Advertisement

ಸಮಾಧಿ ಕಲ್ಲಿನ ಕೆಳಭಾಗದಲ್ಲಿ ಲಿಪಿ ಪತ್ತೆ!

01:23 PM Feb 13, 2020 | Naveen |

ಹೊಸನಗರ: ತಾಲೂಕಿನ ಐತಿಹಾಸಿಕ ತಾಣ ಬಿದನೂರು ಶ್ರೀಧರಪುರದಲ್ಲಿರುವ ಸಮಾಧಿ ಸ್ಥಳದಲ್ಲಿರುವ ಸಮಾಧಿಗಳ ಇತಿಹಾಸಕ್ಕೆ ರೋಚಕ ಟ್ವಿಸ್ಟ್‌ ಸಿಕ್ಕಿದೆ. ಸಮಾಧಿ ಕಲ್ಲಿನ ಕೆಳಭಾಗದಲ್ಲಿ ಎರಡು ಸಾಲಿನ ಪಠ್ಯ ಪತ್ತೆಯಾಗಿದ್ದು ಅದರ ಪ್ರಕಾರ ಅಲ್ಲಿರುವುದು ಕೆಳದಿ ಅರಸರ ಸಮಾಧಿಗಳೆಂದು ಸೂಚಿಸುವುದಿಲ್ಲ ಎಂಬ ಮಾಹಿತಿ ಹೊರಬಿದ್ದಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

Advertisement

ಏನಿದು ಪಠ್ಯ: ಶ್ರೀಧರಪುರದ ಕೊಪ್ಪಲು ಮಠದಲ್ಲಿರುವ ಅರಸರ ಸಮಾ ಧಿಗಳು ಎಂದೇ ಪ್ರತೀತಿ ಹೊಂದಿರುವ ಸಮಾಧಿ ಸ್ಥಳದ ಸಮಾಧಿಯೊಂದರ ಕಲ್ಲಿನ ಕೆಳಭಾಗದಲ್ಲಿ ಎರಡು ಸಾಲಿನ ಪಠ್ಯ ಲಭ್ಯವಾಗಿದೆ. ಮೈಸೂರಿನ ಶಾಸನ ತಜ್ಞ ಡಾ| ಅನಿಲ್‌ ಕುಮಾರ್‌ ಆರ್‌.ವಿ. ಪಠ್ಯವನ್ನು ತಾತ್ಕಾಲಿಕ ಸಂಶೋಧನೆಗೆ ಒಳಪಡಿಸಿದ್ದು ಅರ್ಥ ಹುಡುಕಿದಾಗ ಸಮಾಧಿಯ ಈವರೆಗಿನ ಪ್ರತೀತಿಯನ್ನು ಅಳಿಸಿ ಹಾಕಿದೆ.

ಎರಡು ಸಾಲಿನ ಪಠ್ಯದಲ್ಲಿ 1: ಉಪ್ಪಾರ ಚ್ಕಿಂಣನ ಮಗ(ಳು) (ಅನು)ಮಕ, 2ರಲ್ಲಿ ಉ(ಸೂಹು) ಚಂಣನ ಮಗ ಬಿ(ಲ್ಲಂ)||(ಸ)ಂ(ನ್ದಿ)ದ ಎಂಬುದಾಗಿ ಲಿಪಿಯನ್ನು ಅರ್ಥೈಸಲಾಗಿದ್ದು, ಇದರಿಂದ ಇದು ಕೆಳದಿ ಅರಸರ ಸಮಾಧಿಗಳು ಎನ್ನಲು ಯಾವುದೇ ಸಾಕ್ಷಿಗಳಿಲ್ಲ ಎಂಬ ಅಂದಾಜಿಗೆ ಬರಲಾಗಿದೆ. ಆದರೆ ಈ ಸಮಾಧಿಗಳು ಕೆಳದಿ ಅರಸರ ಕಾಲದ್ದೇ ಆಗಿದ್ದು ದಂಡನಾಯಕರ, ಸೇನಾಧಿ ಪತಿಗಳ ಸಮಾಧಿಗಳು ಕೂಡ ಆಗಿರಬಹುದು ಎಂದು ಶಾಸನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಇದು ತಾತ್ಕಾಲಿಕ ಪಠ್ಯ ಅಧ್ಯಯನವಾಗಿದ್ದು ಲಿಪಿಯ ಮತ್ತಷ್ಟು ಸಂಶೋಧನೆಯಿಂದ ನಿಖರ ಮಾಹಿತಿ ಬರಬೇಕಿದೆ ಎಂದು ಶಾಸನ ತಜ್ಞ ಡಾ| ಅನಿಲ್‌ ಕುಮಾರ್‌ ಹೇಳಿದ್ದಾರೆ.

