗಿದೆ. ಆದರೆ ಹಳೇ ಬೇಲಿಯ ಸಾಮಗ್ರಿಗಳು ಎಲ್ಲಿ ಹೋದವು ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಬಿದನೂರು ಕೋಟೆಗೆ ಅಳವಡಿಸಿದ್ದ ಹಳೇ ಬೇಲಿಯ ಸಾಮಗ್ರಿಗಳು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸುವಂತೆ ಪುರಾತತ್ವ ಅಧೀಕ್ಷಕರು ಸೂಚಿಸಿದ್ದಾರೆ. ಕೂಡಲೇ ದೂರು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು.
ಗೌತಮ್,
ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿ, ಶಿವಮೊಗ್ಗ
ಹಳೇ ಬೇಲಿ ಸಾಮಗ್ರಿಗಳು ಮಾರಾಟ ಮಾಡಿದ ಬಗ್ಗೆ ಕಡತದಲ್ಲಿ ಇಲ್ಲ ಇಲಾಖೆ ಮಾಹಿತಿ ನೀಡುತ್ತದೆ. ಅಂದ ಮೇಲೆ ಆ ಸಾಮಗ್ರಿಗಳು ಎಲ್ಲಿ ಹೋದವು. ಈ ಬಗ್ಗೆ ದೂರು ದಾಖಲಿಸುತ್ತೇವೆ ಎಂದ ಅಧಿಕಾರಿಗಳು ಈವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ತನಿಖೆ ನಡೆಯಬೇಕು.
ಆರ್ಮಿನೋ ಡಿಸೋಜ,
ನಗರ ನಿವಾಸಿ