Advertisement

ಕ್ಷೇತ್ರ ಶಿಕ್ಷಣಾಧಿಕಾರಿ- ಶಿಕ್ಷಕರ ವಿರುದ್ಧ ಪ್ರತಿಭಟನೆ

04:17 PM Jul 17, 2019 | Naveen |

ಹೊಸನಗರ: ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಿಕ್ಷಕರು ಸರ್ಕಾರಿ ಶಾಲೆಯ ಶೈಕ್ಷಣಿಕ ಪ್ರಗತಿಗೆ ಅಸಹಕಾರ ಮಾಡುತ್ತಿದ್ದಾರೆ ಎಂದು ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪೋಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

Advertisement

ಸರ್ಕಾರಿ ಶಾಲೆಗಳಿಗೆ ನಿಯಮದ ಕುಂಟು ನೆಪ ಹೇಳಿ, ಖಾಸಗಿ ಶಾಲೆಗಳಿಗೆ ಪರೋಕ್ಷವಾಗಿ ಉತ್ತೇಜನ ನೀಡುತ್ತಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ವರ್ತನೆಯನ್ನು ಅವರು ಖಂಡಿಸಿದರು.

ಸರ್ಕಾರಿ ಆದೇಶದಂತೆ ಎಲ್ಕೆಜಿ ಆರಂಭಿಸಿದ್ದು ಪೋಷಕರಿಂದ ಉತ್ತಮ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಸುಮಾರು 58 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಸರ್ಕಾರಿ ನಿಯಮದಂತೆ ತಲಾ 25 ವಿದ್ಯಾರ್ಥಿಗೆ ಒಂದು ತರಗತಿಯಂತೆ 2 ಸೆಕ್ಷನ್‌ ತೆರೆಯುವ ಅವಶ್ಯಕತೆ ಇದ್ದರೂ ಸಹ ಅಧಿಕಾರಿಗಳು ಇದಕ್ಕೆ ಸ್ಪಂದಿಸುತ್ತಿಲ್ಲ ಎಂಬುದು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿತ್ತು.

4 ವರ್ಷಗಳ ಹಿಂದೆ ಕೇವಲ 160 ವಿದ್ಯಾರ್ಥಿಗಳಿದ್ದ ಈ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಶ್ರಮದಿಂದಾಗಿ ಈಗ 450ಕ್ಕೂ ಮೀರಿ ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಈ ವರ್ಷ ತಾಲೂಕಿನಲ್ಲಿ 4 ಸರ್ಕಾರಿ ಪ್ರಾಥಮಿಕ ಶಾಲೆಗೆ ಆಂಗ್ಲ ಮಾಧ್ಯಮ ಮಂಜೂರಾಗಿದ್ದು, ಪಟ್ಟಣದ ಹೃದಯ ಭಾಗದಲ್ಲಿರುವ ಈ ಶಾಲೆಯು ಸಹ ಒಂದಾಗಿದೆ ಎಂದರು.

Advertisement

ಹೆಚ್ಚುವರಿ ವಿದ್ಯಾರ್ಥಿಗಳನ್ನು ದಾಖಲೆ ಮಾಡಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳ ಆದೇಶ ಇದ್ದರೂ ಸಹ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಮುಖ್ಯ ಶಿಕ್ಷಕಿ ಉತ್ಸಾಹ ತೋರಿಸುತ್ತಿಲ್ಲ ಎಂದು ದೂರಿದರು.

ಪಟ್ಟಣದ ಬಹುತೇಕ ಖಾಸಗಿ ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮಕ್ಕೆ ಅನುಮತಿ ಇಲ್ಲದಿದ್ದರೂ ಸಹ ಆಮಿಷ‌ಕ್ಕೆ ಬಲಿಯಾದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅವರ ಮೇಲೆ ಕ್ರಮ ಜರುಗಿಸುತ್ತಿಲ್ಲ. ಅಧಿಕೃತ ಆಂಗ್ಲ ಮಾಧ್ಯಮ ಶಾಲೆಗೆ ಕಿರುಕುಳ ನೀಡುತ್ತಿದ್ದಾರೆ ಎಂದರು.

ಖಾಸಗಿ ಶಾಲೆಯಲ್ಲಿ ಇರುವಂತೆ ತಮ್ಮ ಸರ್ಕಾರಿ ಶಾಲೆಯಲ್ಲಿಯೂ ಸಹ ಹಳ್ಳಿ ಮಕ್ಕಳ ಅನುಕೂಲಕ್ಕಾಗಿ ವಾಹನ ವ್ಯವಸ್ಥೆ ಮಾಡಲಾಗಿದೆ. ಶಾಲಾ ವಾಹನ ನೋಂದಣಿಯನ್ನು ತಮ್ಮ ಶಾಲೆಯ ಹೆಸರಿನಲ್ಲಿ ಮಾಡಲು ಮುಖ್ಯ ಶಿಕ್ಷಕಿ ಹಿಂಜರಿಯುತ್ತಿದ್ದಾರೆ. ಇದರಿಂದ ಬಡ ಮಕ್ಕಳಿಗೆ ಹೆಚ್ಚಿನ ಆರ್ಥಿಕ ಹೊರೆ ಆಗುತ್ತಿದೆ ಎಂದು ಅವರು ಆರೋಪಿಸಿದರು.

ಖಾಸಗಿ ಶಾಲೆಗಳನ್ನು ಓಲೈಸುತ್ತಿರುವ ಹಾಗೂ ಸರ್ಕಾರಿ ಶಾಲೆಗಳನ್ನು ಕಡೆಗಣಿಸುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಿಕ್ಷಕಕರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಕೆ.ಕೆ. ಅಶ್ವಿ‌ನಿಕುಮಾರ, ಸದಸ್ಯರಾದ ಸತ್ಯನಾರಾಯಣ, ಗೌತಮ ಕೆ. ಆಚಾರ್ಯ, ನಾಸಿರ್‌, ರಾಜು, ತಾಪಂ ಸದಸ್ಯ ಏರಗಿ ಉಮೇಶ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next