ಪತ್ತೆಯಾಗಿದ್ದು ಹೇಗೆ: ಕಳೆದ ಜುಲೈ ತಿಂಗಳಿನಲ್ಲಿ ನಿಧಿ ಚೋರರು ನಿಧಿಯಾಸೆಗಾಗಿ ಸಮಾಧಿಯ ಕಲ್ಲನ್ನು ಕಿತ್ತು ಹಾಕಿ ಸಮಾಧಿಯನ್ನು ಧ್ವಂಸಗೊಳಿಸಿದ್ದರು. ಈ ಬಗ್ಗೆ ನಗರ ಠಾಣೆಯಲ್ಲಿ ಪುರಾತತ್ವ ಅ ಧಿಕಾರಿ ಆರ್‌. ಶೇಜೇಶ್ವರ್‌ ದೂರು ಕೂಡ ದಾಖಲಿಸಿದ್ದರು. ಆದರೆ ಸಮಾಧಿ ಕಲ್ಲಿನ ಮರುಸ್ಥಾಪನೆ ವೇಳೆ ಕಲ್ಲಿನ ಕೆಳಭಾಗದಲ್ಲಿ ಎರಡು ಸಾಲಿನ ಪಠ್ಯ ಇರುವುದು ಕಂಡು ಬಂದಿದೆ. ಆದರೆ ಲಿಪಿ ಕ್ಲಿಷ್ಟವಾಗಿದ್ದು ಅಧ್ಯಯನ ಸಾಧ್ಯವಾಗದೆ ಪುರಾತತ್ವ ಇಲಾಖೆಯ ತಲೆನೋವಿಗೂ ಕಾರಣವಾಗಿತ್ತು. ಹೆಚ್ಚಿನ ಅಧ್ಯಯನ ಮಾಡುವ ದೃಷ್ಟಿಯಿಂದ ಮೈಸೂರು ಪುರಾತತ್ವ ಇಲಾಖೆಯ ಶಾಸನ ತಜ್ಞ ಡಾ| ಅನಿಲಕುಮಾರ್‌ ಅವರನ್ನು ಕರೆಸಿ ಮಂಗಳವಾರ ಅಧ್ಯಯನ ನಡೆಸಲಾಗಿತ್ತು. ಈ ವೇಳೆ ಈ ಮಾಹಿತಿ ಹೊರಬಂದಿದೆ.

ಗೊಂದಲಕ್ಕೆ ಕಾರಣ: 90ರ ದಶಕದಲ್ಲಿ ಇತಿಹಾಸ ಸಂಶೋಧಕ ದಿ. ಶಂಕರನಾರಾಯಣ ರಾವ್‌, ಸಮಾಧಿ ಗಳನ್ನು ಬೆಳಕಿಗೆ ತಂದಿದ್ದರು. ಅಲ್ಲದೆ ಸ್ಥಳೀಯ ಸಂಶೋಧನೆ, ಕೆಳದಿ ದಾಖಲೆ ಮತ್ತು ಪ್ರಾಚೀನ ಗ್ರಂಥಗಳಲ್ಲಿರುವ ಉಲ್ಲೇಖದಂತೆ ಇದು ಬಿದನೂರಿನಿಂದ ಆಳಿದ ಕೆಳದಿ ಅರಸರ ಸಮಾಧಿಗಳು ಎಂದು ಪ್ರಚಲಿತಕ್ಕೆ ಬಂದಿತ್ತು ಇತಿಹಾಸ ತಜ್ಞರು ಅಭಿಪ್ರಾಯಿಸಿದ್ದಾರೆ. ಆದರೀಗ ಪುರಾತತ್ವ ಇಲಾಖೆ ನಡೆಸಿದ ತಾತ್ಕಾಲಿಕ ಪಠ್ಯ ಅಧ್ಯಯನದಲ್ಲಿ ಅರಸರ ಸಮಾಧಿ  ಎನ್ನಲು ಸಾಧ್ಯವಾಗುತ್ತಿಲ್ಲ ಎಂಬ ಮಾಹಿತಿ, ಕುತೂಹಲ ಒಂದಷ್ಟು ಗೊಂದಲ ಮಾತ್ರವಲ್ಲ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Advertisement

