Advertisement

ಸಂತ್ರಸ್ತರಿಗೆ ಮನೆಯೂ ಇಲ್ಲ.. ಹಕ್ಕು ಪತ್ರವೂ ಇಲ್ಲ …

12:57 PM Dec 07, 2019 | Naveen |

ಕುಮುದಾ ನಗರ
ಹೊಸನಗರ:
ಈ ಹಿಂದೆ ಸುರಿದ ಮಹಾಮಳೆಗೆ ಸಂತ್ರಸ್ತಗೊಂಡ ನಾಲ್ಕು ಕುಟುಂಬಗಳಿಗೆ ಹಕ್ಕುಪತ್ರವೂ ಸಿಕ್ಕಿಲ್ಲ.. ವಾಸಿಸಲು ಮನೆಯೂ ಇಲ್ಲ ಎಂಬಂತಾಗಿದೆ. ನಾಲ್ಕು ದಶಕದಿಂದ ವಾಸಿಸುತ್ತಿರುವ ಕೊರಗ ಸಮುದಾಯದ ಕುಟುಂಬಗಳು ಅತಂತ್ರದಲ್ಲೇ ಜೀವನ ಸಾಗಿಸಿಕೊಂಡು ಬರುತ್ತಿದ್ದರೂ ನಮ್ಮ ಗೋಳು ಕೇಳ್ಳೋರು ಯಾರೂ ಇಲ್ಲ ಎಂಬುದು ಅವರ ಅಳಲು.

Advertisement

ಹೌದು, ಇದು ಹೊಸನಗರ ತಾಲೂಕಿನ ನಗರದ ಚಿಕ್ಕಪೇಟೆಯ ಹೆದ್ದಾರಿ ಪಕ್ಕದಲ್ಲಿ ವಾಸವಾಗಿರುವ ಕೊರಗ ಸಮುದಾಯದ ನಾಲ್ಕು ಕುಟುಂಬಗಳ ಅಳಲು. ನಮಗೆ ವಾಸಿಸಲು ಸೂಕ್ತ ಮನೆ ಕಟ್ಟಿಸಿಕೊಡಿ ಎಂದು ಗೋಗರೆಯುತ್ತಿದ್ದರೂ ಇದುವರೆಗೂ ಸಿಕ್ಕಿಲ್ಲ ನ್ಯಾಯ. ನಾವು ಮನುಷ್ಯರು ಅಲ್ವಾ.. ನಮಗೆ ಬದುಕುವ ಹಕ್ಕಿಲ್ಲವೇ ಎಂದು ಪ್ರಶ್ನಿಸುತ್ತಿವೆ ಆ ಕುಟುಂಬಗಳು.

ಹೆದ್ದಾರಿ ಪಕ್ಕದಲ್ಲಿ ನಾಲ್ಕು ಕುಟುಂಬಗಳು: ರಾಣೇಬೆನ್ನೂರು- ಬೈಂದೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಾಲ್ಕು ಕೊರಗ ಸಮುದಾಯದ ಕುಟುಂಬಗಳು ಕಳೆದ ನಾಲ್ಕು ದಶಕದಿಂದ ವಾಸವಾಗಿವೆ. ಆದರೆ ವಾಸದ ಮನೆಯ ಹಕ್ಕುಪತ್ರ ಮಾತ್ರ ಸಿಕ್ಕಿಲ್ಲ. ಹಾಗಾಗಿ ಬದುಕಿಗೆ ಬ್ಯಾಂಕಿನ ವ್ಯವಹಾರದ ಲಾಭ ಪಡೆಯಲು ಈ ಕುಟುಂಬಗಳಿಗೆ ಸಾಧ್ಯವಿಲ್ಲ. ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ಸನಂ 63 ರಲ್ಲಿ ವಾಸಿಸುತ್ತಿದ್ದು ಮನೆಯ ಹಕ್ಕುಪತ್ರ ನೀಡಲು ಅರಣ್ಯ ಹಕ್ಕು ಕಾಯ್ದೆಯ ಸಮಸ್ಯೆ ಇದೆ. ಆದಷ್ಟು ಬೇಗ ಬಗೆಹರಿಸುತ್ತೇವೆ ಎಂಬ ಭರವಸೆ ಮಾತ್ರ ನಿರಂತರವಾಗಿ ಬರುತ್ತಿವೆ.
ಆದರೆ. ಈ ಕುಟುಂಬಗಳು ವಾಸಿಸುವ ಪಕ್ಕದಲ್ಲೇ ಇರುವ ಮದ್ಯದಂಗಡಿ ಆರಂಭವಾಗಿದ್ದ ಕಟ್ಟಡಕ್ಕೆ 2003ರಲ್ಲೇ ಹಕ್ಕುಪತ್ರ ನೀಡಲಾಗಿದೆ. ಇದು ಹೇಗೆ ಸ್ವಾಮಿ ಎಂಬುದು ಆ ಕುಟುಂಬಗಳ ಪ್ರಶ್ನೆ.

