ಹೊಸನಗರ: ಅವಶ್ಯವಾಗಿ ಕರೆಯಲಾಗಿರುವ ತಾಪಂ ಸಭೆಗಳಿಗೆ ಆಗಮಿಸುವ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸಂಪೂರ್ಣ ಮಾಹಿತಿ ಹೊತ್ತು ತರಬೇಕು. ಕೈ ಬೀಸಿಕೊಂಡು ಸಭೆಗೆ ಬಂದರೆ ಏನು ಉಪಯೋಗ. ಮಾಹಿತಿ ತರದ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಾಪಂ ಅಧ್ಯಕ್ಷ ವೀರೇಶ ಆಲುವಳ್ಳಿ ತಾಕೀತು ಮಾಡಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲೂಕು ವ್ಯಾಪ್ತಿಯ ಗ್ರಾಪಂಗಳಲ್ಲಿ ಸ್ಮಶಾನ ಮೀಸಲು ಪ್ರದೇಶ, ಆಶ್ರಯ ನಿವೇಶನ ಪ್ರದೇಶ ಹಾಗೂ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಕುರಿತಂತೆ ಸಭೆಯಲ್ಲಿ ಮಾಹಿತಿ ಸಂಗ್ರಹಿಸಲಾಗಿದ್ದು ಕೆಲ ತಾಲೂಕು ಕಚೇರಿ ಅಧಿ ಕಾರಿಗಳು ಮತ್ತು ಗ್ರಾಪಂ ಅಧಿಕಾರಿಗಳಿಂದ ಮರ್ಪಕ ಉತ್ತರ ಬಾರದಿದ್ದನ್ನು ಗಮನಿಸಿದ ಅಧ್ಯಕ್ಷ ವೀರೇಶ ಆಲವಳ್ಳಿ “ಸಭೆಗೆ ಮಾಹಿತಿಯೊಂದಿಗೆ ಬನ್ನಿ.. ಇಲ್ಲಿ ಸುಮ್ಮನೆ ಸಭೆ ಕರಯಲಾಗಿಲ್ಲ. ಇದು ಹೀಗೆ ಮುಂದುವರಿದರೆ ಸರಿ ಇರಲ್ಲ. ಏನೆಂದು ತಿಳಿದುಕೊಂಡಿದ್ದೀರಾ?.. ಎಂದು ಗದರಿದರು.
ಸರ್ಕಾರಿ ಬೋರ್‌ನಲ್ಲಿ ನೀರಿಲ್ಲ: ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮಗಳ ಕುಡಿಯುವ ನೀರು ನಿರ್ವಹಣೆಗಾಗಿ ತೆಗೆಸಲಾದ ಬೋರ್‌ವೆಲ್‌ನಲ್ಲಿ ಹನಿ ನೀರು ಬರುತ್ತಿಲ್ಲ. ಜಿಯಾಲಿಸ್ಟ್ ಗುರುತಿಸಿದ ಜಾಗದಲ್ಲಿ ಬೋರ್ ತೆಗೆಸಿದರೆ ಅದು ಫೇಲ್ ಆಗುತ್ತಿದೆ. ಇನ್ನು ನೀರು ಕೊಡುವುದು ಹೇಗೆ. ಖಾಸಗಿ ವ್ಯಕ್ತಿಗಳ ಬೋರ್‌ನಲ್ಲಿ ನೀರು ಬರುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಬೇಕು ಎಂದು ಹರಿದ್ರಾವತಿ ಗ್ರಾಪಂ ಅಧ್ಯಕ್ಷ ವಾಟಗೋಡು ಸುರೇಶ್ ಒತ್ತಾಯಿದರು.
ಇದಕ್ಕೆ ಬೆಂಬಲ ಸೂಚಿಸಿದ ಎಲ್ಲಾ ಗ್ರಾಪಂ ಅಧ್ಯಕ್ಷರು “ಬೋರ್‌ನಲ್ಲಿ ನೀರಿಲ್ಲ. ನೀರಿದ್ದರೂ ಕರೆಂಟಿಲ್ಲ.. ಮೆಸ್ಕಾಂ ಅಧಿ ಕಾರಿಗಳನ್ನು ಸಭೆಗೆ ಕರೆಸಿ’ ಎಂದು ಒತ್ತಾಯಿಸಿದರು.
ಕೊಳವೆ ಬಾವಿ ಸೂಕ್ತ: ಮಲೆನಾಡ ಪ್ರದೇಶವಾದ ಹೊಸನಗರ ತಾಲೂಕಿನಲ್ಲಿ ಟ್ಯಾಂಕರ್ ಮೂಲಕ ನೀರು ಕೊಡುವುದು ಸುಲಭವಲ್ಲ. ಇದರಲ್ಲಿ ಹತ್ತಾರು ಗೊಂದಲವಿದೆ. ಬದಲಿಗೆ ಕೊಳವೆ ಬಾವಿಯೇ ಸೂಕ್ತ. ಅಗತ್ಯವಿದ್ದಲ್ಲಿ ಕೊಳವೆ ಬಾವಿ ಕೊರೆಸಿ ನೀರು ಹಂಚಿಕೆ ಮಾಡಿರಿ ಎಂದು ತಾಪಂ ಅಧ್ಯಕ್ಷ ವೀರೇಶ ಆಲವಳ್ಳಿ ಸೂಚಿಸಿದರು.