ಮುಂದೇನು: 3 ದಶಕಗಳ ಕಾಲ ಶಿಸ್ತಿನ ಶಿವಪ್ಪನಾಯಕ ಸೇರಿದಂತೆ 10 ಅರಸರ ಸಮಾಧಿಗಳ ಸ್ಥಳ ಎಂದು ಮನ್ನಣೆ ಪಡೆದಿದ್ದ ಶ್ರೀಧರಪುರದ ಸಮಾಧಿ  ಸ್ಥಳದ ಇತಿಹಾಸ ತಿರುವು ಪಡೆದುಕೊಂಡಿದೆ. ಒಂದು ವೇಳೆ ಇದು ಅರಸರ ಸಮಾಧಿ  ಅಲ್ಲವೆಂದಾದರೆ.. ಅವರ ಸಮಾಧಿಗಳು ಎಲ್ಲಿವೆ.. ಮತ್ತು ಇಲ್ಲಿರುವ ಸಾಲು ಸಾಲು ಸಮಾಧಿಗಳು ಯಾರದ್ದು, ಅಲ್ಲದೆ ಅದರ ಮೇಲೆ ಮಾಸ್ತಿ ವೀರಗಲ್ಲನ್ನು ಏಕೆ ನಿಲ್ಲಿಸಲಾಗಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಒಟ್ಟಾರೆ ಶಿಸ್ತಿನ ಶಿವಪ್ಪನಾಯಕ ಸೇರಿದಂತೆ ಹತ್ತು ಅರಸರ ಸಮಾಧಿ ಎಂದು ಬಿಂಬಿತವಾಗಿದ್ದ ಸಮಾಧಿ ಸ್ಥಳ ಮತ್ತೆ ಸುದ್ದಿಯಾಗಿದೆ. ಈ ನಡುವೆ ಸಮಾಧಿ ಸ್ಥಳಕ್ಕೆ ಜೀರ್ಣೋದ್ಧಾರಕ್ಕಾಗಿ 50 ಲಕ್ಷ ಹಣದ
ಪ್ರಸ್ತಾವನೆ ಸಲ್ಲಿಸಲಾಗಿದೆ. ಜೀರ್ಣೋದ್ಧಾರದ ವೇಳೆ ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಬೇಕು. ಅಲ್ಲದೆ ಉಳಿದ ಸಮಾಧಿಗಳ ಬಗ್ಗೆ ಕೂಡ ಮಾಹಿತಿ ಸಂಗ್ರಹಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಸಮಾಧಿ ಮೇಲಿನ ಮಾಸ್ತಿ ವೀರಗಲ್ಲಿನ ಮೇಲೆ ಸಿಕ್ಕಿರುವ ಮಾಹಿತಿ ಪ್ರಕಾರ ಸಮಾಧಿಯಲ್ಲಿನ ವ್ಯಕ್ತಿಗಳ ಬಗ್ಗೆ ಬೇರೆಯದೆ ಚಿತ್ರಣವನ್ನು ಕೊಡುತ್ತದೆ. ಇದು ತಾತ್ಕಾಲಿಕ ಪಠ್ಯ ಅಧ್ಯಯನ. ಇದನ್ನು ಇನ್ನಷ್ಟು ಸಂಶೋಧನೆಗೆ ಒಳಪಡಿಸಿ ನಿಖರ ಮಾಹಿತಿಯನ್ನು ಕಲೆಹಾಕಬೇಕಿದೆ.
ಡಾ| ಅನಿಲಕುಮಾರ್‌,
ಶಾಸನ ತಜ್ಞರು