ಮಳೆಗೆ ಬಿತ್ತು ಮನೆ: ಈ ಬಾರಿ ಸುರಿದ ಭಾರೀ ಮಳೆಗೆ ಇಲ್ಲಿ ವಾಸಿಸುತ್ತಿದ್ದ ನಾಲ್ಕು ಕುಟುಂಬಗಳು ಸಂತ್ರಸ್ತರಾಗಿ ನಿರಾಶ್ರಿತ ಕೇಂದ್ರದ ಆಸರೆ ಪಡೆದುಕೊಂಡಿದ್ದವು. ಸುನೀತಾ ಬಂಗಾರಿ ಎಂಬುವವರ ಮನೆ ಮೇಲೆ ಮರ ಬಿದ್ದು ಸಂಪೂರ್ಣ ಧ್ವಂಸವಾಗಿತ್ತು. ಗೀತಾ ಉದಯ, ಸರೋಜ ಸುರೇಶ್‌ ಮತ್ತು ಸುಬ್ರಹ್ಮಣ್ಯರಿಗೆ ಸೇರಿದ ಮನೆಗಳು ಅಪಾಯಕ್ಕೆ ಸಿಲುಕಿದ ಕಾರಣ ನಾಲ್ಕು ಕುಟುಂಬಗಳನ್ನು ಬಂಡಿಮಠದಲ್ಲಿರುವ ಸರ್ಕಾರಿ ಕ್ವಾರ್ಟರ್ಸ್‌ಗೆ ಸ್ಥಳಾಂತರಿಸಲಾಗಿತ್ತು. ಅಲ್ಲದೆ ಕೂಡ ಮನೆ ಕಟ್ಟಿಸಿಕೊಡುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದರು. ಆದರೆ ಕ್ವಾರ್ಟರ್ಸ್‌ನಲ್ಲಿ ವಾಸವಾಗಿದ್ದ ಸುನೀತಾ ಬಂಗಾರಿ ಹೊರತು ಪಡಿಸಿ ಉಳಿದವರನ್ನು ಅಲ್ಲಿಂದ ವಾಪಸ್‌ ಕಳುಹಿಸಲಾಗಿದೆ ಎಂದು ಆ ಕುಟುಂಬಗಳು ಅಳಲು ತೋಡಿಕೊಂಡಿವೆ.

ಅಪಾಯಕ್ಕೆ ಅಹ್ವಾನ: ಭೀಕರ ಮಳೆಗೆ ಮರದ ಜೊತೆಗೆ ಧರೆಯು ಕುಸಿದು ಕೂದಲೆಳೆ ಅಂತರದಲ್ಲಿ ಈ ಕುಟುಂಬಗಳು ಪ್ರಾಣಾಪಾಯದಿಂದ ಬಚಾವಾಗಿದ್ದವು. ಈಗ ಮಳೆ ನಿಂತಿದೆ. ಮತ್ತೆ ಅದೇ ಮನೆಗಳಲ್ಲಿ ವಾಸಿಸುವುದು ಅನಿವಾರ್ಯವಾಗಿದೆ. ಬಿರುಕು ಬಿಟ್ಟ ಗೋಡೆ, ಶಿಥಿಲಗೊಂಡಿರುವ ಮೇಲುಹೊದಿಕೆಯಿಂದಾಗಿ ದಿನರಾತ್ರಿ ಆತಂಕದಲ್ಲೇ ಬದುಕುವಂತಾಗಿದೆ. ಮನೆಗಾಗಿ ಮೂಡುಗೊಪ್ಪ ಗ್ರಾಪಂ, ನಾಡಕಚೇರಿ, ತಾಲೂಕು ಕಚೇರಿ ಅಲೆದು
ಅಲೆದು ಸುಸ್ತಾಗಿದೆ ಎಂದು ಸರೋಜ ಸುರೇಶ್‌ ಆಕ್ರೋಶ ವ್ಯಕ್ತಪಡಿಸುತ್ತಾರೆ.

Advertisement

ನಮಗೂ ಮನೆಗಾಗಿ ಬೇಡಿಕೆ ಇಟ್ಟು ಸಾಕುಸಾಕಾಗಿದೆ. ನಾವು ಕೂಡ ಮನುಷ್ಯರು ನಮಗೂ ಬದುಕಲು ಅವಕಾಶ ಕೊಡಿ. ಇಲ್ಲವಾದರೆ ಗ್ರಾಪಂ ಮುಂಭಾಗದಲ್ಲೇ ಟೆಂಟು ಹಾಕಿ ಕೂರುತ್ತೇವೆ. ಅಲ್ಲೆ ಅಡುಗೆ ಮಾಡಿ ಉಣ್ಣುತ್ತೇವೆ. ಜಿಲ್ಲಾಧಿಕಾರಿಗಳು ನಮ್ಮ ಕಡೆ ನೋಡಲಿ.
ಗೀತಾ ಉದಯ, ಸಂತ್ರಸ್ತರು

ಅಧಿಕಾರಿಗಳು ಬರುತ್ತಾರೆ. ಫೋಟೋ ತೆಗೆದುಕೊಂಡು ಹೋಗುತ್ತಾರೆ ಅಷ್ಟೆ. ಮನೆ ಬಗ್ಗೆ ಕೇಳಿದರೆ ಯಾವುದೇ ಉತ್ತರ ಕೊಡಲ್ಲ. ಹೀಗಾದ್ರೆ ಹೇಗೆ ಸ್ವಾಮಿ. ರಾತ್ರಿ ವೇಳೆ ಭಯದಲ್ಲಿ ಬದುಕುತ್ತಿದ್ದು ಕೂಡಲೇ ನಮಗೆ ಸ್ಪಂದಿಸಲಿ.
ಸುರೇಶ್‌ ಚಿಕ್ಕಪೇಟೆ, ಸಂತ್ರಸ್ತರು

Advertisement

Udayavani is now on Telegram. Click here to join our channel and stay updated with the latest news.

Next