ಶ್ರೀಧರಪುರದ ಕೊಪ್ಪಲು ಮಠದಲ್ಲಿರುವ ಅರಸರ ಸಮಾಧಿಗಳು ಕೆಳದಿ ಅರಸರ ಸಮಾಧಿಗಳು ಎಂದು ಹಿಂದಿನ ಸಂಶೋಧನೆಗಳು ಹೇಳಿವೆ. ಅಲ್ಲದೆ ಕೆಳದಿ ದಾಖಲೆ ಮತ್ತು ಪ್ರಾಚೀನ ಗ್ರಂಥಗಳ ಉಲ್ಲೇಖ ಕೂಡ ಇದಕ್ಕೆ ಪೂರಕವಾಗಿದೆ. ಆದರೆ ಸಮಗ್ರ ಸಂಶೋಧನೆ ನಡೆಸದೆ ಇರುವ ಇತಿಹಾಸವನ್ನು ತಿರುವಿಗೆ ಒಳಪಡಿಸುವುದು ಸಾಧು ಕ್ರಮವಲ್ಲ.
ಅಂಬ್ರಯ್ಯಮಠ,
ನಗರ, ಇತಿಹಾಸ ತಜ್ಞರು.

ಈಗ ಸಿಕ್ಕಿರುವ ಪಠ್ಯ ದಾಖಲೆ ಪ್ರಕಾರ ಇದು ಅರಸರ ಸಮಾ ಧಿ ಅಲ್ಲ ಎಂದು ಕೊಳ್ಳೋಣ. ಹಾಗಾದರೆ ಶಿವಪ್ಪ ನಾಯಕ ಸೇರಿದಂತೆ ಉಳಿದ ಅರಸರ ಸಮಾಧಿ  ಎಲ್ಲಿದೆ. ಇಲ್ಲಿರುವ ಸಮಾ ಧಿಗಳು ಯಾರದ್ದು, ಈ ಬಗ್ಗೆ ಸಮಗ್ರ ಸಂಶೋಧನೆ ನಡೆಸಬೇಕು
ಪ್ರೊ| ಕೆ.ಜಿ.ವೆಂಕಟೇಶ್‌,
ಇತಿಹಾಸ ತಜ್ಞ

ಈಗಾಗಲೇ ಅರಸರ ಸಮಾಧಿ  ಸ್ಥಳದ ಜೀರ್ಣೋದ್ಧಾರಕ್ಕೆ 50 ಲಕ್ಷದ ಪ್ರಸ್ತಾವನೆಯನ್ನು ಇಲಾಖೆಗೆ ಸಲ್ಲಿಸಲಾಗಿದೆ. ಜೀರ್ಣೋದ್ಧಾರದ ಸಂದರ್ಭದಲ್ಲಿ ಸಮಾಧಿ  ಮತ್ತು ಪಠ್ಯದ ಬಗ್ಗೆ ಮತ್ತಷ್ಟು ಮಾಹಿತಿ ಸಿಗುವ ಸಾಧ್ಯತೆ ಇದೆ. ನಂತರವಷ್ಟೇ ಈ ಬಗ್ಗೆ ನಿರ್ಣಯಕ್ಕೆ ಬರಲು ಸಾಧ್ಯ.
ಆರ್‌.ಶೇಜೇಶ್ವರ್‌,
ನಿರ್ದೇಶಕರು ರಾಜ್ಯ ಪುರಾತತ್ವ ಇಲಾಖೆ, ಶಿವಮೊಗ್ಗ

„ಕುಮುದಾ ನಗರ

Advertisement

Udayavani is now on Telegram. Click here to join our channel and stay updated with the latest news.

Next